ಬಾಳೆಹೊನ್ನೂರು: ಮಲೆನಾಡಿನಲ್ಲಿರುವ ಹುಲಿ ಯೋಜನೆ, ಅಭಯಾರಣ್ಯ, ಉದ್ಯಾನ ಸೇರಿದಂತೆ ಹಲವು ಯೋಜನೆಗಳ ಮೂಲಕ ಕಾಡನ್ನು ಉಳಿಸಲು ಸಾಧ್ಯವಿದೆ. ಆದರೆ ಕಸ್ತೂರಿರಂಗನ್‌ನಂತಹ ಮಾರಕ ಯೋಜನೆ ಮಲೆನಾಡಿಗೆ ಅವಶ್ಯಕತೆಯಿಲ್ಲ ಎಂದು ನಾಗರಿಕ ವೇದಿಕೆ ಸಂಚಾಲಕ ಹಿರಿಯಣ್ಣ ಹೇಳಿದರು.
ಬಿ.ಕಣಬೂರು ಗ್ರಾಪಂ ಸಭಾಂಗಣದಲ್ಲಿ ಕಸ್ತೂರಿರಂಗನ್ ವರದಿಯ ಕರಡು ಅಧಿಸೂಚನೆಗೆ ಆಕ್ಷೇಪ ವ್ಯಕ್ತಪಡಿಸಲು ಬುಧವಾರ ಏರ್ಪಡಿಸಿದ್ದ ವಿಶೇಷ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.
1915ರಲ್ಲಿ ಬ್ರಿಟಿಷರು ಅರಣ್ಯ ಕಾಯ್ದೆಗಳನ್ನು ತಂದು ಅರಣ್ಯವನ್ನು ಉಳಿಸುವ ಕೆಲಸ ಮಾಡಿದ್ದಾರೆ. ಆ ಕಾಯ್ದೆಯನ್ವಯ ನಾವೂ ಅರಣ್ಯ ಉಳಿಸಬೇಕಿದೆ. ಇದರ ಬಗ್ಗೆ ನಮ್ಮ ತಕರಾರು ಇಲ್ಲ. ಶೇ.33 ಅರಣ್ಯ ಇರಬೇಕು ಎಂಬುದು ಅರಣ್ಯ ಕಾಯ್ದೆಯಾಗಿದೆ. ಹಿಂದಿನ ಯೋಜನೆಗಳು ಕೆಲ ವ್ಯಾಪ್ತಿಗೆ ಸೀಮಿತವಾಗಿರುತ್ತಿದ್ದವು. ಆದರೆ ಕಸ್ತೂರಿ ರಂಗನ್ ಯೋಜನೆಯಲ್ಲಿ ಎಲ್ಲ ಕೃಷಿ ಚಟುವಟಿಕೆಗಳಿಗೆ ನಿರ್ಬಂಧ ಹೇರುವುದರೊಂದಿಗೆ ಹಲವು ಸಮಸ್ಯೆಗಳು ತರಲಿವೆ. ಕಸ್ತೂರಿ ರಂಗನ್ ವರದಿ ಉಪಗ್ರಹ ಆಧಾರಿತವಾಗಿ ಸರ್ವೇ ಮಾಡಿದ್ದು ಅಡಕೆ, ಕಾಫಿ ತೋಟ, ಗದ್ದೆಯನ್ನೂ ಅರಣ್ಯ ಎಂದು ಉಲ್ಲೇಖಿಸಿದ್ದಾರೆ. ಭೌತಿಕವಾದ ಸರ್ವೇ ಮಾಡಿಲ್ಲ. ಸುಮಾರು 60 ಸಾವಿರ ಹೆಕ್ಟೇರ್ ಭೂಮಿಯನ್ನು ಯೋಜನೆಯಡಿ ಗುರುತಿಸಿದ್ದು ರಾಜ್ಯದಲ್ಲಿ 20 ಸಾವಿರ ಹೆಕ್ಟೇರ್ ಗುರುತಿಸಿಕೊಂಡಿದ್ದಾರೆ ಎಂದರು.
ಇದರಿಂದ ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಮಾಡಲು ಸಾಧ್ಯವಿಲ್ಲ. ಪರಿಸರ ಸೂಕ್ಷ್ಮ ಜೀವಿಗಳಿಗೆ ಮಾನವರು ಉಪಯೋಗಿಸುವ ರಸಗೊಬ್ಬರ ಮುಂತಾದವುಗಳಿಂದ ತೊಂದರೆಯಾಗಲಿದೆ, ಪರಿಸರಕ್ಕೆ ಧಕ್ಕೆಯಾಗಲಿದೆ ಎಂದು ಕಸ್ತೂರಿ ರಂಗನ್ ವರದಿ ಹೇಳಿದೆ.
ಈ ಬಗ್ಗೆ ಚಿಂತನೆ ಮಾಡಬೇಕಿದೆ. ಯಾವುದೇ ಚಟುವಟಿಕೆ ಮಾಡದಿದ್ದರೆ ಕೃಷಿ ನಡೆಸಲು ಅಸಾಧ್ಯವಾಗಲಿದೆ. ಎನ್‌ಜಿಒಗಳು ಪರಿಸರದ ಬಗ್ಗೆ ವಿಶೇಷ ಕಾಳಜಿ ವಹಿಸಿ ಸುಪ್ರೀಂ ಕೋರ್ಟ್‌ನ ಹಸಿರು ಪೀಠದ ಮೂಲಕ ಯೋಜನೆ ಜಾರಿಗೆ ಒತ್ತಡ ತರುತ್ತಿದ್ದು ಯೋಜನೆ ವ್ಯಾಪ್ತಿಗೆ ಬರುವ ಆರು ರಾಜ್ಯಗಳು ಯೋಜನೆಗೆ ವಿರೋಧ ಮಾಡಿರುವುದರಿಂದ ಯೋಜನೆ ಜಾರಿಯಲ್ಲಿ ವಿಳಂಬವಾಗಿದೆ ಎಂದು ತಿಳಿಸಿದರು.
ಬಿ.ಕಣಬೂರು ಗ್ರಾಪಂ ಉಪಾಧ್ಯಕ್ಷೆ ರಂಜಿತಾ, ಪಿಡಿಒ ಕಾಶಪ್ಪ, ಕಾರ್ಯದರ್ಶಿ ರಾಮಪ್ಪ, ಸದಸ್ಯರಾದ ಬಿ.ಜಗದೀಶ್ಚಂದ್ರ, ಕೋಕಿಲಮ್ಮ, ಎಂ.ಎಸ್.ಅರುಣೇಶ್, ಇಬ್ರಾಹಿಂ ಶಾಫಿ, ರವಿಚಂದ್ರ, ಪ್ರತಿಮಾ, ಕವಿತಾ, ಪ್ರಮುಖರಾದ ಜಾನ್ ಡಿಸೋಜಾ, ಸಿ.ಕೆ.ಶ್ರೀನಿವಾಸ್, ಕೌಶಿಕ್ ಮತ್ತಿತರರಿದ್ದರು.