ನ್ಯೂಸ್

ಕೃಷಿ ಮತ್ತು ಕಾಸಿನ ಸರ: ಮುಖ್ಯಮಂತ್ರಿಯಿಂದ ಟ್ರೇಲರ್​-ಸಾಂಗ್ ರಿಲೀಸ್

ಬೆಂಗಳೂರು: ಎನ್.ಆರ್. ನಂಜುಂಡೇಗೌಡ ನಿರ್ದೇಶನದ ವಿಜಯ್ ರಾಘವೇಂದ್ರ ಮತ್ತು ಹರ್ಷಿಕಾ ಪೂಣಚ್ಚ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚಿತ್ರ ‘ಕಾಸಿನ ಸರ’. ಈಗಾಗಲೇ ಚಿತ್ರೀಕರಣ ಮುಗಿದಿದ್ದು ಇತ್ತೀಚೆಗೆ ಚಿತ್ರದ ಟ್ರೖೆಲರ್ ಮತ್ತು ಹಾಡುಗಳನ್ನು ಸಿಎಂ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದ್ದಾರೆ.

ನಂತರ ಮಾತನಾಡಿರುವ ಅವರು, ‘ಹಳ್ಳಿಯ ಬದುಕು ಬಹಳ ಸೊಗಸಾದುದು. ಪ್ರತಿಯೊಬ್ಬರೂ ಸುಖ ದುಃಖಗಳಲ್ಲಿ ಭಾಗಿಯಾಗುತ್ತಾರೆ. ಈ ರೀತಿಯ ಜೀವನ ನಮ್ಮ ದೇಶದಲ್ಲಿ ಬಿಟ್ಟು ಬೇರೆಲ್ಲೂ ಇಲ್ಲ. ಕೃಷಿ ಕಾಯಕ ಪವಿತ್ರವಾದುದು. ಅನಿಶ್ಚಿತತೆಯ ಮಧ್ಯೆ ಭರವಸೆ, ಇದು ಭೂಮಿತಾಯಿಯ ಬಳುವಳಿ. ಒಂದು ಕಾಳು ಹಾಕಿದರೆ ನೂರಾರು ಕಾಳು ವಾಪಸ್ ಬರುತ್ತದೆ’ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು.

ಚಿತ್ರದಲ್ಲಿ ವಿಜಯ್ ರಾಘವೇಂದ್ರ ಒಬ್ಬ ಪ್ರಗತಿಪರ ರೈತನಾಗಿ ಕಾಣಿಸಿಕೊಂಡಿದ್ದು, ‘ರೈತನ ಪಾತ್ರ ಸಿಗುವುದು ಅಪರೂಪ. ಸುಂದರೇಶ್ ಎಂಬ ರೈತ ಹೋರಾಟಗಾರನ ಪಾತ್ರದಲ್ಲಿ ನಟಿಸಿದ್ದೇನೆ’ ಎಂದು ಮಾಹಿತಿ ಹಂಚಿಕೊಂಡರು. ನಾಯಕಿ ಹರ್ಷಿಕಾ ಪೂಣಚ್ಚ, ‘ಈ ಚಿತ್ರದಲ್ಲಿ ನಾನು ಸಂಪಿಗೆ ಎಂಬ ಕೃಷಿ ವಿದ್ಯಾರ್ಥಿನಿ ಪಾತ್ರದಲ್ಲಿ ನಟಿಸಿದ್ದೇನೆ. ಈಗಿನ ಹುಡುಗಿಯರು ಓದು ಮುಗಿಸಿ ಐಟಿ ಕಂಪನಿಗಳಲ್ಲಿ, ವಿದೇಶಗಳಲ್ಲಿ ಕೆಲಸ ಹುಡುಕುತ್ತಾರೆ. ಆದರೆ, ನಾನು ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಅಭಿನಯಕ್ಕೆ ಸಾಕಷ್ಟು ಪ್ರಾಮುಖ್ಯತೆ ಇರುವ ಪಾತ್ರ’ ಎಂದು ಹೇಳಿಕೊಂಡರು.