SIA Raid: ಜಮ್ಮು-ಕಾಶ್ಮೀರದಲ್ಲಿ 35 ವರ್ಷಗಳ ಹಿಂದೆ ನಡೆದ ಕಾಶ್ಮೀರಿ ಪಂಡಿತ ಮಹಿಳೆಯೊಬ್ಬರ ಹತ್ಯೆಯ ತನಿಖೆಗೆ ಸಂಬಂಧಿಸಿ ಮಂಗಳವಾರ(ಆಗಸ್ಟ್ 12) ಮಧ್ಯ ಕಾಶ್ಮೀರದ ಹಲವಾರು ಸ್ಥಳಗಳಲ್ಲಿ ರಾಜ್ಯ ತನಿಖಾ ಸಂಸ್ಥೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ಪಂಡಿತ ಕುಟುಂಬದ ಸರಳ ಭಟ್ ಎಂಬ ಮಹಿಳೆ ಹತ್ಯೆಗೆ ಸಂಬಂಧಿಸಿದಂತೆ ನಿಷೇಧಿತ ಜಮ್ಮು-ಕಾಶ್ಮೀರ ಲಿಬರೇಷನ್ ಫ್ರಂಟ್ (ಜೆಕೆಎಲ್‌ಎಫ್)ನೊಂದಿಗೆ ಈ ಹಿಂದೆ ಸಂಪರ್ಕ ಹೊಂದಿದ ವ್ಯಕ್ತಿಗಳ ನಿವಾಸಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
1990 ಏಪ್ರಿಲ್ನಲ್ಲಿ ಸೌರಾದಲ್ಲಿರುವ ಶೇರ್-ಎ-ಕಾಶ್ಮೀರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಹಾಸ್ಟೆಲ್ನಿಂದ ನಾಪತ್ತೆಯಾಗಿದ್ದ ಸರಳ ಭಟ್, ಬಳಿಕ ಶ್ರೀನಗರದಲ್ಲಿರುವ ಡೌನ್ ಟೌನ್ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಇತ್ತೀಚೆಗೆ ಪ್ರಕರಣದ ತನಿಖೆಯನ್ನು ವಹಿಸಿಕೊಂಡಿರುವ ಏಜೆನ್ಸಿಯ ಅಧಿಕಾರಿಗಳು, ಜೆಕೆಎಲ್‌ಎಫ್‌ನ ಮಾಜಿ ನಾಯಕ ಪೀರ್ ನೂರುಲ್ ಹಕ್ ಶಾ ಅಲಿಯಾಸ್ ಏರ್ ಮಾರ್ಷಲ್ ಅವರ ಮನೆಗಳ ಮೇಲೂ ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಕೇರಳದ ಅಪಾರ್ಟ್ಮೆಂಟ್ನಲ್ಲಿ ನಕಲಿ ಮತದಾರರು ಪತ್ತೆ :ಜಿಲ್ಲಾಧಿಕಾರಿಗಳಿಗೆ ದೂರು ದಾಖಲು | fake voters
ಮೈಸುಮಾದಲ್ಲಿರುವ ಜೆಕೆಎಲ್‌ಎಫ್‌ನ ಮಾಜಿ ಮುಖ್ಯಸ್ಥ ಯಾಸಿನ್ ಮಲಿಕ್ ಅವರ ಮನೆ ಮೇಲೂ ದಾಳಿ ನಡೆದಿದ್ದು, ಡೆಪ್ಯೂಟಿ ಎಸ್‌ಪಿ ಅಬಿದ್ ಹುಸೇನ್, ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮತ್ತು ಇತರ ಪೊಲೀಸರು ಆಗಮಿಸಿದ್ದಾರೆ. ಪ್ರಕರಣದ ಸಂಬಂಧ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ಯಾಸಿನ್ ಮಲಿಕ್ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾನೆ. ಯಾಸಿನ್ ಅವರ ಮಗ ಗುಲಾಮ್ ಖಾದಿರ್ ಮಲಿಕ್ ಕೂಡ ತಿಹಾರ್ ಜೈಲಿನಲ್ಲಿದ್ದಾನೆ. (ಏಜೆನ್ಸೀಸ್)