ಬೆಂಗಳೂರು: ಕರ್ನಾಟಕ ಭಾರತ ಗೌರವ ಕಾಶಿ ದರ್ಶನ ರೈಲು ಯಾತ್ರೆ ಯೋಜನೆಯಡಿ ಪುಣ್ಯ ಕ್ಷೇತ್ರಗಳಾದ ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗ್-ರಾಜ್ ಕ್ಷೇತ್ರಗಳ ಜೊತೆಗೆ ಬಿಹಾರದ ಗಯಾ ಕ್ಷೇತ್ರವನ್ನು ಸೇರಿಸಿರುವ ರಾಜ್ಯ ಸರ್ಕಾರ, ಯಾತ್ರೆಗೆ ನೀಡುತ್ತಿದ್ದ ಸಹಾಯಧನವನ್ನು 5 ಸಾವಿರದಿಂದ 7,500 ರೂ.ಗೆ ಏರಿಸಿ ಆದೇಶ ಹೊರಡಿಸಿದೆ.
ಇದರೊಂದಿಗೆ ಈ ಹಿಂದೆ ಇದ್ದ 8 ದಿನಗಳಿದ್ದ ಪ್ರವಾಸದ ಅವಧಿಯನ್ನು 9 ದಿನಗಳವರೆಗೆ ವಿಸ್ತರಿಸಲಾಗಿದೆ. ಇದರಿಂದ 20 ಸಾವಿರ ರೂ. ಇದ್ದ ಪ್ಯಾಕೇಜ್ ಯಾತ್ರಾ ದರವನ್ನು 22,500 ರೂ.ಗೆ ಏರಿಕೆ ಮಾಡಲಾಗಿದೆ. ಸಹಾಯಧನ 7,500 ರೂ.ಗಳನ್ನು ಸರಕಾರ ಭರಿಸಲಿದೆ. ಈ ವಿಸ್ತರಣೆಯು ಆ.29ರಂದು ಯಾತ್ರೆಯೊಂದಿಗೆ ಆರಂಭವಾಗಲಿದೆ ಎಂದು ರಾಜ್ಯ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಸದರಿ ಪ್ಯಾಕೇಜ್ ಯೋಜನೆಯಲ್ಲಿ ಹೊಸದಾಗಿ ಎಲ್‌ಎಚ್‌ಬಿ ಕೋಚ್‌ಗಳನ್ನು ಅಳವಡಿಸಲಾಗಿದ್ದು, ಇದರಲ್ಲಿ ಸುಸಜ್ಜಿತವಾದ ಅಡುಗೆ ಮನೆ ಹಾಗೂ ಇಬ್ಬರು ವೈದ್ಯರು ಸಹ ಯಾತ್ರಾರ್ಥಿಗಳ ಜತೆಯಲ್ಲಿ ಸೇವಾ ನಿರತರಾಗಿರುತ್ತಾರೆ. ಆ. 29ರಂದು ಹೊರಡಲಿರುವ ಯಾತ್ರೆ ಸೆ. 6ರಂದು ಹಿಂದಿರುಗಲಿದೆ. ಅದೇ ರೀತಿ ಸೆ.23ರಂದು ಹೊರಡುವ ಯಾತ್ರೆ ಅ.2ರಂದು ವಾಪಸಾಗಲಿದೆ. ಈ ಯಾತ್ರೆಗೆ ತುಮಕೂರಿನಲ್ಲಿ ಹೊಸದಾಗಿ ಬೋಡಿರ್ಂಗ್ ಮತ್ತು ಡಿ-ಬೋರ್ಡಿಂಗ್ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ ಎಂದು ಹೇಳಿದರು.
ಕರ್ನಾಟಕ ಭವನ ನಿರ್ಮಾಣ:ಅಯೋಧ್ಯೆಗೆ ಭೇಟಿ ನೀಡುವ ರಾಜ್ಯದ ಭಕ್ತರ ಅನುಕೂಲಕ್ಕಾಗಿ ಕರ್ನಾಟಕ ಭವನದ ವಸತಿ ಸಂಕೀರ್ಣ ನಿರ್ಮಿಸಲು ಉತ್ತರ ಪ್ರದೇಶದ ಮುಖ್ಯಮಂತ್ರಿಯವರಿಗೆ ಸುಮಾರು 5 ಎಕರೆ ಭೂಮಿ ಮಂಜೂರು ಮಾಡುವಂತೆ ಪತ್ರ ಬರೆದು ಕೋರಲಾಗುವುದು ಹಾಗೂ ಸರಕಾರದ ಪ್ರಧಾನ ಕಾರ್ಯದರ್ಶಿಗಳು, ಮುಜರಾಯಿ ಇಲಾಖೆಯವರು ಸಮನ್ವಯ ಸಾಧಿಸಿ ತ್ವರಿತ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ ಎಂದರು.
ರಾಜ್ಯದ ದೇವಸ್ಥಾನಗಳ ಪೂಜಾ ಕಾರ್ಯ ಇತ್ಯಾದಿಗಳ ಕೆಲಸಕ್ಕೆಂದು ಸರಕಾರ ಬಿಡುಗಡೆ ಮಾಡುವ ‘ತಸ್ತಿಕ್’ ಹಣವನ್ನು ನೇರವಾಗಿ ಅರ್ಚಕರ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.