ವಾರಾಣಸಿ(ಉತ್ತರ ಪ್ರದೇಶ): ಮತದಾನ ದೇಶದ ಪ್ರತಿಯೊಬ್ಬ ಪ್ರಜೆಯ ಹಕ್ಕು. ಆದರೆ ಈ ಕರ್ತವ್ಯವನ್ನು ನಿರ್ವಹಿಸದೆ ಬಹಳ ಜನ ಜವಾಬ್ದಾರಿಯಿಂದ ನುಣುಚಿಕೊಂಡ ಟೀಕೆಗೆ ಒಳಗಾಗುತ್ತಾರೆ. ಮತದಾನದ ದಿನದ ರಜೆಯನ್ನು ಅನುಭವಿಸಲು ತಮ್ಮ ಊರಿಂದ ಪರ ಊರಿಗೆ ಪ್ರವಾಸಕ್ಕೆ ಹೋಗುವವರ ಬಹಳ ಜನ ಇದ್ದಾರೆ. ಆದರೆ ಪ್ರವಾಸದಲ್ಲಿದ್ದು ಮತದಾನಕ್ಕಾಗಿ ಸಾವಿರಾರು ಮೈಲು ದೂರದಿಂದ ಸ್ವಸ್ಥಾನಕ್ಕೆ ಆಗಮಿಸುವ ಮೂಲಕ ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಎಲ್ಲರಿಗೂ ಮಾದರಿಯಾಗಿದ್ದಾರೆ.
ದೇಶದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ಲೋಕಸಭೆ ಚುನಾವಣೆಗೆ ತೆರೆ ಬಿದ್ದಿದೆ. ಸುಮಾರು 97 ಕೋಟಿ ಮತದಾರರಿರುವ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಚುನಾವಣೆಯು 7 ಹಂತಗಳಲ್ಲಿ ನಡೆದಿತ್ತು. 7ನೇ ಹಂತದ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸಿರುವ ದೇಶದ ಪ್ರತಿಷ್ಠಿತ ಕ್ಷೇತ್ರವಾಗಿರುವ ವಾರಾಣಸಿ ಮತಕ್ಷೇತ್ರವು ಒಳಗೊಂಡಿದ್ದು ವಿಶೇಷ. ಹಿಂದುಗಳ ಧಾರ್ಮಿಕ ರಾಜಧಾನಿ ಎಂದೇ ಪ್ರಸಿದ್ಧವಾಗಿರುವು ವಾರಾಣಸಿಯಲ್ಲಿರುವ ಪ್ರಾಚೀನ ಜಗದ್ಗುರು ವಿಶ್ವಾರಾಧ್ಯ ಜ್ಞಾನಸಿಂಹಾಸನ ಮಹಾಪೀಠ ಜಂಗಮವಾಡಿ ಮಠದ 86ನೇ ಜಗದ್ಗುರುಗಳಾಗಿರುವ ಶ್ರೀಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಭಕ್ತರ ಭಿನ್ನಹದ ಮೇರೆಗೆ ಕರ್ನಾಟಕ, ಮಹಾರಾಷ್ಟ್ರ ಪ್ರಾಂತ್ಯದಲ್ಲಿ ಸಂಚಾರದಲ್ಲಿದ್ದರು. ಇದೇ ವೇಳೆ ವಾರಾಣಸಿಯಲ್ಲಿ ಮತದಾನದ ದಿನಾಂಕ ನಿಗದಿಯಾಗಿದ್ದು, ಮತದಾನದ ಮಹತ್ವ ಅರಿತ ಪೂಜ್ಯರು ಸಾವಿರಾರು ಮೈಲು ದೂರದ ಮಹಾರಾಷ್ಟ್ರದ ಪುನಾದಿಂದ ಕಾಶಿಗೆ ಆಗಮಿಸಿ ಶನಿವಾರ ಬೆಳಗ್ಗೆ 7 ಗಂಟೆಗೆ ಮತಕೇಂದ್ರ ತೆರೆದ ಕೂಡಲೇ ಸಾಮಾನ್ಯರಂತೆ ಪಾದಯಾತ್ರೆ ಮೂಲಕ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.
ವಿಜಯವಾಣಿಯೊಂದಿಗೆ ಮಾತನಾಡಿದ ಕಾಶೀ ಜಗದ್ಗುರುಗಳು, ದೇಶದ ಪ್ರತಿಯೊಬ್ಬ ನಾಗರೀಕರು ಮತದಾನವನ್ನು ಮಾಡಬೇಕು. ಮತದಾನದ ಬಗ್ಗೆ ನಿರ್ಲಕ್ಷ್ಯ ವಹಿಸುವುದು ದೇಶದ ಅಭಿವೃದ್ಧಿಗೆ ಮಾಡುವ ಬಹುದೊಡ್ಡ ವಂಚನೆ. ಪ್ರಜಾಪ್ರಭುತ್ವದ ಶಕ್ತಿ ಜಗತ್ತಿಗೆ ತಿಳಿಯಬೇಕೆಂದರೆ ಶೇ.100 ಮತದಾನವಾಗಬೇಕು. ಇದರಿಂದ ದೇಶವೂ ಸಬಲವಾಗುತ್ತದೆ. ದೇಶದಲ್ಲಿ ವಾಸಿಸುವ ಪ್ರಜೆಗಳು ಸಬಲರಾಗುತ್ತಾರೆ. ಈ ಬಗ್ಗೆ ಮುಂಬರುವ ದಿನಗಳಲ್ಲಿ ಜನರಿಗೆ ಜಾಗೃತಿ ಮೂಡಿಸಲು ಹೆಚ್ಚು ಪ್ರಯತ್ನಿಸಬೇಕು ಎಂದರು. ನನ್ನದೊಂದು ಮತದಿಂದ ಏನಾಗುತ್ತದೆ ಎಂದು ಹೇಳುವವರ ಸಂಖ್ಯೆ ಹೆಚ್ಚಾಗಿದೆ. ಹೇಳುವವರು ಒಬ್ಬರೇ ಆದರೂ, ಹೀಗೆ ಹೇಳುವವರು ಒಬ್ಬರೇ ಇರುವುದಿಲ್ಲ ಈ ಬಗ್ಗೆ ಚಿಂತನೆ ನಡೆಯಬೇಕು ಎಂದು ಜನರಿಗೆ ಕಿವಿಮಾತು ಹೇಳಿದರು.
ತಮ್ಮ ಕರ್ತವ್ಯ ನಿರ್ವಹಣೆಗಾಗಿ ವಿಮಾನದ ಮೂಲಕ ಕಾಶಿಗೆ ಬಂದು ಹೋಗಲು ಸಾವಿರಾರು ರೂಪಾಯಿ ವ್ಯಯಿಸಿರುವ ಜಗದ್ಗುರುಗಳು, ಖರ್ಚಾಗಿರುವ ಹಣಕ್ಕಿಂತ ಮತಕ್ಕೆ ಹೆಚ್ಚು ಮೌಲ್ಯವಿದೆ ಎಂದು ಸಾರಿದ್ದಾರೆ. ಅದೆನೇ ಇದ್ದರೂ ಇದ್ದಲ್ಲಿಯೇ ಇದ್ದು ಮತದಾನದಿಂದ ವಂಚಿತರಾಗುವ, ಸ್ವಸ್ಥಾನವನ್ನು ತೊರೆದು ಮತದಾನ ತಪ್ಪಿಸಿಕೊಳ್ಳುವವರ ನಡುವೆ ಮತದಾನಕ್ಕಾಗಿ ಬಹುದೂರದಿಂದ ಆಗಮಿಸಿದ ಕಾಶೀ ಜಗದ್ಗುರುಗಳ ಕಾರ್ಯ ಎಲ್ಲರಿಗೂ ಮಾದರಿ.