ನ್ಯೂಸ್

ಜನ್ಮದಿನ ಜೀವನ ಸಫಲತೆಯ ಅವಲೋಕನ; ಕಾಶೀ ಜಗದ್ಗುರುಗಳ ಚಿಂತನ

ವಾರಾಣಸಿ: ಜನ್ಮದಿನವೆಂದರೆ ಕೇವಲ ಆನಂದೋತ್ಸವವಾಗದೇ, ತಮ್ಮ ಜೀವನದ ಸಫಲತೆಯ ಆತ್ಮಾವಲೋಕನದ ದಿವಸವಾಗಬೇಕು ಎಂದು ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯಿಸಿದ್ದಾರೆ.

ಕಾಶಿ ಜ್ಞಾನಪೀಠದ ಜಂಗಮವಾಡಿ ಮಠದಲ್ಲಿ ಏರ್ಪಡಿಸಿದ್ದ 78ನೇ ಜನ್ಮದಿನೋತ್ಸವದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ನಮ್ಮ ದೇಶದ ದಾರ್ಶನಿಕರು ಜನ್ಮದುಖಂ ಎಂಬುದಾಗಿ ಹೇಳಿದ್ದಾರೆ. ಜನ್ಮವು ಅತ್ಯಂತ ದುಃಖದಾಯಕವಾದದ್ದು, ಅದರಂತೆ ಮರಣವೂ ಸಹ ದುಃಖದಾಯಕವೇ ಆಗಿದೆ. ನಡುವಿನ ಜೀವನವೂ ಸಹ ದುಃಖ ರೂಪವೇ ಆಗಿದೆ. ಆದ್ದರಿಂದ ಭಗವಂತನು ಕೊಟ್ಟ ಆಯುಷ್ಯವನ್ನು ಭಗವಂತನ ಪೂಜೆ, ಸಮಾಜ ಸೇವೆಯಲ್ಲಿ ವಿನಿಯೋಗಿಸಿ ತಾನು ಮತ್ತೆ ಹುಟ್ಟಿ ಬಾರದ ಸ್ಥಿತಿಯನ್ನು ಪಡೆದುಕೊಳ್ಳುವ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಬೇಕು. ಅದರಿಂದ ಪ್ರತಿ ಜನ್ಮದಿನವೂ ಸಾರ್ಥಕತೆಯ ದಿನವಾಗುತ್ತದೆ ಎಂದು ಜಗದ್ಗುರುಗಳು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಶಿ ಜಗದ್ಗುರುಗಳು ರಚಿಸಿದ ‘ಅಷ್ಟಾವರಣ ವಿಜ್ಞಾನ’ ಗ್ರಂಥವನ್ನು ಲೋಕಾರ್ಪಣೆ ಮಾಡಿದ ಮಹಾರಾಷ್ಟ್ರದ ಮಾಜಿ ಸಚಿವ ಬಸವರಾಜ ಪಾಟೀಲ, ಜಗದ್ಗುರುಗಳ ಜನ್ಮದಿನೋತ್ಸವದ ಸವಿನೆನಪಿಗಾಗಿ ಕಾಶೀ ಪೀಠಕ್ಕೆ ಸೌರ ವಿದ್ಯುತ್ ಯೋಜನೆ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಸಮಾರಂಭದಲ್ಲಿ ಲಾತೂರಿನ ಮೋತೀಪೌಳೇ , ಕಾಶಿ ಹಿಂದೂ ವಿಶ್ವವಿದ್ಯಾಲಯದ ಆಗಮ ವಿಭಾಗದ ಪ್ರಾಧ್ಯಾಪಕ ಡಾ. ಕಮಲೇಶ ಝಾ, ಪೀಠದ ವ್ಯವಸ್ಥಾಪಕರಾದ ಆರ್.ಕೆ.ಸ್ವಾಮಿ, ನ್ಯಾಯವಾದಿಗಳಾದ ತಿವಾರಿ, ವೇದ ಪಂಡಿತ ಮಲ್ಲಿಕಾರ್ಜುನ ಶಾಸಿ ಹಾಗೂ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ರಾಜಸ್ಥಾನದ ಭಜನಾ ತಂಡದವರು ಭಕ್ತಿ ಸಂಗೀತವನ್ನು ನಡೆಸಿಕೊಟ್ಟರು.