ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 2023ನೇ ಸಾಲಿನ ದಿ. ಶ್ರೀಮತಿ ತಾಯಮ್ಮ ಎಸ್.ಸಿ. ಮಲ್ಲಯ್ಯ ಜಾನಪದ ದತ್ತಿ ಪ್ರಶಸ್ತಿ ಪ್ರಕಟಗೊಂಡಿದ್ದು, ಮಂಡ್ಯ ಜಿಲ್ಲೆಯ ಡಿ.ವಿ. ರುದ್ರೇಶ್, ತುಮಕೂರು ಜಿಲ್ಲೆಯ ವಡ್ಡಗೆರೆ ಕದರಮ್ಮ ಮತ್ತು ಮದ್ದೂರು ತಾಲೂಕಿನ ಸಿ.ಎನ್. ಕುಮಾರ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತು ನ. 29ರ ಬೆಳಗ್ಗೆ 10.30ಕ್ಕೆ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯ ಕೆ.ಪಿ.ಎಸ್ ಕಾಲೇಜು ಸಭಾಭವನದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆಯ ಹಿರಿಯ ಸಮಾಜಸೇವಕರಾದ ಎಸ್. ಎಮ್. ಶಂಕರ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಈ ದತ್ತಿಯನ್ನು ಸ್ಥಾಪಿಸಿದ್ದು. ಪ್ರತಿ ವರ್ಷ ಜನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಲಾವಿದರನ್ನು ಗುರುತಿಸಿ ಗೌರವಿಸಲಾಗುತ್ತದೆ. ಪ್ರಶಸ್ತಿಯ ಆಯ್ಕೆ ಸಮಿತಿಯಲ್ಲಿ ಕಸಾಪ ಮಂಡ್ಯ ಜಿಲ್ಲಾ ಕಾರ್ಯದರ್ಶಿಗಳಾದ ಡಾ.ಕೃಷ್ಣೇಗೌಡ ಹುಸ್ಕೂರ, ಬಿ.ಎಂ. ರಮೇಶ್ಗೌಡ, ಮಂಡ್ಯ ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಬಿ.ಎಂ. ಅಪ್ಪಾಜಪ್ಪ ಹಾಗೂ ಕೇಂದ್ರ ಕಸಾಪ ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು ಮತ್ತು ಗೌರವ ಕೋಶಾಧ್ಯಕ್ಷ ಡಾ. ಬಿ.ಎಂ.ಪಟೇಲ್ ಪಾಂಡು ಇದ್ದರು.