ನ್ಯೂಸ್

ಕೆಎಎಸ್ ನೇಮಕಾತಿ ಅಧಿಸೂಚನೆ ರದ್ದು :ಕೆಪಿಎಸ್ಸಿ ನಿರ್ಧಾರ ವಜಾಗೊಳಿಸಿದ ಕೆಎಟಿ ಸರ್ಕಾರಕ್ಕೆ ಸಂಕಷ್ಟ

ಬೆಂಗಳೂರು : ರಾಜ್ಯ ಸರ್ಕಾರವು ನೇಮಕಾತಿಗಳಲ್ಲಿ ಮೀಸಲು ಪ್ರಮಾಣವನ್ನು ಶೇ.50ರಿಂದ ಶೇ.56ಕ್ಕೆ ಹೆಚ್ಚಳ ಮಾಡಿ ನೀಡಿರುವ ತೀರ್ಪಿನ ಆಧಾರದ ಮೇಲೆ ಕರ್ನಾಟಕ ಲೋಕಸೇವಾ ಆಯೋಗ  ಹೊರಡಿಸಿದ್ದ 384 ಗೆಜೆಟೆಡ್ ಪ್ರೊಬೇಷನರ್ ನೇಮಕಾತಿ ಅಧಿಸೂಚನೆಯನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ(ಕೆಎಟಿ) ರದ್ದುಪಡಿಸಿದೆ.

ರಾಮನಗರ ಜಿಲ್ಲೆ ಚನ್ನಪಟ್ಟಣದ ಬಿ.ಎನ್.ಮಧು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಕೆಎಟಿ ಅಧ್ಯಕ್ಷ ನ್ಯಾಯಮೂರ್ತಿ ಆರ್.ಬೂದಿಹಾಳ್ ಹಾಗೂ ಆಡಳಿತ ಸದಸ್ಯ ರಾಘವೇಂದ್ರ ಔರಾದ್ಕರ್ ಅವರಿದ್ದ ನ್ಯಾಯಪೀಠ ಮೇ 28ರಂದೇ ಈ ಆದೇಶ ಹೊರಡಿಸಿದೆ.

‘ಕೆಎಎಸ್ ಹುದ್ದೆಗಳ ಭರ್ತಿ ಜತೆಗೆ 2022ರ ಡಿ.12ರಂದು ಸರ್ಕಾರ ಮೀಸಲು ಹೆಚ್ಚಳಕ್ಕೆ ಹೊರಡಿಸಿದ್ದ ಆದೇಶವನ್ನೂ ಕೆಎಟಿ ರದ್ದುಗೊಳಿಸಿ, ಪ್ರತಿವಾದಿ ಕೆಪಿಎಸ್‌ಸಿ ಕಾನೂನು ಪ್ರಕಾರ ನೇಮಕಕ್ಕೆ ಹೊಸದಾಗಿ ಅಧಿಸೂಚನೆ ಹೊರಡಿಸಲು ಸ್ವತಂತ್ರವಿದೆ’ ಎಂದು ಸ್ಪಷ್ಟಪಡಿಸಿದೆ.

ಕೆಎಎಸ್ ಅಧಿಕಾರಿಗಳ ನೇಮಕಕ್ಕೆ ಮುಖ್ಯಪರೀಕ್ಷೆ ನಡೆದು ಇನ್ನೇನು ಲಿತಾಂಶ ಹೊರಬೀಳಬೇಕಿತ್ತು. ಈ ಹಂತದಲ್ಲಿ ಕೆಎಎಟಿ ಆದೇಶ ಅಭ್ಯರ್ಥಿಗಳಿಗೆ ಸಂಕಷ್ಟ ತಂದೊಡ್ಡಿದ್ದು , ಸರ್ಕಾರ ಇದೀಗ ನೇಮಕ ಪ್ರಕ್ರಿಯೆಯನ್ನು ಊರ್ಜಿತಗೊಳಿಸಬೇಕಾದರೆ ಕೆಎಟಿ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬೇಕಾಗಿದೆ.

‘2022ರ ಅ.23ರಂದು ಅಂದಿನ ರಾಜ್ಯ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಯು ಮೀಸಲು ಪ್ರಮಾಣವನ್ನು ಶೇ.50ರಿಂದ ಶೇ.56ಕ್ಕೆ ಹೆಚ್ಚಿಸಿದೆ. ಅದನ್ನು ಆಧರಿಸಿ 2022ರ ಡಿ.28ರಂದು ಸರ್ಕಾರಿ ಅಧಿಸೂಚನೆ ಪ್ರಕಟಿಸಿ ರೋಸ್ಟರ್ ಅಂಕಗಳನ್ನು ನಿಗದಿಪಡಿಸಲಾಗಿದೆ. ಆದರೆ ಈ ಪ್ರಕ್ರಿಯೆಯಲ್ಲಿ ಶಾಸನಸಭೆ ಅನುಮತಿ ಪಡೆದಿಲ್ಲ. ಹಾಗಾಗಿ ಅದರ ಆಧಾರದ ಮೇಲೆ ರಚಿಸಲಾದ 2023ರ ನಿಯಮಾವಳಿ ರಚನೆ ಊರ್ಜಿತವಲ್ಲ’ಎಂದು ಕೆಎಟಿ ಅಭಿಪ್ರಾಯಪಟ್ಟಿದೆ.

ಅಲ್ಲದೆ, ಇಂದಿರಾ ಸಾಗ್ನಿ ವರ್ಸಸ್ ಯೂನಿಯನ್ ಆ್ ಇಂಡಿಯಾ ಪ್ರಕರಣದಲ್ಲಿ ಸುಪ್ರಿಂಕೋರ್ಟ್ ನೀಡಿರುವ ತೀರ್ಪಿನಲ್ಲಿ ಒಟ್ಟು ಮೀಸಲು ಪ್ರಮಾಣ ಶೇ.50 ಮೀರುವಂತಿಲ್ಲವೆಂದು ಮಿತಿ ಹೇರಿದೆ. ಆದಾದ ಬಳಿಕ ಈವರೆಗೆ ಸುಪ್ರಿಂಕೋರ್ಟ್‌ನ ಯಾವುದೇ ತೀರ್ಪಿನಲ್ಲಿ ಶೇ.50ರ ಮಿತಿ ದಾಟುವಂತೆ ಹೇಳಿಲ್ಲ. ಆದರೂ ಕೆಲವು ರಾಜ್ಯಗಳು ಮಾಡಿವೆ ಎಂಬುದನ್ನು ಮುಂದಿಟ್ಟುಕೊಂಡು ಮೀಸಲು ಮಿತಿ ಹೆಚ್ಚಳಕ್ಕೆ ಯಾವುದೇ ಶಾಸನಾತ್ಮಕ ಬೆಂಬಲ ಇಲ್ಲ’ ಎಂದೂ ಕೆಎಟಿ ಹೇಳಿದೆ.