ನ್ಯೂಸ್

ಅಂಕ ಬಿಡಿ, ಕನ್ನಡದ ಕಗ್ಗೊಲೆಗೆ ಪರಿಹಾರ ಹೇಳಿ ಎಂದ ಕೆಎಎಸ್ ಹುದ್ದೆ ಆಕಾಂಕ್ಷಿಗಳು

ಬೆಂಗಳೂರು ಕೆಎಎಸ್ ಪೂರ್ವಭಾವಿ ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಕನ್ನಡ ತರ್ಜುಮೆ ವಿಚಾರದಲ್ಲಿ ಆಗಿರುವ ದೋಷಗಳಿಗೆ ಪರಿಹಾರವೇನು? ಎಂದು ಪ್ರಶ್ನಿಸಿರುವ ಅಭ್ಯರ್ಥಿಗಳು, ಪರೀಕ್ಷೆ ನಡೆದು ಒಂದು ದಿನ ಕಳೆದರೂ ತನ್ನ ಪ್ರಮಾದದ ಬಗ್ಗೆ ಮೌನವಹಿಸಿರುವ ಕೆಪಿಎಸ್‌ಸಿ ವಿರುದ್ದಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಲೋಕಸೇವಾ ಆಯೋಗದಿಂದ ನಡೆಯುವ ಎಸ್‌ಡಿಎ, ಎ್ಡಿಎ, ಕೆಎಎಸ್ ಸೇರಿ ಎಲ್ಲ ಪರೀಕ್ಷೆಗಳಲ್ಲಿಯೂ ಕನ್ನಡದಕ್ಕೆ ಅವಮಾನ ಮಾಡಲಾಗುತ್ತಿದೆ. ಅಭ್ಯರ್ಥಿಗಳಿಗೆ ಕನ್ನಡದ ಪ್ರಶ್ನೆಗಳು ಸರಿಯಾಗಿ ಅರ್ಥವಾಗಿಲ್ಲವೆಂದರೆ ಇಂಗ್ಲಿಷ್‌ನಲ್ಲಿರುವ ಪ್ರಶ್ನೆಯನ್ನು ಓದಿಕೊಳ್ಳುವುದು ಎಂಬ ಸೂಚನೆ ನೀಡಿರುತ್ತದೆ. ಈ ಮೂಲಕ ರಾಜ್ಯದಲ್ಲಿ ಕನ್ನಡವೇ ಎರಡನೇ ದರ್ಜೆ ಭಾಷೆಯಾಗಿದೆ. ಇದಕ್ಕೆ ಸರ್ಕಾರ ಕೂಡ ಆಕ್ಷೇಪ ವ್ಯಕ್ತಪಡಿಸದಿರುವುದನ್ನು ನೋಡಿದರೆ, ಕನ್ನಡ ಮತ್ತು ಗ್ರಾಮೀಣ ಅಭ್ಯರ್ಥಿಗಳ ಸಮಸ್ಯೆಗಳಿಗೆ ಪರಿಹಾರ ಸಿಗಲ್ಲವೆಂದು ತಮ್ಮ ನೋವು ತೋಡಿಕೊಂಡಿದ್ದಾರೆ.

ಅಭ್ಯರ್ಥಿಗಳ ಆಗ್ರಹವೇನು?

ಇಂಗ್ಲಿಷ್‌ನಿಂದ ಕನ್ನಡಕ್ಕೆ ತರ್ಜುಮೆಯಲ್ಲಿ ಆಗಿರುವ ದೋಷಗಳಿಗೆ ಕೃಪಾಂಕ ನೀಡುವುದು ಮತ್ತು ಇದನ್ನು ನ್ಯಾಯಾಲಯದ ಮೂಲಕವೂ ಪರಿಹಾರ ಕಂಡುಕೊಳ್ಳಬೇಕು ಎಂದು ಹಲವು ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.

ಮತ್ತೆ ಕೆಲವರು ಇದು ಕೇವಲ ಅಂಕದ ವಿಚಾರವಲ್ಲ. ಕನ್ನಡ ಭಾಷೆಯ ವಿಚಾರವಾಗಿದೆ. ಸರ್ಕಾರವು ಇದನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕಾರ್ಯದರ್ಶಿ ಎಕ್ಸ್ ಖಾತೆ ಸ್ಥಗಿತ:

ಸಾಮಾಜಿಕ ತಾಣ ‘ಎಕ್ಸ್’ನಲ್ಲಿ ತುಂಬಾ ಚಟುವಟಿಕೆಯಿಂದ ಕೂಡಿದ್ದರು. ಅಭ್ಯರ್ಥಿಗಳ ಆತಂಕಗಳಿಗೆ ಪರಿಹಾರ ನೀಡುವ ಕೆಲಸ ಮಾಡುತ್ತಿದ್ದರು. ಎಕ್ಸ್‌ನಲ್ಲಿರುವ ‘ಕೆಪಿಎಸ್ಸಿ ಸೆಕ್ರಟರಿ’ ಖಾತೆಯನ್ನು ಅಭ್ಯರ್ಥಿಗಳು ತುರ್ತು ಪರಿಹಾರಕ್ಕಾಗಿ ನಿರೀಕ್ಷೆ ಮಾಡುತ್ತಿದ್ದರು. ಆದರೆ, ಆ ಖಾತೆ ಸಂಪೂರ್ಣವಾಗಿ ಸ್ಥಗಿತವಾಗಿದೆ. ಯಾವುದೇ ಸಂದೇಶಗಳು ಪ್ರಕಟವಾಗುತ್ತಿಲ್ಲ. ಹಿಂದಿನ ಕಾರ್ಯದರ್ಶಿ ವರ್ಗಾವಣೆಯಾದ ಸಂದರ್ಭದಲ್ಲಿ ಮಾ.5ರಂದು ಹಂಚಿಕೊಂಡಿರುವ ಧನ್ಯವಾದದ ಸಂದೇಶವೇ ಕೊನೇ ಸಂದೇಶವಾಗಿದೆ.