ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದಲ್ಲಿ ನಡೆದಿರುವ ಪರೀಕ್ಷಾ ಹಗರಣದ ಕುರಿತು ಕೆಎಎಸ್ ಅಭ್ಯರ್ಥಿ ಮಮಿತಾ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನಗರದ 52ನೇ ಸೇಷನ್ಸ್ ಕೋರ್ಟ್ ವಜಾಗೊಳಿಸಿ ಗುರುವಾರ ಆದೇಶ ಹೊರಡಿಸಿದೆ.
ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ ಅವರೊಂದಿಗೆ ನೇಮಕಾತಿ ವಿಚಾರವಾಗಿ ಹಣ ನೀಡಿದ್ದಾರೆ ಎಂಬ ಆರೋಪದ ಮೇರೆಗೆ ದಾಖಲಾಗಿದ್ದ ಪ್ರಕರಣದಲ್ಲಿ ಮಮಿತಾ ಜಾಮೀನು ಅರ್ಜಿ ಸಲ್ಲಿಸಿದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ವಾದ-ಪ್ರತಿವಾದ ಆಲಿಸಿ ಅರ್ಜಿಯನ್ನು ವಜಾಗೊಳಿಸಿದೆ.
2023-24ನೇ ಸಾಲಿನಲ್ಲಿ ಆಯೋಗವು ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಪರೀಕ್ಷೆ ಕೈಗೊಂಡಿತ್ತು. ಈ ವೇಳೆ ಶಾಂತಾ ಹೊಸಮನಿ ಅವರೊಂದಿಗೆ ನೇಮಕಾತಿ ವಿಚಾರವಾಗಿ ನಿರಂತರ ಸಂಪರ್ಕ ಹೊಂದಿದ್ದ ಕೆಎಎಸ್ ಅಭ್ಯರ್ಥಿ ಮಮಿತಾ, ಲಕ್ಷಾಂತರ ರೂ.ನೀಡಿದ್ದಾರೆ ಎಂದು ಆರೋಪಿಸಿ ವಿಧಾನಸೌಧ ಠಾಣೆಯಲ್ಲಿ ವಿದ್ಯಾರ್ಥಿ ಸಂಘಟನೆ ಮುಖಂಡರೊಬ್ಬರು ಪ್ರಕರಣ ದಾಖಲಿಸಿದ್ದರು. ಇದರ ಬಗ್ಗೆ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು, ಆರೋಪಿ ಶಾಂತಾ ಹೊಸಮನಿ, ಮಮಿತಾಳೊಂದಿಗೆ ಹಲವು ಬಾರಿ ೆನ್ ಕರೆ ಮಾಡಿರುವುದನ್ನು ಪತ್ತೆ ಮಾಡಿತ್ತು. ಬಂಧನ ಭೀತಿ ಎದುರಿಸುತ್ತಿದ್ದ ಮಮಿತಾ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.
ಪಶುವೈದ್ಯಾಧಿಕಾರಿ 400 ಹುದ್ದೆಗಳ ನೇಮಕಾತಿ ಹಗರಣದ ಜತೆಗೆ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಪರೀಕ್ಷೆಯಲ್ಲೂ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ. ಈಗಾಗಲೇ ಸರಣಿ ಹಗರಣಗಳ ಆರೋಪ ಹೊತ್ತಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಇ.ಡಿ ಕಸ್ಟಡಿಯಲ್ಲಿ ಇದ್ದಾರೆ. ಮಧ್ಯವರ್ತಿ ಬಸವರಾಜ್ ಕನ್ನಾಳೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಈ ಇಬ್ಬರು ಸೇರಿಕೊಂಡು ಪಶುವೈದ್ಯಾಧಿಕಾರಿಗಳ ನೇಮಕಾತಿ ಸೇರಿ ಹಲವು ನೇಮಕಾತಿಯಲ್ಲಿ ಅಕ್ರಮ ಎಸಗಿರುವುದು ಒಂದೊಂದಾಗಿ ಬೆಯಲಿಗೆ ಬರುತ್ತಿವೆ.
ಆಯೋಗದಲ್ಲಿ ನಡೆದಿರುವ ಪರೀಕ್ಷಾ ಹಗರಣದ ಪ್ರಮುಖ ಆರೋಪಿ ಎನ್ನಲಾದ ಮಾಜಿ ಅಧ್ಯಕ್ಷ ಸಿಐಡಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದಾರೆ. ಆರೋಪಿ ಶಾಂತಾ ಹೊಸಮನಿ ಅವರು ಒಂದು ಬಾರಿಗೆ ಸಿಐಡಿ ವಿಚಾರಣೆಗೆ ಹಾಜರಾಗಿ ಪುನಃ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರ ನಡುವೆ ಹೈಕೋರ್ಟ್ ಕೆಪಿಎಸ್‌ಸಿಯಲ್ಲಿ ಭ್ರಷ್ಟಾಚಾರದ ಕುರಿತು ಸಮಗ್ರ ತನಿಖೆಗೆ ಎಸ್‌ಐಟಿ ರಚನೆ ಮಾಡಿತ್ತು. ಆದರೆ, ರಾಜ್ಯ ಸರ್ಕಾರ ತಮ್ಮ ಗಮನಕ್ಕೆ ತರದೇ ಅಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಆರೋಪಿಸಿ, ಹೈಕೋರ್ಟ್ ಆದೇಶದ ವ್ಯತ್ಯರಿಕ್ತವಾಗಿ ಸುಪ್ರೀಂ ಕೋರ್ಟ್‌ಗೆ ಮೆಲ್ಮನವಿ ಸಲ್ಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.