ಬೆಂಗಳೂರು: ಕಾರವಾರ ಬಂದರಿನ 2ನೇ ಹಂತದ ಅಭಿವೃದ್ಧಿ ಕಾಮಗಾರಿಯಿಂದ ಮೀನುಗಾರರು, ಪರಿಸರ ವಾದಿಗಳು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಕಾರವಾರ ಬಂದರು ನಿರ್ವಿುಸುವ ವಿಚಾರದಲ್ಲಿ ಮೀನು ಗಾರರು ಹಾಗೂ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ. ವಾಣಿಜ್ಯ ಬಂದರು ನಿರ್ವಿುಸುವುದರಿಂದ ರವೀಂದ್ರನಾಥ ಠಾಗೋರ್ ಸಮುದ್ರತೀರ ಅಸ್ತಿತ್ವ ಕಳೆದುಕೊಳ್ಳುತ್ತದೆ ಎಂದು ಕೆಲವರು ಹೇಳುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಸಾಗರಮಾಲಾ ಯೋಜನೆಯಡಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮೀನುಗಾರರಿಗೆ ಹಾಗೂ ನೈಸರ್ಗಿಕ ಸೌಂದರ್ಯಕ್ಕೆ ಯಾವುದೇ ಸಮಸ್ಯೆ ಆಗದ ಂತೆ ಸರ್ಕಾರ ಎಚ್ಚರಿಕೆ ವಹಿಸಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
2017ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಇದಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಆಗ ಶಾಸಕರಾಗಿದ್ದ ಸತೀಶ್ ಸೈಲ್ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಆದರೆ ಇಂದು ಅವರೇ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ರಾಜಕೀಯ ದುರುದ್ದೇಶಕ್ಕಾಗಿ ಅವರು ಹೀಗೆ ಮಾಡುತ್ತಿದ್ದಾರೆ. ಯಾವುದೇ ಮೀನುಗಾರರ ಕುಟುಂಬಕ್ಕೆ ಧಕ್ಕೆ ಆಗದ ರೀತಿ ಸರ್ಕಾರ ಎಚ್ಚರಿಕೆ ವಹಿಸಲಿದೆ ಎಂದರು.
ಚಪ್ಪಲಿ ಹಾರ ಹಾಕಿದರೂ ಕ್ಷಮೆ...
ಕಾರವಾರ ಬಂದರು ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಸಲ್ಲದು. ಮೀನುಗಾರರು ಯಾರದ್ದೋ ಮಾತು ಕೇಳಿ ದುಡುಕುವುದು ಬೇಡ. ನನ್ನ ಫೋಟೋಗೆ ಚಪ್ಪಲಿ ಹಾರ ಹಾಕಿದವರನ್ನು ನಾನು ಕ್ಷಮಿಸುತ್ತೇನೆ. ಕಿನಾರೆ ಉಳಿಸಲು, ಮೀನುಗಾರರ ಹಿತ ಕಾಪಾಡಲು ಬದ್ಧ ಎಂದು ಶಾಸಕಿ ರೂಪಾಲಿ ನಾಯ್್ಕ ಮನವಿ ಮಾಡಿದರು. ಈ ಯೋಜನೆಯಿಂದ ನನಗೇನೂ ಆಗಬೇಕಿಲ್ಲ. ಜನರಿಗೆ ಬೇಡ ಎಂದಾದರೆ ನನಗೂ ಬೇಡ. ಸುಮ್ಮನೇ ನನ್ನ ಹೆಸರಿಗೆ ಕಳಂಕ ತರುವುದು ಸರಿಯಲ್ಲ ಎಂದು ಹೇಳಿದರು.