Karur Stampede: ನಿನ್ನೆ (ಸೆ.27) ಸಂಜೆ ತಮಿಳುನಾಡಿನ ಕರೂರಿನಲ್ಲಿ ನಟ ದಳಪತಿ ವಿಜಯ್ ಅವರು ರಾಜಕೀಯ ರ್‍ಯಾಲಿ ನಡೆಸುವ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತ ದುರಂತದಲ್ಲಿ 40 ಮಂದಿ ದಾರುಣ ಅಂತ್ಯ ಕಂಡಿದ್ದು, 50ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿದೆ. ಈ ಮಧ್ಯೆ, ಮೃತ ವಿಜಯ್ ಅಭಿಮಾನಿಯ ಸಂಬಂಧಿಕರೊಬ್ಬರ ಆಕ್ರಂದನ ಮುಗಿಲು ಮುಟ್ಟಿದ್ದು, ಸರ್ಕಾರದ ಪರಿಹಾರ ಹಣ ಬೇಡ ಎಂದು ತಿರಸ್ಕರಿಸಿದ್ದಾರೆ.
ಇದನ್ನೂ ಓದಿ: ಪ್ಲೀಸ್ 1 ಅಥವಾ 2 ರೂ. ದಾನ ಮಾಡಿ ಐಫೋನ್ 17 ಪ್ರೊ ಮ್ಯಾಕ್ಸ್ ಖರೀದಿಸಬೇಕು: ಫಾಲೋವರ್ಸ್ ಬಳಿ ಯುವತಿ ಮನವಿ! iPhone
ದಳಪತಿ ವಿಜಯ್ ಅವರ ಕಟ್ಟಾಭಿಮಾನಿ ಬೃಂದಾ, ಕರೂರಿಗೆ ತಮ್ಮ ನೆಚ್ಚಿನ ನಟ ಬರುತ್ತಾರೆ ಎಂದು ಅತೀವ ಸಂತಸದಲ್ಲಿದ್ದರು. ಇದಕ್ಕಾಗಿ, ಮುಂಚಿತವಾಗಲೇ ತಯಾರಾಗಿದ್ದ ಅವರು, ಕರೂರಿಗೆ ಆಗಮಿಸಿದ್ದರು. ತಮ್ಮ 2 ವರ್ಷದ ಮಗುವನ್ನು ಹೊತ್ತುಕೊಂಡು ಹೋಗಲು ಆಗುವುದಿಲ್ಲ ಎಂಬ ಕಾರಣಕ್ಕೆ ತಂಗಿಯೊಂದಿಗೆ ಮಗನನ್ನು ಬಿಟ್ಟು ಹೋಗಿದ್ದ ಬೃಂದಾ, ಮನೆಗೆ ಹಿಂತಿರುಗಿದ್ದು ಶವವಾಗಿ. ಕಾಲ್ತುಳಿತಕ್ಕೆ ಸಿಲುಕಿದ ವಿಜಯ್ ಅಭಿಮಾನಿ, ನಟನ ಕಣ್ತುಂಬಿಕೊಳ್ಳಲು ಹೋಗಿ ಮೃತಪಟ್ಟ ಸುದ್ದಿ ತಿಳಿದು ಕುಟುಂಬಸ್ಥರು ಕಂಗಾಲಾಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ಬೃಂದಾ ಸಹೋದರಿ, "ಕಾಲ್ತುಳಿತ ದುರಂತದ ಸುದ್ದಿ ಹರಿದಾಡುತ್ತಿದ್ದಂತೆ ನಾನು ನನ್ನ ಅಕ್ಕನಿಗೆ ಫೋನ್ ಮಾಡಿದೆ. ಎಷ್ಟು ಬಾರಿ ಪ್ರಯತ್ನಿಸಿದರೂ ಆಕೆ ಕರೆ ಸ್ವೀಕರಿಸಲಿಲ್ಲ. ರಾತ್ರಿ 10 ಗಂಟೆಗೆ ಫೋನ್ ಸ್ವಿಚ್ ಆಫ್ ಆಯಿತು. ಆದರೆ, ಇಂದು ಬೆಳಗ್ಗೆ ಅವಳು ಮೃತಪಟ್ಟಿದ್ದಾಳೆ ಎಂಬುದು ದೃಢವಾಯಿತು. ನಮಗೆ ಅವರು ನೀಡುವ ಪರಿಹಾರ ಹಣ ಬೇಕಿಲ್ಲ. ಒಂದು ಸಾರ್ವಜನಿಕ ಸಭೆಯನ್ನು ಸರಿಯಾಗಿ ಯೋಜನೆ ಮಾಡಲು ಸಾಧ್ಯವಿಲ್ಲ ಎಂದಮೇಲೆ ಇದೆಲ್ಲ ಏಕೆ ಬೇಕು? ನಮಗೆ ಹಣ ಬೇಡ, ನನ್ನ ಅಕ್ಕನನ್ನು ವಾಪಾಸ್ ಕೊಡಿ. ಆಗುತ್ತಾ ಅವರಿಂದ?" ಎಂದು ಕಣ್ಣೀರಿಟ್ಟಿದ್ದಾರೆ.
ದುರಂತದಲ್ಲಿ ಮೃತಪಟ್ಟವರಿಗೆ ತಲಾ 20 ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡುವುದಾಗಿ ಟಿವಿಕೆ ಭರವಸೆ ನೀಡಿದೆ. ಇಂದು ಆನ್‌ಲೈನ್‌ನಲ್ಲಿ ನಾಯಕರ ತುರ್ತು ಸಭೆ ನಡೆದ ನಂತರ ಈ ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಧಿಕೃತ ವರದಿಯ ಪ್ರಕಾರ, ಈವರೆಗೆ 40 ಜನರು ದುರಂತದಲ್ಲಿ ಸಾವಿಗೀಡಾಗಿದ್ದಾರೆ,(ಏಜೆನ್ಸೀಸ್).