Karur Rally Stampede: ನಿನ್ನೆ (ಸೆ.27) ಸಂಜೆ ತಮಿಳುನಾಡಿನ ಕರೂರಿನಲ್ಲಿ ನಟ ದಳಪತಿ ವಿಜಯ್ ಅವರು ರಾಜಕೀಯ ರ್‍ಯಾಲಿ ನಡೆಸುವ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತ ದುರಂತದಲ್ಲಿ 39 ಮಂದಿ ದಾರುಣ ಅಂತ್ಯ ಕಂಡಿದ್ದು, 50ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿದೆ. ಈ ಮಧ್ಯೆ, ಮೃತನ ಸಂಬಂಧಿಕರೊಬ್ಬರ ಆಕ್ರಂದನ ಮುಗಿಲು ಮುಟ್ಟಿದ್ದು, ನಟ ವಿಜಯ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಿವಿಕೆ ಮುಖ್ಯಸ್ಥ ಮತ್ತು ತಮಿಳಿನ ಸೂಪರ್‌ಸ್ಟಾರ್ ವಿಜಯ್ ಆಯೋಜಿಸಿದ್ದ ಪ್ರಚಾರ ರ್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತ ದುರಂತ ಒಟ್ಟು 39 ಅಮಾಯಕರ ಜೀವವನ್ನು ಬಲಿಪಡೆದಿದ್ದು, ತಮ್ಮ ಪ್ರೀತಿ-ಪಾತ್ರರನ್ನು ಕಳೆದುಕೊಂಡ ಕುಟುಂಬಸ್ಥರು ಮೃತದೇಹಗಳ ಮುಂದೆ ಕಣ್ಣೀರಿಟ್ಟದ್ದಾರೆ. ಇಷ್ಟೆಲ್ಲ ಅನಾಹುತ ಸಂಭವಿಸಿದ್ದರೂ ವಿಜಯ್ ಸ್ಥಳದಿಂದ ಕಾಲ್ಕಿತ್ತಿದ್ದೇಕೆ? ಅಲ್ಲಿಂದ ಯಾರ ಬಗ್ಗೆಯೂ ವಿಚಾರಿಸದೆ ಹೊರಹೋಗಿದ್ದು ಏಕೆ? ಎಂದು ಮಹಿಳೆಯೊಬ್ಬರು ಅಳಲು ತೋಡಿಕೊಂಡಿದ್ದಾರೆ.
ದುರಂತ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿರುವ ವಿಜಯ್, ಈ ಘಟನೆಯಿಂದ ನನ್ನ ಹೃದಯವೇ ಚೂರಾಗಿದೆ ಎಂದು ಬರೆದುಕೊಂಡಿದ್ದಾರೆ. ಆದರೆ, ಇದಕ್ಕೆ ಒಪ್ಪದ ಮೃತರ ಕುಟುಂಬಗಳು, ಸಾಂತ್ವನ ಹೇಳಲಿಲ್ಲ, ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಭೇಟಿ ಮಾಡಲಿಲ್ಲ ಎಂದು ವ್ಯಾಪಕ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ. ಇದೆಲ್ಲದರ ನಡುವೆ ಡಿಎಂಕೆ ಸೇರಿ ಕೆಲವು ಪಕ್ಷಗಳು ನಟನ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿವೆ.
"ಕಾಲ್ತುಳಿತದಲ್ಲಿ ಇಷ್ಟೊಂದು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಿದ್ದಮೇಲೆ ಅವರು ಇಲ್ಲಿಂದ ಹೇಗೆ ಹೋದರು? ಹೋಗಬಾರದಿತ್ತು. ಅವರಿಗೆ ನನ್ನ ಚಪ್ಪಲಿಯಿಂದ ಹೊಡೆಯುವೆ. ಘಟನಾ ಸ್ಥಳದಿಂದ ಹೋಗಿ, ಎಸಿಯಲ್ಲಿ ಆರಾಮಾಗಿ ಮಲಗಿದ್ದಾರೆ. ನಾವಿಲ್ಲಿ ಬೀದಿಗಳಲ್ಲಿ ಬಿದ್ದಿದ್ದೇವೆ. ಈಗ ನಮ್ಮ ಕುಟುಂಬವನ್ನು ನೋಡಿಕೊಳ್ಳುವವರು ಯಾರು?" ಎಂದು ಮಹಿಳೆ ಪ್ರಶ್ನಿಸಿದ್ದಾರೆ.
ಇದೇ ರೀತಿ ಮತ್ತೊಬ್ಬರು ಮಾತನಾಡಿ, "ರಾಜಕೀಯಕ್ಕೆ ಪ್ರವೇಶಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಜನರನ್ನು ಒಟ್ಟುಗೂಡಿಸಿ ಪ್ರದರ್ಶನ ತೋರುವ ಅಗತ್ಯವಿರಲಿಲ್ಲ. ಜನರನ್ನು ಬಲಿಕೊಟ್ಟ ವ್ಯಕ್ತಿ, ರಾಜಕೀಯಕ್ಕೆ ಪ್ರವೇಶಿಸಬಾರದು" ಎಂದು ಹೇಳಿದ್ದಾರೆ,(ಏಜೆನ್ಸೀಸ್).