ನ್ಯೂಸ್

ಜ್ಞಾನದ ಸಂಕೇತ ಕಾರ್ತೀಕ ದೀಪೋತ್ಸವ; ನ.14ಕ್ಕೆ ಮಳಲಿಮಠದ ಆದಿಗುರು ನಾಗಾರ್ಜುನ ಸ್ವಾಮಿ ಜಯಂತಿ

ಪ್ರಶಾಂತ ರಿಪ್ಪನ್‌ಪೇಟೆ ಬೆಂಗಳೂರು : ಕಾರ್ತೀಕ ಮಾಸ ಬಂತೆಂದರೆ ಎಲ್ಲೆಡೆ ಕಡುಗತ್ತಲೆಯನ್ನು ತೊಡೆದು ಜ್ಯೋತಿಯನ್ನು ಬೆಳಗಿಸುವ ದೀಪೋತ್ಸವದ ಸಡಗರ. ಲೌಕಿಕವಾಗಿ ಬಹಿರಂಗದ ಕತ್ತಲೆಯನ್ನು ಜ್ಯೊತಿ ತೊಲಗಿಸಿದರೆ; ಅಲೌಕಿಕವಾಗಿ ಅಂತರಂಗದ ಕತ್ತಲೆಯನ್ನು ಹೊಡೆದೋಡಿಸುವ ಶಕ್ತಿ ಜ್ಞಾನಕ್ಕಿದೆ. ಅಂತಹ ಜ್ಞಾನದ ಸಂಕೇತವೇ ಕಾರ್ತೀಕ ದೀಪೋತ್ಸವ. ಈ ಮಾತಿಗೆ ಅನ್ವರ್ಥಕವೆಂಬಂತೆ ಮಲೆನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಳಲಿಮಠದಲ್ಲಿ ನ.14ಕ್ಕೆ ಕಾರ್ತೀಕ ದೀಪೋತ್ಸವ ಹಾಗೂ ಜನಜಾಗೃತಿ ಧರ್ಮ ಸಮಾರಂಭ ನಡೆಯಲಿದೆ. ಧಾರ್ಮಿಕ ಜಗತ್ತಿನಲ್ಲಿ ಭಕ್ತಿ, ಜ್ಞಾನ ಮತ್ತು ಕರ್ಮ ಎಂಬ ಮೂರು ಮುಖ್ಯ ಸಿದ್ಧಾಂತಗಳಿವೆ. ಪ್ರತಿಯೊಂದು ಸಿದ್ಧಾಂತವೂ ಕೂಡಾ ಆಯಾ ಹಿನ್ನೆಲೆಯಲ್ಲಿ ಮಹತ್ವದ್ದೆನಿಸಿವೆ. ವಿಶೇಷವಾಗಿ ವೀರಶೈವ ಸಿದ್ಧಾಂತದಲ್ಲಿ ಭಕ್ತಿ, ಕರ್ಮ (ಕಾಯಕ)ದ ಜೊತೆಗೆ ಜ್ಞಾನ ಸಿದ್ಧಾಂತವನ್ನು ಕೂಡ ಅಷ್ಟೇ ಪ್ರಮುಖವಾಗಿ ವಿಶದಪಡಿಸಲಾಗಿದೆ. ವೀರಶೈವ ಸಿದ್ಧಾಂತಗಳಿಗೆ ಆಧಾರವಾಗಿರುವ ಪಂಚಸೂತ್ರಗಳಲ್ಲಿ ಒಂದಾದ ಪಡ್ವಿಡಿ ಸೂತ್ರದ ವಿಸ್ತೃತ ರೂಪವಾದ ಶ್ರೀಸಿದ್ಧಾಂತ ಶಿಖಾಮಣಿಯ ಪಿಂಡಜ್ಞಾನ ಸ್ಥಲದಲ್ಲಿ ಜ್ಞಾನದ ಬಿಜಾಂಕುರವಾದರೆ; ಜ್ಞಾನಶೂನ್ಯ ಸ್ಥಲದಲ್ಲಿ ಜ್ಞಾನದ ಪ್ರತಿಲ ದೊರೆಯುತ್ತದೆ. ಇಂತಹ ಜ್ಞಾನ ದಾಸೋಹದ ಸಾಂಕೇತಿಕ ಆಚರಣೆಯೇ ಕಾರ್ತೀಕ ದೀಪೋತ್ಸವ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿರುವ ಸಂಸ್ಥಾನ ಮಳಲಿಮಠದಲ್ಲಿ ಪ್ರತಿವರ್ಷ ವಾರ್ಷಿಕ ಜಾತ್ರೆಯೋಪಾದಿಯಲ್ಲಿ ಕಾರ್ತೀಕ ದೀಪೋತ್ಸವವನ್ನು ಆಚರಿಸಲಾಗುತ್ತದೆ. ಮಳಲಿಮಠದ ಆದಿಗುರು ನಾಗಾರ್ಜುನ ಸ್ವಾಮಿಗಳ ಜಯಂತಿಯಂದು ನಡೆಯುವ ಕಾರ್ತೀಕ ದೀಪೋತ್ಸವದಲ್ಲಿ ಪಾಲ್ಗೊಂಡು ಭಕ್ತರು ಅರಿವಿನ ದೀವಿಗೆಯನ್ನು ಬೆಳಗುತ್ತಾರೆ. ಆದಿಗುರು ನಾಗಾರ್ಜುನ ಸ್ವಾಮಿಗಳು ಕಾರ್ತೀಕ ಶುದ್ಧ ಚತುರ್ದಶಿಯಂದು ಅವತರಿಸಿದ ಸಿದ್ಧಿಪುರುಷ. ನೆರೆಯ ಆಂಧ್ರಪ್ರದೇಶದ ನಾಗಾರ್ಜುನ ಕೊಂಡದಲ್ಲಿ ತಪಸ್ಸು ಗೈದ ಶಕಪುರುಷ. ಪೂಜ್ಯರು, ಭಕ್ತರ ಅಂತರಂಗ ಬಹಿರಂಗಗಳೆರಡರ ಅಂಧಕಾರವನ್ನು ನಿವಾರಿಸಿದ ನಿಜಯೋಗಿ.

ಸಂಸ್ಥಾನ ಮಳಲಿಮಠದ ಪರಂಪರೆ

ಶ್ರೀಜಗದ್ಗುರು ರೇವಣಸಿದ್ಧೇಶ್ವರರ ಶಿಷ್ಯರಾದ ಆದಿಗುರು ನಾಗಾರ್ಜುನ ಶಿವಾಚಾರ್ಯರು ಮಲೆನಾಡಿನ ಸಹ್ಯಾದ್ರಿ ತಪ್ಪಲಿನಲ್ಲಿ ಶ್ರೀಮದ್ ರಂಭಾಪುರಿ ಖಾಸಾ ಶಾಖಾ ಸಂಸ್ಥಾನ ಮಳಲಿ ಮಠವನ್ನು ಸ್ಥಾಪಿಸಿದ ಕರ್ತೃಪುರುಷ. ಶ್ರೀಮಠದ ಸುದೀರ್ಘ ಪರಂಪರೆಯು ಅಂದಿನಿಂದ ಇಂದಿನವರೆಗೆ ಮುಂದುವರೆದಿದೆ. ಶ್ರೀರಾಮ ರಾವಣನನ್ನು ಸಂಹರಿಸಿ ಸೀತೆಯನ್ನು ಕರೆದುಕೊಂಡು ಲಂಕೆಯಿಂದ ಅಯೋಧ್ಯೆಗೆ ತೆರಳುವ ದಾರಿಮಧ್ಯೆ ಕಾರಣಗಿರಿ ಗಣಪತಿಯನ್ನು ಪೂಜಿಸಲು ತಂಗಿದ ಸಂದರ್ಭದಲ್ಲಿ, ಶ್ರೀಗುರುವಿನ ಪಾದತೀರ್ಥಕ್ಕಾಗಿ ಮಳಲಿ ಕ್ಷೇತ್ರಕ್ಕೆ ಬಂದ ಆಂಜನೇಯ ಅಲ್ಲಿದ್ದ ಜಂಬೂ ನೇರಳೆ ಮರದಲ್ಲಿ ವಾಸ ಮಾಡಿದ್ದ ಎಂಬ ಪೌರಾಣಿಕ ಪ್ರತೀತಿ ಇದೆ. ಶಿವನ ಕಂಠಾಭರಣವಾಗಿರುವ ನಾಗರಾಜನ ನಾಮಾಂಕಿತವನ್ನು ಹೊತ್ತಿರುವ ನಾಗಾರ್ಜುನ ಸ್ವಾಮಿಗಳ ಗದ್ದುಗೆ ಅತ್ಯಂತ ಜಾಗೃತ ಸ್ಥಾನವಾಗಿದ್ದು, ನಾಗಾರ್ಜುನ ಸ್ವಾಮಿಯನ್ನು ಪೂಜಿಸುವುದರಿಂದ ಸರ್ವವಿಧ ಸರ್ಪದೋಷಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ. ನಾಗಾರ್ಜುನ ಸ್ವಾಮಿ ಗದ್ದುಗೆಗೆ ನಾಗರಪಂಚಮಿ ಹಾಗೂ ಕಾರ್ತೀಕ ದೀಪೋತ್ಸವದಂದು ವಿಶೇಷ ಪೂಜೆ ನಡೆಯುತ್ತವೆ. 1998ರಲ್ಲಿ ಶ್ರೀಮಠದ ಪಟ್ಟಾಧ್ಯಕ್ಷರಾದ ಡಾ.ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು, ಶ್ರೀ ರಂಭಾಪುರಿ ಜಗದ್ಗುರುಗಳ ಮಾರ್ಗದರ್ಶನದಲ್ಲಿ ಮಠವನ್ನು ಸರ್ವಾಂಗೀಣ ಅಭಿವೃದ್ಧಿ ಮಾಡಿದ್ದಾರೆ. ಮಠದಲ್ಲಿ ಕೃಷಿ ಕ್ರಾಂತಿಯನ್ನು ಮಾಡಿ ಪೃಥ್ವಿ ತತ್ವವನ್ನು ಎತ್ತಿ ಹಿಡಿದಿದ್ದಾರೆ. ಲಿಂಗೈಕ್ಯ ಗುರುಗಳ ಗದ್ದುಗೆಯ ಶಿಲಾಮಂಟಪ, ಶ್ರೀನಾಗಾರ್ಜುನ ಸ್ವಾಮಿ ಸಮುದಾಯ ಭವನ, ಮಠದ ಮಹಾದ್ವಾರ ಹೀಗೆ ಹಲವು ಅಭಿವೃದ್ಧಿ ಕಾರ್ಯಗಳು ಶ್ರೀಗಳ ಕ್ರಿಯಾಶೀಲತೆಗೆ ಸಾಕ್ಷಿಯಾಗಿವೆ. ಮಲೆನಾಡು ಪ್ರಾಂತ್ಯದಲ್ಲಿ ಧರ್ಮ ಜಾಗೃತಿಗಾಗಿ ನಿರಂತರವಾಗಿ ಸಂಚರಿಸುವ ಶ್ರೀಗಳು ಭಕ್ತರ ಸುಖ ದುಃಖಗಳಲ್ಲಿ ಭಾಗಿಯಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ.

ನಿರಂತರ ಜ್ಞಾನ ದಾಸೋಹ

ಪ್ರಾಚೀನ ಕಾಲದಿಂದ ಕೇವಲ ಧಾರ್ಮಿಕ ಉತ್ಸವವಾಗಿದ್ದ ಮಳಲಿಮಠದ ದೀಪೋತ್ಸವವನ್ನು ಡಾ.ನಾಗಭೂಷಣ ಶಿವಾಚಾರ್ಯರು ಕಳೆದ 25 ವರ್ಷಗಳಿಂದ ಜ್ಞಾನ ದಾಸೋಹದ ಜಾತ್ರೆಯನ್ನಾಗಿ ಮಾರ್ಪಡಿಸಿದ್ದಾರೆ. ಬಾಳೆಹೊನ್ನೂರಿನ ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಇದೇ ನ.14ರಂದು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗಿನಿಂದಲೇ ಶ್ರೀಮಠದ ಕರ್ತೃ ಗದ್ದುಗೆ ಸೇರಿದಂತೆ ಎಲ್ಲ ಲಿಂಗೈಕ್ಯ ಗುರುಗಳ ಗದ್ದುಗೆಗೆ ಹಾಗೂ ಶ್ರೀಜಗದ್ಗುರು ರೇಣುಕಾಚಾರ್ಯರಿಗೆ ಮತ್ತು ಶ್ರೀಸೋಮೇಶ್ವರ ಮಹಾಲಿಂಗಕ್ಕೆ ರುದ್ರಾಭಿಷೇಕ, ಹೋಮ-ಹವನ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಸಂಜೆ 5 ಗಂಟೆಗೆ ನಡೆಯುವ ಜನಜಾಗೃತಿ ಧರ್ಮ ಸಮಾರಂಭವನ್ನು ಸಂಸದರಾದ ಬಿ.ವೈ.ರಾಘವೇಂದ್ರ ಉದ್ಘಾಟಿಸಲಿದ್ದು, ಎಡೆಯೂರು, ಕವಲೇದುರ್ಗ ಸೇರಿದಂತೆ ನಾಡಿನ ವಿವಿಧ ಮಠಾಧೀಶರು, ರಾಜಕೀಯ ಮುಖಂಡರು, ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಮಾರಂಭದ ನಂತರ ಸಹಸ್ರಾರು ಸಂಖ್ಯೆಯಲ್ಲಿ ದೀಪಗಳನ್ನು ಬೆಳಗಿಸಲಾಗುತ್ತದೆ.