| ಮೃತ್ಯುಂಜಯ ಕಪಗಲ್ ಬೆಂಗಳೂರು/ಬೆಳಗಾವಿ
ಪ್ರಧಾನಿ ನರೇಂದ್ರ ಮೋದಿ ಬಳಿಕ ಬಿಜೆಪಿಯ ಅತ್ಯಂತ ಪ್ರಭಾವಿ ಶಕ್ತಿ, ಗೃಹ ಸಚಿವ ಅಮಿತ್ ಷಾ ಅವರ ರಾಜ್ಯ ಪ್ರವಾಸದ ವೇಳೆ ಸರ್ಕಾರದಲ್ಲಿ ‘ಏನೋ ಆಗಿಬಿಡುತ್ತದೆ’ ಎಂಬ ಊಹಾಪೋಹಕ್ಕೆ ಸ್ಪಷ್ಟ ತೆರೆ ಬಿದ್ದಿದೆ. ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಬಾಧಿತ ಎಂಬ ಸ್ಪಷ್ಟ ಸಂದೇಶದೊಂದಿಗೆ ಪಕ್ಷದೊಳಗೆ ಒಡಕು ದನಿ ಎತ್ತಿದವರಿಗೆ ಹಾಗೂ ಬಹು ನಿರೀಕ್ಷೆಯಲ್ಲಿದ್ದ ಪ್ರತಿಪಕ್ಷಕ್ಕೆ ಗಡಸು ಉತ್ತರವೇ ದೊರೆತಿದೆ. ಅಮಿತ್ ಷಾ ಅವರ ಎರಡು ದಿನಗಳ ರಾಜ್ಯ ಪ್ರವಾಸ ಭಾನುವಾರ ಬೆಳಗಾವಿಯಲ್ಲಿ ಕೊನೆಗೊಂಡಿತು. ಷಾ ಅವರು ಪಾಲ್ಗೊಂಡ ಎಲ್ಲ ಕಾರ್ಯಕ್ರಮಗಳಲ್ಲೂ ನಾಯಕತ್ವ, ಮುಂದಿನ ಹಾದಿ, ಪಕ್ಷ ಸಂಘಟನೆಯ ಗುರಿ ಸೇರಿದಂತೆ ಸಂಬಂಧಪಟ್ಟವರಿಗೆ ಹಲವು ಸಂದೇಶಗಳನ್ನು ಕೊಡುತ್ತಲೇ ಹೋದರು. ‘ಮೋದಿ ಮತ್ತು ಬಿಎಸ್ವೈ ಅವರದು ಡಬ್ಬಲ್ ಇಂಜಿನ್ ಸರ್ಕಾರ, ದೇಶ ಮತ್ತು ರಾಜ್ಯವನ್ನು ವಿಕಾಸದತ್ತ ಕೊಂಡೊಯ್ಯಲಿದೆ’ ಎಂದು ಬೆಳಗಾವಿಯಲ್ಲಿ ಜನವಿಕಾಸ ಸಮಾವೇಶದ ಸಮಾರೋಪದಲ್ಲಿ ಹೇಳುವ ಮೂಲಕ ಕರ್ನಾಟಕದಲ್ಲಿ ಬಿಎಸ್ವೈ ನಾಯಕತ್ವ ಅಬಾಧಿತವೆಂಬ ಷರಾ ಬರೆದರು. ಅಷ್ಟೇ ಅಲ್ಲದೇ ನಾಯಕತ್ವ, ಸರ್ಕಾರದ ವಿರುದ್ಧ ವಿನಾಕಾರಣ ಕಿರಿಕಿರಿ ಉಂಟು ಮಾಡುವ ಅತೃಪ್ತರ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಿ ಎಂದು ಸೂಚನೆ ನೀಡುವ ಮುಖಾಂತರ ಅಪಸ್ವರಕ್ಕೂ ಬೀಗ ಹಾಕಿದ್ದಾರೆ.
ಪಂಚಾಯಿತಿ ಗುರಿ: ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ತಾಂತ್ರಿಕ ವ್ಯಾಸಂಗದ ಪರಿಭಾಷೆಯಂತೆ ಪಾಸ್ ಆಗಿದ್ದೀರಿ. ತಾ.ಪಂ., ಜಿ.ಪಂ. ಚುನಾವಣೆಯಲ್ಲಿ ಫಲಿತಾಂಶದ ಪ್ರಮಾಣವನ್ನು ಉನ್ನತ ಶ್ರೇಣಿಗೆ ಕೊಂಡೊಯ್ದು ಸಿಂಹಪಾಲು ಸ್ಥಾನ ಪಡೆಯುವಂತೆ ಪಕ್ಷದ ಕಾರ್ಯಕರ್ತರಿಗೆ ಸಂಕಲ್ಪ ಮಾಡಿಸಿದರೆ, ಆಂತರಿಕ ಸಭೆಯಲ್ಲಿ ನಾಯಕರಿಗೆ 2023ರ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ವಾತಾವರಣ ಹದಗೊಳಿಸುವಂತೆ ತಾಕೀತು ಮಾಡಿದರು.
ಎಲ್ಲಕ್ಕಿಂತ ಮುಖ್ಯವಾಗಿ ಈ ಸರ್ಕಾರ ಯಡಿಯೂರಪ್ಪ ನೇತೃತ್ವದಲ್ಲಿ ಅವಧಿ ಪೂರ್ಣಗೊಳಿಸಲಿದೆ ಮತ್ತು ಮುಂದಿನ ಚುನಾವಣೆಯಲ್ಲೂ ಪೂರ್ಣ ಬಹುಮತದೊಂದಿಗೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂಬ ದೂರದೃಷ್ಟಿಯ ಆಲೋಚನೆಯನ್ನು ರಾಜ್ಯದ ಶಕ್ತಿ ಕೇಂದ್ರದಲ್ಲೇ ಪ್ರಸ್ತಾಪಿಸಿ, ಅಧಿಕಾರ ವರ್ಗ ಹಾಗೂ ನಾಡಿನ ಜನತೆಗೆ ಸಂದೇಶ ರವಾನಿಸಿದರು. ಕರ್ನಾಟಕದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸದಾ ಜತೆಗಿರುತ್ತದೆ, ಈಗಲೇ ಅನೇಕ ಕಾರ್ಯಕ್ರಮ ಮಾಡಿದೆ ಎಂದು ಟೀಕಾಕಾರರ ಬಾಯಿ ಮುಚ್ಚಿಸುವ ಪ್ರಯತ್ನವನ್ನೂ ಮಾಡಿದರು. ಒಟ್ಟಾರೆ ಸರ್ಕಾರದ ಕುರಿತು ಪಕ್ಷದೊಳಗಿನ ಗೊಂದಲ ಗೋಜಲುಗಳಿಗೆ ಅಮಿತ್ ಷಾ ರಾಜ್ಯ ಪ್ರವಾಸ ಸ್ಪಷ್ಟ ತೆರೆ ಎಳೆಯಿತು.
ರಾಜ್ಯದಲ್ಲಿ ಕಾಂಗ್ರೆಸ್ ನೆಲಸಮವಾಗಿದ್ದು, ಜೆಡಿಎಸ್ಗೆ ವಿಳಾಸವೇ ಇಲ್ಲದಂತಾಗಿದೆ. ಮುಂಬರುವ ಬೆಳಗಾವಿ ಲೋಕಸಭೆ, ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ನಿರೀಕ್ಷೆ ಸಾಕಾರಗೊಳಿಸಬೇಕು.
| ಬಿ.ಎಸ್.ಯಡಿಯೂರಪ್ಪ ಸಿಎಂ
ಬಿಎಸ್ವೈಗೆ ಬಹುಪರಾಕ್
ಬಾಗಲಕೋಟೆ ಜಿಲ್ಲೆಯ ನಿರಾಣಿ ಉದ್ಯಮ ಸಮೂಹ ಸಂಸ್ಥೆಯ ನೂತನ ಘಟಕಕ್ಕೆ ಭೂಮಿ ಪೂಜೆ ನೆರವೇರಿಸಿದ ಅಮಿತ್ ಷಾ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಗುಣಗಾನ ಮಾಡಿದರು. ರಾಜ್ಯದಲ್ಲಿ ಯಡಿಯೂರಪ್ಪ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೇಂದ್ರ ಸರ್ಕಾರ ರೈತರ ಪರವಾಗಿ ಜಾರಿಗೆ ತಂದಿರುವ ಅನೇಕ ಕಾರ್ಯಕ್ರಮಗಳನ್ನು ಪರಿಪೂರ್ಣವಾಗಿ ಅನುಷ್ಠಾನಗೊಳಿಸಿದ್ದಾರೆ. ಕರ್ನಾಟಕದಲ್ಲಿ ರೈತರ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದ್ದಾರೆ. ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತಿದ್ದಾರೆ ಎಂದು ಬಣ್ಣಿಸಿದರು.
ಡಬಲ್ ಇಂಜಿನ್ ಸರ್ಕಾರ
ಬೆಳಗಾವಿಯಲ್ಲಿ ನಡೆದ ಜನಸೇವಕ ಸಮಾವೇಶದಲ್ಲೂ ಅಮಿತ್ ಷಾ ಬಿಎಸ್ವೈರನ್ನು ಹೊಗಳಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ಹೆಚ್ಚುವರಿ ನೆರವು, ಕರೊನಾ ನಿಯಂತ್ರಣದಲ್ಲಿ ಮೇಲ್ಪಂಕ್ತಿ ಹಾಕಿಕೊಟ್ಟಿದ್ದು, ಸ್ವತಃ ಮೋದಿ ಹೊಗಳಿದ್ದಾರೆ ಎಂದು ಶಹಬ್ಬಾಸ್ಗಿರಿ ನೀಡಿದರು.
ಅಮಿತ್ ಷಾ ಕ್ಷಣಕ್ಷಣ
ಪಕ್ಷ ನಿಷ್ಠರಿಗೆ ಟಿಕೆಟ್ ಮುಂಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷಕ್ಕಾಗಿ ಅನೇಕ ವರ್ಷಗಳಿಂದ ದುಡಿದಿರುವ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಲು ಆದ್ಯತೆ ನೀಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಭರವಸೆ ನೀಡಿದ್ದಾರೆ.