ಕರ್ನಾಟಕದ ಸಿಂಧುಶ್ರೀ, ಉನ್ನತಿಗೆ ಏಷ್ಯನ್​ ಗೇಮ್ಸ್​ ಅರ್ಹತೆ 
ನ್ಯೂಸ್

ಕರ್ನಾಟಕದ ಸಿಂಧುಶ್ರೀ, ಉನ್ನತಿಗೆ ಏಷ್ಯನ್​ ಗೇಮ್ಸ್​ ಅರ್ಹತೆ

ಬೆಂಗಳೂರು: ಕರ್ನಾಟಕದ ಅಥ್ಲೀಟ್​ ಸಿಂಧುಶ್ರೀ ಜಿ. ಒಡಿಶಾದ ಭುವನೇಶ್ವರದಲ್ಲಿ ನಡೆಯುತ್ತಿರುವ 65ನೇ ರಾಷ್ಟ್ರೀಯ ಅಂತರ ರಾಜ್ಯ ಸೀನಿಯರ್​ ಅಥ್ಲೆಟಿಕ್ಸ್​ ಚಾಂಪಿಯನ್​ಷಿಪ್​ನ ಮಹಿಳೆಯರ ಪೋಲ್​ವಾಲ್ಟ್​ ವಿಭಾಗದಲ್ಲಿ ಚಿನ್ನದ ಪದಕ ಜಯಿಸುವ ಮೂಲಕ ಮುಂಬರುವ ಏಷ್ಯನ್​ ಗೇಮ್ಸ್​ಗೆ (Asian Games) ಅರ್ಹತೆ ಸಂಪಾದಿಸಿದ್ದಾರೆ. ಜತೆಗೆ ರಾಜ್ಯದ ಓಟಗಾರ್ತಿಯರಾದ ಉನ್ನತಿ ಅಯ್ಯಪ್ಪ ಮತ್ತು ಪ್ರಕೃತಿ ರೂಪಾ ರಾವ್​ ಕೂಡ ಏಷ್ಯಾಡ್​ ಅರ್ಹತೆ ಗಳಿಸಿದ್ದಾರೆ.

ಕಳಿಂಗಾ ಸ್ಟೇಡಿಯಂನಲ್ಲಿ ಗುರುವಾರ ನಡೆದ ಮಹಿಳೆಯರ ಪೋಲ್​ವಾಲ್ಟ್​ ಸ್ಪರ್ಧೆಯಲ್ಲಿ ಸಿಂಧುಶ್ರೀ 4.25 ಮೀ. ಎತ್ತರ ಹಾರುವ ಮೂಲಕ ನೂತನ ರಾಷ್ಟ್ರೀಯ ದಾಖಲೆಯನ್ನೂ ಬರೆದರು. ಈ ಮೂಲಕ ಹಾಲಿ ವರ್ಷ ಮೇನಲ್ಲಿ ಭರಣಿಕಾ ಎಲನ್​ಗೋವನ್​ 4.23 ಮೀ. ಎತ್ತರ ಹಾರಿ ನಿರ್ಮಿಸಿದ್ದ ದಾಖಲೆಯನ್ನು ಮುರಿದರು. ಜತೆಗೆ ಏಷ್ಯನ್​ ಗೇಮ್ಸ್​ ಮಾನದಂಡವನ್ನೂ (4.10 ಮೀ. ) ಸಾಧಿಸಿದರು.

ತಮಿಳುನಾಡಿನ ಭರಣಿಕಾ ಎಲನ್​ಗೋವನ್​ (4.20 ಮೀ) ಬೆಳ್ಳಿ ಮತ್ತು ಮಧ್ಯಪ್ರದೇಶದ ನಿತಿಕಾ ಅಕಾರೆ (4.10 ಮೀ) ಕಂಚಿನ ಪದಕ ಜಯಿಸಿದರು. ಕರ್ನಾಟಕದ ಇನ್ನೊರ್ವ ಸ್ಪರ್ಧಿ ಮರಿಯಾ ಜೈಸನ್​ (3.80 ಮೀ) 6ನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಉನ್ನತಿಗೆ ಬೆಳ್ಳಿ: ಮಹಿಳೆಯರ 200 ಮೀ. ಓಟದಲ್ಲಿ ಕರ್ನಾಟಕದ ಉನ್ನತಿ ಅಯ್ಯಪ್ಪ (23.40 ಸೆ) ಬೆಳ್ಳಿ ಮತ್ತು ಪ್ರಕೃತಿ ರೂಪಾ ರಾವ್​ (23.58ಸೆ) ಕಂಚಿನ ಪದಕ ಗೆದ್ದುಕೊಂಡರು. ಈ ಮೂಲಕ ಅವರಿಬ್ಬರೂ ಏಷ್ಯನ್​ ಗೇಮ್ಸ್​ ಅರ್ಹತೆ ಸಂಪಾದಿಸಿದರು. ಏಷ್ಯಾಡ್​ ಅರ್ಹತೆಗೆ 23.70 ಸೆಕೆಂಡ್​ನೊಳಗೆ ಸ್ಪರ್ಧೆ ಮುಗಿಸಬೇಕಾಗಿತ್ತು. ಮಹಾರಾಷ್ಟ್ರದ ಹರಿತಾ ಭದ್ರ (23.14ಸೆ) ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಕರ್ನಾಟಕದ ಇನ್ನೋರ್ವ ಸ್ಪರ್ಧಿ ವಿ. ಸುಧೀಾ (24.63ಸೆ) 7ನೇ ಸ್ಥಾನಕ್ಕೆ ತೃಪ್ತಿಪಟ್ಟರು.