ನ್ಯೂಸ್

ನಾಲ್ಕು ಅಂತಸ್ತಿನ ಬಿಲ್ಡಿಂಗ್ ಮೇಲಿನಿಂದ ಬಿದ್ದ ವಾಟರ್ ಟ್ಯಾಂಕ್; ನೋಡನೋಡುತ್ತಿದ್ದಂತೆ ಹಾರಿ ಹೋಯ್ತು ಎಗ್ ರೈಸ್ ತಿನ್ನಲು ಬಂದಿದ್ದವರ ಪ್ರಾಣಪಕ್ಷಿ

ಬೆಂಗಳೂರು: ಎಗ್ ರೈಸ್ ಅಂಗಡಿ ಮೇಲೆ ವಾಟರ್ ಟ್ಯಾಂಕ್ ಗೋಡೆ ಬಿದ್ದು, ಇಬ್ಬರು ಸಾವನ್ನಪ್ಪಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಮರ್ಷಿಯಲ್ ಸ್ಟ್ರೀಟ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಫುಟ್ ಪಾತ್ ಮೇಲೆ ಎಗ್ ರೈಸ್ ಮಾರಾಟ ಮಾಡುತ್ತಿದ್ದವರು ಗಂಭೀರವಾಗಿ ಗಾಯಗೊಂಡಿದ್ದರೆ, ಎಗ್ ರೈಸ್ ತಿನ್ನಲು ಬಂದಿದ್ದ ವ್ಯಕ್ತಿಗಳು ಸಾವನ್ನಪ್ಪಿದ್ದಾರೆ.

ನಾಲ್ಕು ಅಂತಸ್ತಿನ ಬಿಲ್ಡಿಂಗ್ ಕೆಳಗಡೆ ತಳ್ಳುವ ಗಾಡಿಯಲ್ಲಿ ಎಗ್ ರೈಸ್ ಮಾರಾಟ ಮಾಡಲಾಗುತ್ತಿತ್ತು. ಇದೇ ಬಿಲ್ಡಿಂಗ್ ಮೇಲಿದ್ದ ವಾಟರ್ ಟ್ಯಾಂಕ್ ( ಸಿಂಟೆಕ್ಸ್) ಬಿದ್ದಿದೆ ಎನ್ನಲಾಗಿದೆ. ನೀರು ತುಂಬಿದ್ದ ಸಿಂಟ್ಯಾಕ್ಸ್​​​ ಗೋಡೆ ವೀಕ್ ಆಗಿತ್ತು. ಈ ವೇಳೆ ಟ್ಯಾಂಕ್ ಇದ್ದ ಗೋಡೆ ಹಾಗೂ ಟ್ಯಾಂಕ್ ಎರಡೂ ಕುಸಿದು ಬಿದ್ದಿದೆ. ಟ್ಯಾಂಕ್ ಗೋಡೆ ಎಗ್ ರೈಸ್ ಮಾರಾಟ ಮಾಡುತ್ತಿದ್ದ ವ್ಯಕ್ತಿ ಹಾಗೂ ತಿನ್ನಲು ಬಂದಿದ್ದವರ ತಲೆ ಮೇಲೆ ಬಿದ್ದಿದೆ. ಆಗ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಓರ್ವ ಜೀವನ್ಮರಣ ಹೋರಾಟ ನಡೆಸುತ್ತಿದ್ದು, ಮತ್ತೊಬ್ಬನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗಾಯಾಳುಗಳನ್ನು ಸ್ಥಳೀಯ ಬೊರಿಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಘಟನಾ ಸ್ಥಳಕ್ಕೆ ಶಿವಾಜಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.