ಬೆಂಗಳೂರು: ʼಕರ್ನಾಟಕದಲ್ಲಿ ನವೀಕರಿಸಬಹುದಾದ ಇಂಧನ ಮತ್ತು ಇಂಧನ ಸಂಗ್ರಹ ಕ್ಷೇತ್ರಗಳಲ್ಲಿ ಹೂಡಿಕೆ ಹೆಚ್ಚಿಸಲು ನವೀಕರಿಸಬಹುದಾದ ಇಂಧನ ಹೂಡಿಕೆಯ ಜಾಗತಿಕ ಪ್ರಮುಖ ಕಂಪನಿಯಾಗಿರುವ ಕೋಪನ್‌ಹೆಗನ್ ಇನ್‌ಫ್ರಾಸ್ಟ್ರಕ್ಷರ್ ಪಾರ್ಟನರ್ಸ್ (ಸಿಐಪಿ) ಒಲವು ವ್ಯಕ್ತಪಡಿಸಿದೆʼ ಎಂದು ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ರಾಜ್ಯಕ್ಕೆ ಬಂಡವಾಳ ಹೂಡಿಕೆ ಆಕರ್ಷಿಸಲು ಡೆನ್ಮಾರ್ಕ್‌ಗೆ ಭೇಟಿ ನೀಡಿರುವ ಸಚಿವರ ನೇತೃತ್ವದಲ್ಲಿನ ರಾಜ್ಯದ ಉನ್ನತ ಮಟ್ಟದ ನಿಯೋಗದ ಜೊತೆಗಿನ ಭೇಟಿ ಸಂದರ್ಭದಲ್ಲಿ ʼಸಿಐಪಿʼ-ಯು ಈ ಮಾಹಿತಿ ಹಂಚಿಕೊಂಡಿದೆ. ʼಭಾರತಕ್ಕೆ ಸಂಬಂಧಿಸಿದ ತನ್ನ ಬಂಡವಾಳ ಹೂಡಿಕೆ ಕಾರ್ಯತಂತ್ರದಲ್ಲಿ ಕರ್ನಾಟಕಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಗದಗ ಜಿಲ್ಲೆಯಲ್ಲಿ 300 ಮೆಗಾವಾಟ್ ಸಾಮರ್ಥ್ಯದ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಆ್ಯಂಪಿನ್ ಸಹಯೋಗದಲ್ಲಿನ ಎರಡು ಪವನ ವಿದ್ಯುತ್ ಉತ್ಪಾದನೆ ಯೋಜನೆಗಳ ಅನುಷ್ಠಾನದಲ್ಲಿನ ಪ್ರಗತಿಯನ್ನು ʼಸಿಐಪಿʼ, ಸಚಿವರ ಜೊತೆ ಹಂಚಿಕೊಂಡಿದೆ.
ʼಸಿಐಪಿ-ನ ಈ ನಿಲುವು, ಭಾರತದಲ್ಲಿನ ಪವನ ವಿದ್ಯುತ್ ಮಾರುಕಟ್ಟೆಯಲ್ಲಿ ಕರ್ನಾಟಕವು ಅತಿದೊಡ್ಡ ಪಾಲು ಹೊಂದಿರುವುದನ್ನು ಮತ್ತೊಮ್ಮೆ ದೃಢಪಡಿಸುತ್ತದೆ. ʼಸಿಐಪಿʼನ ವಿಸ್ತರಣಾ ಯೋಜನೆಗಳಿಗೆ ರಾಜ್ಯ ಸರ್ಕಾರದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಲಾಗಿದೆʼ ಎಂದು ಸಚಿವರು ತಿಳಿಸಿದ್ದಾರೆ. ವಿವಿಧ ವಲಯಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಬಂಡವಾಳ ಹೂಡಿಕೆಗೆ ಕರ್ನಾಟಕವು ಆದ್ಯತೆಯ ತಾಣವಾಗಿರುವುದನ್ನು ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರು ಸ್ವೀಡನ್ ಹಾಗೂ ಡೆನ್ಮಾರ್ಕ್‌ಗಳಲ್ಲಿ ನಡೆಸಿದ ರೋಡ್‌ಷೋಗಳಲ್ಲಿ ಅಲ್ಲಿನ ಉದ್ಯಮ ದಿಗ್ಗಜರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಜಾಗತಿಕ ಆಹಾರ ಹಾಗೂ ಕೃಷಿ ಉದ್ದಿಮೆಗೆ ತಂತ್ರಜ್ಞಾನ ಒದಗಿಸುವ ಡೆನ್ಮಾರ್ಕ್‌ನ ಫಾಸ್ (ಎಫ್‌ಒಎಸ್‌ಎಸ್) ಕಂಪನಿಯ ಜೊತೆಗೆ ಸಚಿವರು ಮಾತುಕತೆ ನಡೆಸಿದರು. ರಾಜ್ಯದಲ್ಲಿ ತಯಾರಿಕೆ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ (ಆರ್ ಆ್ಯಂಡ್‌ಡಿ) ಸ್ಥಾಪಿಸಲು ಸಚಿವ ಪಾಟೀಲ ಅವರು ಆಹ್ವಾನ ನೀಡಿದ್ದಾರೆ. ರಾಜ್ಯದಲ್ಲಿ ವಹಿವಾಟು ವಿಸ್ತರಿಸುವ ಸಾಧ್ಯತೆಗಳ ಬಗ್ಗೆ ಕಂಪನಿಯು ಒಲವು ವ್ಯಕ್ತಪಡಿಸಿದೆ. ವಾಹನ ಸುರಕ್ಷತೆ ಸೌಲಭ್ಯಗಳನ್ನು ತಯಾರಿಸುವಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿ ಇರುವ ಸ್ವೀಡನ್ನಿನ ಆಟೊಲಿವ್ -ನ ಉನ್ನತಾಧಿಕಾರಿಗಳಾದ ಶ್ರೀಮತಿ ಗ್ಯಾಬ್ರಿಯೆಲ್ ಇಟೆಮ್ಯಾಡ್ ಮತ್ತು ಅಲೆಕ್ಸಾಂಡರ್ ಕ್ಯಾಂಪ್‌ಬೆಲ್ ವಿಲ್ಸನ್ ಅವರನ್ನು ಸಚಿವರು ಭೇಟಿಯಾಗಿದ್ದರು.
ಮೋಟರ್‌ಸೈಕಲ್ ಏರ್‌ಬ್ಯಾಗ್ ಮತ್ತು ಅತ್ಯಾಧುನಿಕ ಸುರಕ್ಷತಾ ತಂತ್ರಜ್ಞಾನ ಕ್ಷೇತ್ರದಲ್ಲಿನ ಹೂಡಿಕೆ ಅವಕಾಶಗಳನ್ನು ಪರಿಶೀಲಿಸುವ ಬಗ್ಗೆ ಕಂಪನಿಯು ಒಲವು ವ್ಯಕ್ತಪಡಿಸಿದೆ. ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಕೈಗಾರಿಕಾ ಅಭಿವೃದ್ಧಿ ಆಯುಕ್ತರಾದ ಗುಂಜನ್ ಕೃಷ್ಣ, ಕೆಐಎಡಿಬಿ ಮುಖ್ಯ ಎಂಜಿನಿಯರ್ ವೀರಭದ್ರಯ್ಯ ಅವರು ನಿಯೋಗದಲ್ಲಿ ಇದ್ದಾರೆ.