ಬೆಂಗಳೂರು ಸೇರಿ ಸೋಂಕು ಪ್ರಕರಣ ವರದಿಯಾದ 9 ಜಿಲ್ಲೆಗಳಲ್ಲಿ ಲಾಕ್ಡೌನ್ ಘೋಷಿಸಿದ್ದರೂ ಜನರು ಮನೆಯಲ್ಲಿ ಉಳಿಯದೆ ಎಲ್ಲೆಂದರಲ್ಲಿ ಓಡಾಡುವ, ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿದ್ದ ಪ್ರಕರಣಗಳು ವರದಿಯಾಗಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಕರ್ಫ್ಯೂ ಮಾದರಿ ಕ್ರಮಕ್ಕೆ ಮುಂದಾಗಿದೆ.
ರಾಜ್ಯದಲ್ಲಿ ಕರೊನಾ ಪೀಡಿತರ ಸಂಖ್ಯೆ 33ಕ್ಕೆ ಏರಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ಇಡೀ ದಿನ ವೈದ್ಯರು, ಅಧಿಕಾರಿಗಳು, ಸಚಿವರ ತಂಡ ಹಾಗೂ ಪ್ರತಿಪಕ್ಷಗಳ ಜತೆ ಚರ್ಚೆ ನಡೆಸಿದರು. ಮೊದಲಿಗೆ ಕೇವಲ 9 ಜಿಲ್ಲೆಗಳಲ್ಲಿ ಲಾಕ್ಡೌನ್ ಮುಂದುವರಿಸುವ ಉದ್ದೇಶ ಹೊಂದಿದ್ದರು. ಆದರೆ ಪ್ರತಿಪಕ್ಷಗಳಿಂದಲೂ ರಾಜ್ಯಾದ್ಯಂತ ವಿಸ್ತರಣೆ ಮಾಡುವಂತೆ ಒತ್ತಡ ಬಂದಿದ್ದರಿಂದ ಹಾಗೂ ವೈದ್ಯರ ತಂಡ ಸಹ ಅದೇ ರೀತಿಯ ಸಲಹೆ ಕೊಟ್ಟಿದ್ದರಿಂದ ಸಿಎಂ ಸಂಜೆ ಈ ನಿರ್ಧಾರ ಪ್ರಕಟಿಸಿದರು.
ಇವುಗಳಷ್ಟೇ ಲಭ್ಯ...: ದಿನಸಿ, ಕಿರಾಣಿ, ಹಾಲು, ತರಕಾರಿ, ಮಾಂಸ, ಮೀನು, ಔಷಧ, ಪೆಟ್ರೋಲ್ ಬಂಕ್, ಸರಕು ಸಾಗಣೆ, ಪೊಲೀಸ್, ಅಗ್ನಿಶಾಮಕ ಸೇವೆ, ಪಂಚಾಯತ್ ರಾಜ್ ಸಂಸ್ಥೆ, ಅಂಚೆ ಸೇವೆ, ವಿದ್ಯುಚ್ಛಕ್ತಿ, ನೀರು, ನಗರ ಪಾಲಿಕೆ ಸೇವೆ, ಬ್ಯಾಂಕ್, ಎಟಿಎಂ, ಟೆಲಿಕಾಂ, ಕೃಷಿ ಸಂಬಂಧಿತ ಚಟುವಟಿಕೆ, ಅಂಗಡಿಮುಂಗಟ್ಟುಗಳು.
ಸಹಕರಿಸದಿದ್ರೆ ಜೈಲು ಶಿಕ್ಷೆ, ದಂಡ: ಸಾರ್ವಜನಿಕರು ಹೆಚ್ಚು ಓಡಾಡದೆ, ಅಧಿಕಾರಿಗಳಿಗೆ ಸಹಕಾರ ನೀಡಬೇಕು. ಇಲ್ಲದಿದ್ದಲ್ಲಿ ಪೊಲೀಸರು ವಿಶೇಷ ಮತ್ತು ಸ್ಥಳೀಯ ಕಾನೂನುಗಳ ನಿಯಮ 270 ಹಾಗೂ ಪೊಲೀಸ್ ಕಾಯ್ದೆಯ ಪ್ರಕಾರ ಕ್ರಮ ಕೈಗೊಳ್ಳಲಿದ್ದಾರೆ. ಎರಡು ವರ್ಷದ ತನಕ ವಿಸ್ತರಿಸಬಹುದಾದ ಜೈಲು ಶಿಕ್ಷೆ ಹಾಗೂ ದಂಡ ಇದೆ. ಆದ್ದರಿಂದ ಸಾರ್ವಜನಿಕರು ಹುಷಾರಾಗಿರಬೇಕು.
ಒಂದೇ ದಿನ 7 ಪ್ರಕರಣ: ಕರ್ನಾಟಕದಲ್ಲಿ ಸೋಮವಾರ ಒಂದೇ ದಿನ 7 ಪ್ರಕರಣ ಬೆಳಕಿಗೆ ಬಂದಿವೆ. ಇದರಿಂದಾಗಿ ಒಟ್ಟಾರೆ ಪ್ರಕರಣಗಳ ಸಂಖ್ಯೆ 33ಕ್ಕೆ ಏರಿಕೆ ಆಗಿದೆ.