ನ್ಯೂಸ್

ನಾವೀನ್ಯತೆ, ತಂತ್ರಜ್ಞಾನ ಸಂಬಂಧ ವೃದ್ಧಿ; ಚಿಲಿ ದೇಶದೊಂದಿಗೆ ಕರ್ನಾಟಕ ಒಪ್ಪಂದ|Agreement with Chile

ಬೆಂಗಳೂರು: ನಾವೀನ್ಯತೆ ಮತ್ತು ತಂತ್ರಜ್ಞಾನ ಸಂಬಂಧಗಳನ್ನು ಬಲಪಡಿಸಲು ಕರ್ನಾಟಕವು ಚಿಲಿ ದೇಶದೊಂದಿಗೆ ಉದ್ದೇಶ ಪತ್ರಕ್ಕೆ (ಲೆಟರ್ ಟು ಇಟೆಂಟ್) ಸಹಿ ಹಾಕಿದೆ(Karnataka signs agreement with Chile to enhance innovation and technology ties).

ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ಅಂತರರಾಷ್ಟ್ರೀಯ ಸಹಯೋಗವನ್ನು ಬೆಳೆಸುವ ಮಹತ್ವದ ಹೆಜ್ಜೆಯಾಗಿ, ಕರ್ನಾಟಕ ಸರ್ಕಾರವು ಬೆಂಗಳೂರಿನಲ್ಲಿ ನಡೆದ ನಾವೀನ್ಯತೆ ಶೃಂಗಸಭೆಯ ಸಂದರ್ಭದಲ್ಲಿ ಚಿಲಿ ಸರ್ಕಾರದೊಂದಿಗೆ ಉದ್ದೇಶ ಪತ್ರಕ್ಕೆ ಸಹಿ ಹಾಕಿದೆ.

ಚಿಲಿಯ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಮತ್ತು ಅವರ ಜೊತೆಗಿದ್ದ ಉನ್ನತ ಮಟ್ಟದ ನಿಯೋಗದ ಭಾರತ ಭೇಟಿಯ ಭಾಗವಾಗಿ ಈ ಶೃಂಗಸಭೆ ಆಯೋಜಿಸಲಾಗಿದೆ.

ಹೊಸ ತಂತ್ರಜ್ಞಾನ, ಸ್ಟಾರ್ಟ್‌ಅಪ್‌ಗಳು, ಸಂಶೋಧನೆ ಮತ್ತು ಅಭಿವೃದ್ಧಿ, ಜ್ಞಾನ ವಿನಿಮಯ ಮತ್ತು ಕೌಶಲ ಅಭಿವೃದ್ಧಿ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಕರ್ನಾಟಕ ಮತ್ತು ಚಿಲಿಯ ನಡುವೆ ಪರಸ್ಪರ ಸಹಕಾರಕ್ಕಾಗಿ ನಿರ್ದಿಷ್ಟತೆಯನ್ನು ಸ್ಥಾಪಿಸುವುದು ಎಲ್‌ಒಐ ಗುರಿಯಾಗಿದೆ.

ಗ್ಲೋಬಲ್ ಇನ್ನೋವೇಶನ್ ಅಲೈಯನ್ಸ್(ಜಿಐಎ) ಅಡಿಯಲ್ಲಿ ಕರ್ನಾಟಕದೊಂದಿಗೆ ಪಾಲುದಾರಿಕೆ ಹೊಂದಿರುವ ಮೊದಲ ಲ್ಯಾಟಿನ್ ಅಮೇರಿಕನ್ ದೇಶ ಚಿಲಿಯಾಗಿದೆ. ಇದು ಕರ್ನಾಟಕ ಸರ್ಕಾರ ಗಡಿಯಾಚೆಗಿನ ನಾವೀನ್ಯತೆ, ಸಂಶೋಧನೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು 30ಕ್ಕೂ ಹೆಚ್ಚು ದೇಶಗಳೊಂದಿಗೆ ಸಹಯೋಗವನ್ನು ಹೊಂದುವ ಪ್ರಮುಖ ಉಪಕ್ರಮವಾಗಿದೆ.

ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್(Gabriel Boric) ಅವರು ಕರ್ನಾಟಕದ ಪಾಲುದಾರಿಕೆಯನ್ನು ಸ್ವಾಗತಿಸಿದರಲ್ಲದೆ, ಕರ್ನಾಟಕದ ನವೋದ್ಯಮಗಳು ಮತ್ತು ತಂತ್ರಜ್ಞಾನ ಕಂಪನಿಗಳನ್ನು ಚಿಲಿಯಲ್ಲಿನ ಅವಕಾಶಗಳನ್ನು ಅನ್ವೇಷಿಸಲು ಆಹ್ವಾನಿಸಿದರು.

ಸಮ್ಮೇಳನದಲ್ಲಿ ಮಾತನಾಡಿದ ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ(Priyank Kharge), ಜಾಗತಿಕ ತಂತ್ರಜ್ಞಾನ ಮತ್ತು ನಾವೀನ್ಯತೆ ಕೇಂದ್ರವಾಗಿ ಕರ್ನಾಟಕ ತನ್ನ ಸಾಮರ್ಥ್ಯ ಸಾಬೀತುಪಡಿಸುತ್ತಿದೆ. ಈ ಪಾಲುದಾರಿಕೆ ಕರ್ನಾಟಕ ಮತ್ತು ಚಿಲಿಯ ಪರಿಸರ ವ್ಯವಸ್ಥೆಗಳ ನಡುವಿನ ಆಳವಾದ ಸಹಯೋಗದ ಆರಂಭವನ್ನು ಗುರುತಿಸುತ್ತದೆ ಎಂದು ಹೇಳಿದರು.

ಚಿಲಿ ಸಹಯೋಗದಿಂದ ನಿರೀಕ್ಷಿಸಲಾಗಿರುವ ಅಂಶಗಳು

* ಎರಡೂ ಪ್ರದೇಶಗಳ ನವೋದ್ಯಮಗಳಿಗೆ ಮಾರುಕಟ್ಟೆ ಪ್ರವೇಶ ಹೆಚ್ಚಿಸುವುದು.

* ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ ಉಪಕ್ರಮಗಳು ಮತ್ತು ಶೈಕ್ಷಣಿಕ ವಿನಿಮಯಗಳನ್ನು ಸುಗಮಗೊಳಿಸುವುದು.

* ನೀತಿ ನಿರೂಪಣೆ ಮತ್ತು ನಾವೀನ್ಯತೆ ಆಡಳಿತದಲ್ಲಿ ಉತ್ತಮ ಅಭ್ಯಾಸಗಳ ಹಂಚಿಕೆಯನ್ನು ಸಕ್ರಿಯಗೊಳಿಸುವುದು.

* ಕರ್ನಾಟಕ ಮತ್ತು ಚಿಲಿಯಲ್ಲಿ ಸಂಶೋಧನೆ ಮತ್ತು ನಾವೀನ್ಯತೆ ಸಂಸ್ಥೆಗಳ ನಡುವಿನ ಸಾಂಸ್ಥಿಕ ಸಂಪರ್ಕಗಳನ್ನು ಬಲಪಡಿಸುವುದು.

* ಪ್ರಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೂಡಿಕೆಗಳು ಮತ್ತು ಪಾಲುದಾರಿಕೆಗಳನ್ನು ಉತ್ತೇಜಿಸುವುದು

ಈ ಪಾಲುದಾರಿಕೆಯು ಜಾಗತಿಕ ನಾವೀನ್ಯತೆ ಕೇಂದ್ರವಾಗಿ ಕರ್ನಾಟಕದ ಸ್ಥಾನವನ್ನು ಗಟ್ಟಿಗೊಳಿಸುವುದು.