ನ್ಯೂಸ್

ವೋಡ್ಕಾ ಬೆಲೆ ದೆಹಲಿಯಲ್ಲಿ 134 ರೂ.; ಕರ್ನಾಟಕದಲ್ಲಿ 513 ರೂ.!

ನವದೆಹಲಿ: ಪ್ರವಾಸಿಗರು ಗೋವಾ ನೆಚ್ಚಿಕೊಳ್ಳುವುದು ಅಲ್ಲಿನ ಕಡಲ ತೀರಗಳಿಗೆ ಮಾತ್ರವಲ್ಲ, ಮದ್ಯ ಅಗ್ಗದಲ್ಲಿ ಸಿಗುತ್ತದೆ ಎಂಬ ಕಾರಣಕ್ಕೂ ಆಗಾಗ್ಗೆ ಗೋವಾ ಪ್ರವಾಸ ಮಾಡುವುದು ಗುಟ್ಟೇನೂ ಅಲ್ಲ. ಕಡಿಮೆ ತೆರಿಗೆ ಕಾರಣಕ್ಕೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಗೋವಾದಲ್ಲಿ ಕಡಿಮೆ ದರದಲ್ಲಿ ಮದ್ಯ ಸಿಗುತ್ತದೆ. ಆದರೆ ನೆರೆಯ ಕರ್ನಾಟಕದಲ್ಲಿ ಇದು ವ್ಯತಿರಿಕ್ತ. ಹೆಚ್ಚು ತೆರಿಗೆ ಹೊಂದಿರುವ ಕರ್ನಾಟಕದಲ್ಲಿ ಒಂದು ಬಾಟಲ್​ ಮದ್ಯಕ್ಕೆ ಅತಿ ಹೆಚ್ಚಿನ ದರ ವಿಧಿಸಲಾಗಿದೆ.

ಇಂಟರ್​ ನ್ಯಾಷನಲ್​ ಸ್ಪಿರಿಟ್ಸ್​ ಆ್ಯಂಡ್​ ವೈನ್ಸ್​ ಅಸೋಸಿಯೇಷನ್​ ಆಫ್​ ಇಂಡಿಯಾದ ಅಧ್ಯಯನದ ಪ್ರಕಾರ ಒಂದು ಬಾಟಲ್​ ವಿಸ್ಕಿ, ರಮ್​, ವೋಡ್ಕಾ ಮತ್ತು ಜಿನ್​ಗೆ ಗೋವಾದಲ್ಲಿ 100 ರೂ, ದೆಹಲಿಯಲ್ಲಿ 134 ರೂ. ಇದ್ದರೆ ಕರ್ನಾಟಕದಲ್ಲಿ ಬರೋಬ್ಬರಿ ರೂ 513 ಕೊಟ್ಟು ಖರೀದಿಸಬೇಕಾದ ಸ್ಥಿತಿಯಿದೆ.

ಕರ್ನಾಟಕದಲ್ಲಿ ಮದ್ಯದ ಬಾಟಲ್​ಗೆ ಗರಿಷ್ಠ ರಿಟೇಲ್​ ದರಕ್ಕಿಂತ (ಎಂಆರ್​ಪಿ) ಶೇ.83ರಷ್ಟು ಹೆಚ್ಚಿನ ದರವಿದ್ದರೆ, ಮಹಾರಾಷ್ಟ್ರದಲ್ಲಿ ಶೇ.71ರಷ್ಟಿದೆ. ಅದೇ ಗೋವಾದಲ್ಲಿ ಎಂಆರ್​ಪಿ ದರಕ್ಕೆ 49%ನಷ್ಟೇ ವಿಧಿಸಲಾಗುತ್ತದೆ. ವಿದೇಶದಿಂದ ಆಮದಾದ ಉತ್ಪನ್ನದ ಮೇಲೆ ವಿಧಿಸಲಾದ ಆಮದು ಸುಂಕದಲ್ಲಿನ ಬೆಲೆ ಸೂಚ್ಯಂಕ ಅಂಶಗಳು ರಾಜ್ಯಗಳಾದ್ಯಂತ ಏಕರೂಪದ್ದಾಗಿರುತ್ತವೆ. ವಿದೇಶಿ ಮದ್ಯ ಕಂಪನಿಗಳು ವೈನ್​ ಮತ್ತು ಸ್ಪಿರಿಟ್​ಗಳ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸಬೇಕೆಂದು ಕಳೆದ ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ. ಸದ್ಯ ಶೇ.150ರಷ್ಟು ಆಮದು ಸುಂಕವಿದೆ.

ಮದ್ಯದ ಕಳ್ಳಸಾಗಣೆಗೆ ಕಾರಣ

ಸ್ಥಳಿಯ ತೆರಿಗೆಗಳ ಪರಿಣಾಮವಾಗಿ, ದೆಹಲಿ ಮತ್ತು ಮುಂಬೈನಲ್ಲಿ ಜನಪ್ರಿಯ ಸ್ಕಾಚ್​ ಬ್ರಾಂಡ್​ಗಳ ಬಾಟಲಿಯ ಬೆಲೆಯಲ್ಲಿ 20%ರಷ್ಟು ವ್ಯತ್ಯಾಸವಿರಬಹುದು. ಉದಾಹರಣೆಗೆ, ದೆಹಲಿಯಲ್ಲಿ ಸುಮಾರು ರೂ 3,100 ಬೆಲೆಯ ಬ್ಲ್ಯಾಕ್ ಲೇಬಲ್​ ಬಾಟಲಿಗೆ ಮುಂಬೈನಲ್ಲಿ ಸುಮಾರು ರೂ 4,000ಕ್ಕೆ ಮಾರಾಟವಾಗುತ್ತದೆ. ತೆರಿಗೆಯಲ್ಲಿನ ಅಗಾಧ ವ್ಯತ್ಯಾಸವೂ ರಾಜ್ಯದ ಗಡಿಗಳಲ್ಲಿ ಮದ್ಯದ ಕಳ್ಳಸಾಗಣೆಗೆ ಕಾರಣವಾಗಿದೆ. ಜಿಎಸ್​ಟಿ ವ್ಯಾಪ್ತಿಯಿಂದ ಹೊರಗುಳಿದಿರುವ ಉತ್ಪನ್ನಗಳ ಪೈಕಿ ಮದ್ಯ ಮತ್ತು ಪೆಟ್ರೋಲಿಯಂ ಕೂಡ ಸೇರಿವೆ. ಪೆಟ್ರೋಲಿಯಂ ಉತ್ಪನ್ನಗಳಾದ ಪೆಟ್ರೋಲ್​ ಮತ್ತು ಡೀಸೆಲ್​ ನ್ನು ಜಿಎಸ್​ಟಿ ವ್ಯಾಪ್ತಿಗೆ ತರುವ ಬಗ್ಗೆ ಚರ್ಚೆ ನಡೆಯುತ್ತಿದ್ದರೂ ಮದ್ಯದ ಬಗ್ಗೆ ಚರ್ಚೆಯಾಗಿಲ್ಲ. ಇದರಿಂದಾಗಿ ಗ್ರಾಹಕರ ಮೇಲೆ ಭಾರೀ ಹೊರೆ ಬೀಳುತ್ತಿದೆ.