ನ್ಯೂಸ್

ವಿದ್ರೋಹಿಗಳು ಬಾಹರ್: ಪಾಕಿಸ್ತಾನದ ಪರ ಘೋಷಣೆ ಕೂಗಿದ್ದ ಮೂವರು ಬಂಧಮುಕ್ತ, ಖಾಕಿ ನಡೆ ಅನುಮಾನಕ್ಕೆ ಎಡೆ

ಹುಬ್ಬಳ್ಳಿ: ಪಾಕಿಸ್ತಾನದ ಪರ ಬಹಿರಂಗವಾಗಿ ಘೋಷಣೆ ಕೂಗಿದ್ದಲ್ಲದೆ ಅದನ್ನು ವಿಡಿಯೋ ಮಾಡಿ ಹುಬ್ಬಳ್ಳಿ ಪೊಲೀಸರಿಂದ ಬಂಧನಕ್ಕೀಡಾಗಿದ್ದ ಕಾಶ್ಮೀರ ಮೂಲದ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಒಂದೇ ದಿನದಲ್ಲಿ ಬಿಡುಗಡೆಯಾಗಿದ್ದಾರೆ. ದೇಶದ್ರೋಹ ಪ್ರಕರಣ ದಾಖಲಾಗಿರುವ ಹೊರತಾಗಿಯೂ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸದೆ ಸಿಆರ್​ಪಿಸಿ ಕಾಯ್ದೆ 169ರ ಅಡಿ ಬಿಡುಗಡೆ ಮಾಡಿರುವ ಪೊಲೀಸರ ನಡೆ ಅನುಮಾನಕ್ಕೆ ಎಡೆಮಾಡಿದೆ. ಜತೆಗೆ, ರಾಜಕೀಯ ವಲಯದಲ್ಲೂ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.

ಪಾಕಿಸ್ತಾನದ ಪರ ಘೋಷಣೆ ಕೂಗಿದ್ದ ವಿದ್ಯಾರ್ಥಿಗಳಾದ ಕಾಶ್ಮೀರ ಬಾರಾಮುಲ್ಲಾ ಮೂಲದ ಬಾಸಿತ್ ಆಶಿಕ್ ಸೋಫಿ, ಅನಂತನಾಗ್ ನಗರದ ತಾಲಿಬ್ ಮಜೀದ ಹಾಗೂ ಅಮೀರ ಮೊಯಿನುದ್ದೀನ್ ಬಿಡುಗಡೆಗೊಂಡಿದ್ದು, ಗೋಕುಲ ರೋಡ್ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಬಂಧಿತರನ್ನು 24 ತಾಸಿನಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿತ್ತು. ವಿಡಿಯೋ ಒಂದನ್ನೇ ಸಾಕ್ಷಿಯಾಗಿ ತೋರಿಸಿದರೆ ಕೋರ್ಟ್​ನಲ್ಲಿ ಜಾಮೀನು ದೊರೆಯಬಹುದೆನ್ನುವ ಕಾರಣಕ್ಕೆ ಸೂಕ್ತ ಸಾಕ್ಷ್ಯ ಸಂಗ್ರಹಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಲುವಾಗಿ ಪೊಲೀಸರೇ ಹೀಗೆ ಮಾಡಿದ್ದಾರೆಂದು ಹೇಳಲಾಗುತ್ತಿದೆ.

ಸದ್ಯ ಪೊಲೀಸರು ವಿದ್ಯಾರ್ಥಿಗಳ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದಾರೆ. ವಶಪಡಿಸಿಕೊಂಡಿರುವ ಅವರ ಲ್ಯಾಪ್ ಟಾಪ್, ಮೊಬೈಲ್​ನಿಂದ ಸಂಗ್ರಹಿಸಿಕೊಂಡ ಮಾಹಿತಿ ಪರಿಶೀಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೆಳಗಾವಿಗೆ ರವಾನೆ: ಪೊಲೀಸರಿಂದ ಬಿಡುಗಡೆಗೊಂಡ ಬಳಿಕ ಕಾಶ್ಮೀರಿ ವಿದ್ಯಾರ್ಥಿಗಳನ್ನು ಬೆಳಗಾವಿಗೆ ಕರೆದೊಯ್ಯಲಾಗಿದೆ. ಹುಬ್ಬಳ್ಳಿ ಇಂಜಿನಿಯರಿಂಗ್ ಕಾಲೇಜಿನಿಂದ ಬೆಳಗಾವಿ ಇಂಜಿನಿಯರಿಂಗ್ ಕಾಲೇಜಿಗೆ ಕರೆದೊಯ್ಯಲಾಗಿದೆ ಎನ್ನಲಾಗಿದೆ.

ಮುಜುಗರ ತಪ್ಪಿಸುವ ಯತ್ನ?: ಸೋಮವಾರ ವಿಧಾನಸಭೆ ಅಧಿವೇಶನ ಆರಂಭವಾಗುತ್ತಿದೆ. ಬೀದರ್​ನ ಶಾಲೆಯೊಂದರಲ್ಲಿ ಪ್ರಧಾನಿಯನ್ನು ಟೀಕಿಸುವ ನಾಟಕ ಪ್ರದರ್ಶಿಸಿದ್ದರ ವಿರುದ್ಧ ಪ್ರಕರಣವನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಅಲ್ಲಿ ಪ್ರತಿಭಟನೆ ನಡೆದಿದೆ. ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟರ ಶಾಲೆಯಲ್ಲಿ ಮಕ್ಕಳು ಪ್ರದರ್ಶಿಸಿದ ರೂಪಕದ ವಿರುದ್ಧ ದಾಖಲಾಗಿರುವ ಪ್ರಕರಣವೂ ಸರ್ಕಾರಕ್ಕೆ ಮುಜುಗರ ತಂದಿದೆ. ಇಂಥ ಸಂದರ್ಭದಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳ ಪ್ರಕರಣ ಮತ್ತೊಂದು ಅಸ್ತ್ರವಾಗಿ ಪ್ರತಿಪಕ್ಷಗಳ ಕೈಗೆ ಸಿಕ್ಕಿ ರಾದ್ಧಾಂತವಾಗುವುದನ್ನು ತಪ್ಪಿಸಿಕೊಳ್ಳಲು ಸರ್ಕಾರ ಮುಂದಾಗಿದೆ ಎಂಬ ಆರೋಪ ಕೇಳಿಬರತೊಡಗಿದೆ.

ಆರೋಪಿತರ ವಿರುದ್ಧ ಹಾಕಲಾಗಿರುವ ಎಲ್ಲ 5 ಕಲಂಗಳು ಜಾಮೀನುರಹಿತದ್ದಾಗಿವೆ. ಆದರೆ, ನ್ಯಾಯಾಧೀಶರ ಎದುರೂ ಹಾಜರುಪಡಿಸದೆ ಠಾಣೆಯಲ್ಲಿಯೇ ಮುಚ್ಚಳಿಕೆ ಮೇಲೆ ಬಿಟ್ಟಿರುವುದು ಹೇಗೆ ಎಂಬುದು ಮತ್ತಷ್ಟು ಗೊಂದಲ, ಅನುಮಾನ ಹೆಚ್ಚಿಸಿದೆ. ಕಾಶ್ಮೀರಿ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿ, ಅವರ ವಿರುದ್ಧ ಶನಿವಾರ ದೂರು ನೀಡಿದ್ದ ಖಾಸಗಿ ಇಂಜಿನಿಯರಿಂಗ್ ಕಾಲೇಜ್ ಪ್ರಾಂಶುಪಾಲರೇ, ಭಾನುವಾರ ಬಾಂಡ್ ನೀಡಿರುವುದೂ ಅನುಮಾನಕ್ಕೆ ಕಾರಣವಾಗಿದೆ. ಆದರೆ, ಪೊಲೀಸರು ಮಾತ್ರ ಪ್ರಕರಣದ ಸಾಕ್ಷ್ಯ ಸಂಗ್ರಹಿಸಲಾಗುತ್ತಿದೆ ಎನ್ನುತ್ತಿದ್ದಾರೆ. ದೇಶದ್ರೋಹ ಪ್ರಕರಣಗಳು

# ಜ. 8ರಂದು ಮೈಸೂರು ವಿವಿ ಆವರಣದಲ್ಲಿ ಸಿಎಎ, ಎನ್​ಆರ್​ಸಿ ವಿರುದಟಛಿದ ಪ್ರತಿಭಟನೆ ವೇಳೆ ತಮಿಳುನಾಡು ಮೂಲದ ನಳಿನಿ ಬಾಲಕುಮಾರ್ ಎಂಬಾಕೆ ‘?ೕ ಕಾಶ್ಮೀರ್’ ಭಿತ್ತಿಪತ್ರ ಪ್ರದರ್ಶಿಸಿದ್ದರು. ಆಕೆ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಾಗಿತ್ತು.

# ಜ.21ರಂದು ಬೀದರ್​ನ ಶಾಹಿನ್ ವಿದ್ಯಾಸಂಸ್ಥೆಯಲ್ಲಿ ನಡೆದ ಸಿಎಎ ವಿರೋಧಿ ನಾಟಕ ಪ್ರದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದಟಛಿ ಅವಹೇಳನಕಾರಿ ಸಂಭಾಷಣೆ ಕೇಳಿಬಂದಿತ್ತು. ಶಾಲಾ ಆಡಳಿತ ಮಂಡಳಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿತ್ತು.

# 2016ರ ಆ.14ರಂದು ಬೆಂಗಳೂರಿನ ವಸಂತನಗರ ಮಿಲ್ಲರ್ ರಸ್ತೆ ದಿ ಯುನೈಟೆಡ್ ಥಿಯಾಲಾಜಿಕಲ್ ಕಾಲೇಜಿನಲ್ಲಿ ಆಮ್ನೆಸ್ಟಿ ಸಂಸ್ಥೆ ಇಂಡಿಯಾ ಸಂಸ್ಥೆಯ ಬ್ರೋಕನ್ ಫ್ಯಾಮಿಲಿಸ್- ಜರ್ನಿ ಫಾರ್ ಜಸ್ಟೀಸ್ ಎಂಬ ಕಾರ್ಯಕ್ರಮದಲ್ಲಿ ಕೆಲವರು ಆಜಾದಿ ಹೆಸರಿನಲ್ಲಿ ಭಾರತೀಯ ಸೇನೆ ವಿರುದ್ಧ ಘೊಷಣೆ ಕೂಗಿದ್ದರು.

ಸಿಆರ್​ಪಿಸಿ 169 ಬಾಂಡ್ ಮೇಲೆ ಕಾಲೇಜು ಆಡಳಿತ ಮಂಡಳಿ ಒಪ್ಪಿಗೆ ಮೇರೆಗೆ ಮೂವರು ಕಾಶ್ಮೀರಿ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಲಾಗಿದೆ. ಸದ್ಯ ವಿಚಾರಣೆ ಸಂಬಂಧ ಬಿಡಲಾಗಿದ್ದು, ನಾವು ಕರೆದಾಗ ಮತ್ತೆ ಹಾಜರಾಗಬೇಕು. ಸೂಕ್ತ ಸಾಕ್ಷ್ಯ ಸಂಗ್ರಹಿಸಿ ಕೋರ್ಟ್​ಗೆ ಹಾಜರುಪಡಿಸಲಾಗುವುದು. | ಆರ್. ದಿಲೀಪ ಪೊಲೀಸ್ ಆಯುಕ್ತ

ಖಾಕಿ ವಿರುದ್ಧ ಆಕ್ರೋಶ ಶನಿವಾರ ಮಧ್ಯಾಹ್ನ ಆರೋಪಿಗಳನ್ನು ಬಂಧಿಸಿದ ಬಳಿಕ 24 ತಾಸಿನಲ್ಲಿ ನ್ಯಾಯಾ ಲಯಕ್ಕೆ ಹಾಜರುಪಡಿಸಬೇಕಿತ್ತು. ದೇಶ ದ್ರೋಹ ಪ್ರಕರಣ ದಾಖಲಾಗಿದ್ದರೂ ಸಿಆರ್​ಪಿಸಿ 169ರನ್ವಯ ಬಾಂಡ್ ಮೇಲೆ ಭಾನುವಾರ ಬೆಳಗ್ಗೆ ಬಿಡುಗಡೆ ಮಾಡಿರುವ ಪೊಲೀಸರ ನಡೆಗೆ ಹಿಂದುಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಪಾಕಿಸ್ತಾನ ಪರ ಘೊಷಣೆ ಕೂಗೋದು ನಿಜವಾದ ದೇಶದ್ರೋಹ. ಬೀದರ್​ನ ಶಾಹಿನ್ ಶಾಲೆಯಂಥ ಪ್ರಕರಣದಲ್ಲಿ ಕೇಸು ಹಾಕುತ್ತಾರೆ, ಪಾಕ್ ಪರ ಘೊಷಣೆ ಕೂಗಿದವರ ವಿರುದ್ಧ ಏನು ಮಾಡಿದ್ದಾರೆ? ಸರ್ಕಾರದ ನಡೆ ನಿಜಕ್ಕೂ ಸರಿಯಲ್ಲ. | ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ ದೇಶದ್ರೋಹ ಆರೋಪ ಇರುವ ಕಾಶ್ಮೀರಿ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಿದ್ಯಾಕೆ? ಪೊಲೀಸರ ನಡೆ ಅನುಮಾನ ಮೂಡಿಸುತ್ತಿದೆ. ಯಾರ ಮೇಲೆ ಕೇಸು ದಾಖಲಿಸುವುದು ಅಗತ್ಯವಿಲ್ಲವೋ ಅವರ ಮೇಲೆ ಪ್ರಕರಣ ಹಾಕುತ್ತಾರೆ, ಪಾಕಿಸ್ತಾನದ ಪರ ಘೊಷಣೆ ಕೂಗುವವರನ್ನು ಬಿಡುತ್ತಾರೆ. | ರಾಮಲಿಂಗಾ ರೆಡ್ಡಿ ಮಾಜಿ ಗೃಹ ಸಚಿವ

ಪೊಲೀಸ್ ಠಾಣೆಗೆ ಮುತ್ತಿಗೆ

ಮೂವರು ಕಾಶ್ಮೀರಿ ವಿದ್ಯಾರ್ಥಿಗಳನ್ನು ಬಾಂಡ್ ಮೇಲೆ ಬಿಡುಗಡೆ ಮಾಡಿ ರುವುದನ್ನು ವಿರೋಧಿಸಿ ಭಾನುವಾರ ಸಂಜೆ ಹಿಂದುಪರ ಸಂಘಟನೆಗಳು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಆರಂಭಿಸಿವೆ.

ವಕಾಲತು ಇಲ್ಲ

ಸೂಕ್ತ ಸಾಕ್ಷ್ಯ ಸಿಗದ ಸಂದರ್ಭದಲ್ಲಷ್ಟೇ ಸೆಕ್ಷನ್ 169 ಅನ್ವಯಿಸಲಾಗುತ್ತದೆ. ವಿಡಿಯೋ ದೊರೆತಿರುವುದರಿಂದ ಈ ಪ್ರಕರಣದಲ್ಲಿ ಈ ಸೆಕ್ಷನ್ ಅನ್ವಯಿಸುವುದಿಲ್ಲ. ಇದರಲ್ಲಿ ರಾಜಕೀಯ ದುರುದ್ದೇಶ ಕಂಡುಬರುತ್ತಿದೆ. ದೇಶದ್ರೋಹಿಗಳ ಪರ ಯಾರೂ ವಕಾಲತ್ತು ವಹಿಸಬಾರದೆಂದು ಹುಬ್ಬಳ್ಳಿ ವಕೀಲರ ಸಂಘದಿಂದ ನಿರ್ಣಯಿಸಿರುವುದಾಗಿ ಸಂಘದ ಪ್ರಧಾನ ಕಾರ್ಯದರ್ಶಿ ಗುರು ಹಿರೇಮಠ ವಿಜಯವಾಣಿಗೆ ತಿಳಿಸಿದ್ದಾರೆ.