ಬೆಂಗಳೂರು: ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಶಿಕ್ಷಕರು ಕೂಡಲೇ ನಿಯೋಜನೆಯನ್ನು ರದ್ದುಗೊಳಿಸಿ ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.
ಶಾಲಾ ಶಿಕ್ಷಣ ಇಲಾಖೆಯಲ್ಲಿ ಸರ್ಕಾರದ ಆದೇಶದಂತೆ 2024-25ನೇ ಸಾಲಿನ ಶೈಕ್ಷಣಿಕ ಅವಧಿಯವರೆಗೆ ಕೆಲವು ಶಿಕ್ಷಕರನ್ನು ತಾತ್ಕಾಲಿಕವಾಗಿ ನಿಯೋಜಿಸಲಾಗಿದೆ. ಆದರೆ, ಕೆಲವು ಜಿಲ್ಲೆಗಳ ಉಪ ನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿಯೋಜನೆ ಮೇಲಿರುವ ಶಿಕ್ಷಕರನ್ನು ಮಾರ್ಚ್ ಅಂತ್ಯಕ್ಕೆ ಕರ್ತವ್ಯದಿಂದ ಬಿಡುಗಡೆಗೊಳಿಸದಿರುವುದು ಗಮನಕ್ಕೆ ಬಂದಿದೆ.
ಪ್ರಸ್ತುತ ಹೆಚ್ಚುವರಿ ಶಿಕ್ಷಕರ ಮರು ಹೊಂದಾಣಿಕೆ ಪ್ರಕ್ರಿಎಯ ಚಾಲ್ತಿಯಲ್ಲಿರುವುದರಿಂದ ನಿಯೋಜನೆಯ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನಿಯೋಜನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿ ಆದೇಶಿಸಲಾಗಿದೆ.
ಈ ಹಿನ್ನೆಲಯಲ್ಲಿ ಅಂತಹ ಶಿಕ್ಷಕರನ್ನು ಕೂಡಲೇ ಶಾಲಾ ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು. ಬಿಡುಗಡೆಗೊಂಡ ಶಿಕ್ಷಕರು ಮೂಲ ಶಾಲೆಯಲ್ಲಿ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು. ಒಂದು ವೇಳೆ ನಿಗದಿತ ದಿನಾಂಕದೊಳಗೆ ಮೂಲ ಶಾಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಅಂತಹ ಶಿಕ್ಷಕರನ್ನು ಅನಧಿಕೃತ ಗೈರು ಹಾಜರಿ ಪ್ರಕರಣ ಎಂದು ಪರಿಗಣಿಸಿ ಶಿಸ್ತು ಕ್ರಮ ಜರುಗಿಸಲು ತಿಳಿಸಿದೆ.
ಮೂಲ ಶಾಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗದ ಶಿಕ್ಷಕರ ವೇತನವನ್ನು ಪಾವತಿಸದೇ ತಡೆಹಿಡಿಯಲು ಸೂಚಿಸಿದೆ. ತಪ್ಪಿದ್ದಲ್ಲಿ ಸಂಬಂಧಪಟ್ಟ ವೇತನ ಬಟಾವಡೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಈ ಸಂಬಂಧ ಏ.17ರೊಳಗೆ ಜಿಲ್ಲಾವಾರು ಪಟ್ಟಿಯನ್ನು ನೀಡದಿದ್ದರೆ, ಡಿಡಿಪಿಐ, ಬಿಇಒಗಳು ಹಾಗೂ ಸಂಬಂಧಿಸಿದ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಶಾಲಾ ಶಿಕ್ಷಣ ಆಯುಕ್ತ ಡಾ. ಕೆ.ವಿ. ತ್ರಿಲೋಕಚಂದ್ರ ಎಚ್ಚರಿಕೆ ನೀಡಿದ್ದಾರೆ.