ನ್ಯೂಸ್

Karnataka Politics | ಐದು ವರ್ಷ ಸಿದ್ದರಾಮಯ್ಯನೇ ಸಿಎಂ ಎಂದ ಡಿಕೆ ಸುರೇಶ್​!

ಬೆಂಗಳೂರು: ಸಿದ್ದರಾಮಯ್ಯ ಅವರು ನಮ್ಮ ನಾಯಕರು. ಈ ಅವಧಿಯ 5 ವರ್ಷಗಳ ಕಾಲ ಅವರೇ ಮುಖ್ಯಮಂತ್ರಿಯಾಗಿ ಇರಬೇಕು ಎಂಬುದು ನಮ್ಮ ಬಯಕೆ  ಎಂದು ಮಾಜಿ ಸಂಸದ ಡಿಕೆ ಸುರೇಶ್​ ಹೇಳಿದರು. Karnataka Politics

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಯಿ ಚಾಮುಂಡಿ ಆಶೀರ್ವಾದದೊಂದಿಗೆ ಸಿದ್ದರಾಮಯ್ಯ ಅವರು ಎಲ್ಲಾ ಆರೋಪಗಳಿಂದ ಮುಕ್ತರಾಗುತ್ತಾರೆ. ಅವರನ್ನು ಯಾರೂ ಅಲ್ಲಾಡಿಸಲು ಆಗುವುದಿಲ್ಲ ಎಂದು ಹೇಳಿದರು.

ನಮ್ಮ ಸಮಾಜದ ನಾಯಕರು ಸೇರಿ ಅನೇಕ ವಿಚಾರ ಚರ್ಚೆ ಮಾಡುತ್ತೇವೆ. ಗೃಹ ಸಚಿವ ಜಿ. ಪರಮೇಶ್ವರ್ ಅವರು 8 ವರ್ಷ ಪಿಸಿಸಿ ಅಧ್ಯಕ್ಷರಾಗಿದ್ದರು, ಸತೀಶ್ ಜಾರಕಿಹೊಳಿ ಅವರು ಕಾರ್ಯಾಧ್ಯಕ್ಷರಾಗಿದ್ದವರು. ಆ ಸಮಾಜದ ಕಷ್ಟ ಸುಖ ಕೇಳಿ, ಏಳಿಗೆ ಬಯಸುವುದು, ರಾಜ್ಯದ ವಿದ್ಯಮಾನಗಳನ್ನು ಯಾವ ರೀತಿ ಎದುರಿಸಬೇಕು ಎಂದು ಚರ್ಚೆ ಮಾಡುವುದು ಸಹಜ. ಅದರಲ್ಲಿ ತಪ್ಪೇನಿಲ್ಲ" ಎಂದು ತಿಳಿಸಿದರು.

ಜಾತಿ ಗಣತಿ ವಿಚಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು

ಜಾತಿ ಗಣತಿ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುವ ಬಗ್ಗೆ ಕೇಳಿದಾಗ, "ಜಾತಿ ಗಣತಿ ವಿಚಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಮುಖ್ಯಮಂತ್ರಿಗಳ ಬಳಿ ಮನವಿ ಮಾಡುತ್ತೇನೆ. ಕೇಂದ್ರ ಸರ್ಕಾರ ಜನಗಣತಿ ಘೋಷಣೆ ಮಾಡಿದ್ದು, ಈ ಸಮಯದಲ್ಲೇ ಅಗತ್ಯ ಮಾನದಂಡ ಬಳಸಿ ಸಮೀಕ್ಷೆ ಮಾಡಿದರೆ ಯಾವುದೇ ಗೊಂದಲ ಇರುವುದಿಲ್ಲ. ಹೀಗಾಗಿ ಜನಗಣತಿವರೆಗೂ ಕಾಯುವುದು ಉತ್ತಮ ಎಂದು ಹೇಳುತ್ತೇನೆ" ಎಂದರು.