ರಾಷ್ಟ್ರೀಯ ಈಜು: ಕರ್ನಾಟಕಕ್ಕೆ ಸತತ 33ನೇ ಬಾರಿ ಸಮಗ್ರ ಪ್ರಶಸ್ತಿ
ಬೆಂಗಳೂರು: ಕರ್ನಾಟಕ ತಂಡ ಅಹಮದಾಬಾದ್ನಲ್ಲಿ ಭಾನುವಾರ ಮುಕ್ತಾಯಗೊಂಡ 79ನೇ ರಾಷ್ಟ್ರೀಯ ಚಾಂಪಿಯನ್ಷಿಪ್ನಲ್ಲಿ (Senior National Aquatic Championship) ಸಮಗ್ರ ಪ್ರಶಸ್ತಿ ಗೆದ್ದುಕೊಳ್ಳುವ ಮೂಲಕ 33 ವರ್ಷಗಳ ಪ್ರಾಬಲ್ಯವನ್ನು ಕಾಯ್ದುಕೊಂಡಿದೆ. 6 ದಿನಗಳ ಕೂಟದಲ್ಲಿ ಕರ್ನಾಟಕ ಒಟ್ಟು 19 ಚಿನ್ನ, 16 ಬೆಳ್ಳಿ ಮತ್ತು 11 ಕಂಚಿನ ಸಹಿತ 47 ಪದಕ (ಒಟ್ಟು 334 ಅಂಕ) ಗೆದ್ದುಕೊಂಡಿತು. ಕೊನೇ ದಿನ ಕರ್ನಾಟಕ ಮತ್ತೆ 2 ಚಿನ್ನ, 3 ಬೆಳ್ಳಿ, 3 ಕಂಚಿನ ಪದಕ ಜಯಿಸಿತು. ಕರ್ನಾಟಕ ಪುರುಷರ ವಿಭಾಗದಲ್ಲಿ 164 ಅಂಕ ಮತ್ತು ಮಹಿಳಾ ವಿಭಾಗದಲ್ಲಿ 170 ಅಂಕ ಗಳಿಸಿ ಪ್ರಶಸ್ತಿ ಜಯಿಸಿತು. ಕೂಟದಲ್ಲಿ ಪುರುಷರ ವಿಭಾಗದಲ್ಲಿ 10 ಮತ್ತು ಮಹಿಳಾ ವಿಭಾಗದಲ್ಲಿ 12 ದಾಖಲೆ ನಿರ್ಮಾಣವಾದವು. ಗುಜರಾತ್ನ ಆರ್ಯನ್ ನೆಹ್ರ (3 ಚಿನ್ನ, 1 ಕಂಚು) ಪುರುಷರ ಮತ್ತು ಮಹಾರಾಷ್ಟ್ರದ ಸಾನ್ವಿ ದೇಸ್ವಾಲ್ (3 ಚಿನ್ನ, 1 ಬೆಳ್ಳಿ) ಮಹಿಳಾ ವಿಭಾಗದಲ್ಲಿ ವೈಯಕ್ತಿಕ ಪ್ರಶಸ್ತಿ ಪಡೆದರು.
ನೀನಾ ದಾಖಲೆ: ಕೂಟದ ಕೊನೇ ದಿನ ಕರ್ನಾಟಕದ ನೀನಾ ವೆಂಕಟೇಶ್ ಮಹಿಳೆಯರ 50 ಮೀ. ಬಟರ್ಫ್ಲೈ ವಿಭಾಗದಲ್ಲಿ ಕೂಟ ದಾಖಲೆ ಬರೆದರು. ಅವರು 27.67 ಸೆಕೆಂಡ್ಗಳಲ್ಲಿ ಈಜಿ, 2023ರಲ್ಲಿ ತಾನೇ ನಿರ್ಮಿಸಿದ್ದ ದಾಖಲೆ (27.74ಸೆ) ಸುಧಾರಿಸಿದರು. ಈ ಸ್ಪರ್ಧೆಯಲ್ಲಿ ರಾಜ್ಯದ ತನಿಷಿ ಗುಪ್ತಾ (27.69ಸೆ) ಬೆಳ್ಳಿ ಗೆದ್ದರು. ನೀನಾ ಒಳಗೊಂಡ ರಾಜ್ಯ ತಂಡ ಮಹಿಳೆಯರ 4/100 ಮೀ. ಮೆಡ್ಲೆ ರಿಲೇಯಲ್ಲೂ ಕೂಟದಾಖಲೆಯೊಂದಿಗೆ ಚಿನ್ನ ಜಯಿಸಿತು.
ಪುರುಷರ 200 ಮೀ. ಬಟರ್ಫ್ಲೈನಲ್ಲಿ ದರ್ಶನ್ ಎಸ್ ಬೆಳ್ಳಿ ಗೆದ್ದರೆ, 400 ಮೀ. ಫ್ರೀಸ್ಟೈಲ್ನಲ್ಲಿ ಅನೀಶ್ ಗೌಡ ಬೆಳ್ಳಿ, ದರ್ಶನ್ ಕಂಚು ಜಯಿಸಿದರು. 200 ಮೀ. ಬ್ಯಾಕ್ಸ್ಟ್ರೊಕ್ನಲ್ಲಿ ಆಕಾಶ್ ಮಣಿ, 50 ಮೀ. ಬ್ರೆಸ್ಟ್ಸ್ಟ್ರೊಕ್ನಲ್ಲಿ ವಿದಿತ್ ಎಸ್. ಶಂಕರ್, ಮಹಿಳೆಯರ 800 ಮೀ. ಫ್ರೀಸ್ಟೈಲ್ನಲ್ಲಿ ಶ್ರೀ ಚರಣಿ ತುಮು ಕಂಚು ಒಲಿಸಿಕೊಂಡರು.