|ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
‘ಡಿಜಿಟಲ್ ಇಂಡಿಯಾ’ ಪರಿಕಲ್ಪನೆಯ ಪ್ರಯೋಜನಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕರ್ನಾಟಕ ದಾಪುಗಾಲಿಟ್ಟಿದೆ. ರಾಷ್ಟ್ರೀಯ ಶೈಕ್ಷಣಿಕ ಠೇವಣಿ (ನ್ಯಾಷನಲ್ ಅಕಾಡೆಮಿ ಡೆಪಾಸಿಟಿರಿ) ಭಾಗವಾಗಿ ಇನ್ನುಮುಂದೆ ಶೈಕ್ಷಣಿಕ ಅಂಕಪಟ್ಟಿಗಳು ಮತ್ತು ಪ್ರಮಾಣಪತ್ರ ಡಿಜಿಲಾಕರ್ನಲ್ಲಿ ಸಿಗಲಿವೆ. ಮುಂದಿನ ಎರಡು ವಾರದಲ್ಲಿ 2.5 ಕೋಟಿಗೂ ಅಧಿಕ ವಿದ್ಯಾರ್ಥಿಗಳ ಎಸ್ಸೆಸ್ಸೆಲ್ಸಿ, ಪಿಯುಸಿ ಅಂಕಪಟ್ಟಿಗಳು ಡಿಜಿಲಾಕರ್ನಲ್ಲಿ ಲಭ್ಯವಾಗುತ್ತಿದೆ. ಜತೆಗೆ ರಾಜ್ಯದ 35 ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ಅಂಕಪಟ್ಟಿ, ಪ್ರಮಾಣ ಪತ್ರಗಳು ಸಹ ಕೆಲವೇ ತಿಂಗಳಲ್ಲಿ ಡಿಜಿಲಾಕರ್ನಲ್ಲಿ ಬಂದು ಕೂರಲಿದೆ.
ಇ- ಆಡಳಿತ ಇಲಾಖೆಯ ವಿಶೇಷ ಪ್ರಯತ್ನ ದೇಶದಲ್ಲೇ ರಾಜ್ಯವನ್ನು ಮುಂಚೂಣಿ ಸ್ಥಾನದಲ್ಲಿ ನಿಲ್ಲಿಸಿದ್ದು, ಶೈಕ್ಷಣಿಕ ವ್ಯವಸ್ಥೆಯಲ್ಲಿ ಇದೊಂದು ಮಹತ್ವಪೂರ್ಣ ಘಟ್ಟವೂ ಆಗಲಿದೆ. 2003ರಿಂದ ಈಚೆಗೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ 10ನೇ ತರಗತಿ ಸಾರ್ವತ್ರಿಕ ಪರೀಕ್ಷೆ ಎದುರಿಸಿದ ಮಕ್ಕಳ ಅಂಕಪಟ್ಟಿ ಡಿಜಿಲಾಕರ್ಗೆ ಅಪ್ಲೋಡ್ ಕೆಲಸ ಪ್ರಗತಿಯಲ್ಲಿದ್ದು, ಮುಂದಿನ 15 ದಿನಗಳಲ್ಲಿ ಲಭ್ಯವಾಗುವುದು. 2019- 20ನೇ ಸಾಲಿನ ಪ್ರಮಾಣ ಪತ್ರ ಅಳವಡಿಕೆ ಕಾರ್ಯ ಮುಗಿದಿದೆ.
ಪಿಯು ಶಿಕ್ಷಣ ಇಲಾಖೆ 2008ರಿಂದೀಚೆಗೆ ನಡೆಸಿದ ದ್ವಿತೀಯ ಪಿಯುಸಿ ಪರೀಕ್ಷೆಯ ಅಂಕಪಟ್ಟಿ ಸಹ ಇಷ್ಟರಲ್ಲೇ ಡಿಜಿಲಾಕರ್ನಲ್ಲಿ ಲಭ್ಯವಾಗಲಿದೆ. 32 ವಿಶ್ವವಿದ್ಯಾಲಯಗಳ ಹಿಂದಿನ ವರ್ಷಗಳ ಅಂಕಪಟ್ಟಿ- ಪ್ರಮಾಣ ಪತ್ರ ಅಳವಡಿಸುವ ಕೆಲಸ ಶರವೇಗದಿಂದ ನಡೆದಿದೆ. ಒಟ್ಟಾರೆ ರಾಜ್ಯದಲ್ಲಿರುವ 82 ವಿವಿಗಳು- ಶೈಕ್ಷಣಿಕ ಸಂಸ್ಥೆ ಇದ್ದು, 80 ಸಂಸ್ಥೆಗಳು ಡಿಜಿಲಾಕರ್ನಲ್ಲಿ ಅಂಕಪಟ್ಟಿ ಒದಗಿಸಲು ನೋಂದಣಿ ಮಾಡಿಕೊಂಡಿವೆ. ನ್ಯಾಷನಲ್ ಅಕಾಡೆಮಿ ಡೆಪಾಸಿಟಿರಿ ಅನುಷ್ಠಾನದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. 2019-20ನೇ ಸಾಲಿನ ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಪ್ಲೊಮಾ, ಇಂಜಿನಿಯರಿಂಗ್, ವೈದ್ಯಕೀಯ ಕೋರ್ಸ್ ಪ್ರಮಾಣ ಪತ್ರವನ್ನು ಡಿಜಿಲಾಕರ್ನಲ್ಲಿ ಸಿಗುವಂತೆ ಮಾಡಿದೆ. ಈಗ ಹಿಂದಿನ ವರ್ಷದ ದಾಖಲೆ ಸಿಗುವಂತೆ ಮಾಡುವ ಕೆಲಸ ಮಾಡಲಾಗಿದೆ.
ಡಿಜಿಲಾಕರ್ನಲ್ಲಿ ಅಂಕಪಟ್ಟಿ, ಪ್ರಮಾಣ ಪತ್ರ ಸಿಗಬೇಕೆಂಬ ನಿಟ್ಟಿನಲ್ಲಿ ನಮ್ಮ ಸರ್ಕಾರದ ಪ್ರಯತ್ನ ಮಹತ್ವದ ಘಟ್ಟ ತಲುಪಿದೆ. ಶೀಘ್ರವೇ 2003ರಿಂದೀಚೆಗಿನ ಎಸ್ಎಸ್ಎಲ್ಸಿ ಅಂಕಪಟ್ಟಿ ಹಾಗೂ 2008ರ ನಂತರದ ಪಿಯಸಿ ಅಂಕಪಟ್ಟಿಯು ಡಿಜಿಲಾಕರ್ನಲ್ಲಿ ಸಿಗುವಂತೆ ಮಾಡುತ್ತಿದ್ದೇವೆ.
| ಶ್ರೀವ್ಯಾಸ್ ನ್ಯಾಡ್ ಯೋಜನಾ ನಿರ್ದೇಶಕ
ಡಿಜಿಲಾಕರ್ ಮೊಬೈಲ್ ಆಪ್ ಬಳಕೆ ಹೆಚ್ಚಾಗುತ್ತಿದೆ. ಬಳಕೆ ಮಾಡಿಕೊಳ್ಳದವರು ಡಿಜಿಲಾಕರ್ ಡೌನ್ಲೋಡ್ ಮಾಡಿಕೊಂಡು ಸೇವೆ ಪಡೆದುಕೊಳ್ಳಬಹುದು. ಆಧಾರ್ ಆಧಾರಿತ ಡಿಜಿಲಾಕರ್ನ ಒಳಪ್ರವೇಶಿಸಿ ತಮಗೆ ಯಾವ ಸಂಸ್ಥೆ ಅಂಕಪಟ್ಟಿ-ಪ್ರಮಾಣ ಪತ್ರವನ್ನು ನೀಡಿದೆಯೋ ಅದನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ಇರಲಿದೆ. ರೋಲ್ ನಂಬರ್, ರಿಜಿಸ್ಟರ್ ನಂಬರ್, ಅಭ್ಯರ್ಥಿ ಹೆಸರು, ವರ್ಷವನ್ನು ನಮೂದಿಸಿದರೆ ಡಿಜಿಟಲ್ ರೂಪದ ದಾಖಲೆ ಸಿಕ್ಕಿ ಹೋಗುತ್ತದೆ. ಸಂಬಂಧಪಟ್ಟ ವಿದ್ಯಾರ್ಥಿಯ ಡಿಜಿಲಾಕರ್ಗೆ ನೇರವಾಗಿ ಪ್ರಮಾಣ ಪತ್ರವನ್ನು ಕಳಿಸುವ ವ್ಯವಸ್ಥೆ ಕೂಡ ಬರುತ್ತಿದೆ.