ನ್ಯೂಸ್

ತಲಾದಾಯದಲ್ಲಿ ಕರ್ನಾಟಕ ನಂ.1

ನವದೆಹಲಿ: ದೇಶದಲ್ಲೇ ಕರ್ನಾಟಕ ಅತಿ ಹೆಚ್ಚು ತಲಾ ಆದಾಯ ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದ್ದು, ರಾಜ್ಯದಲ್ಲಿ ತಲಾದಾಯ ಪ್ರಮಾಣ 2 ಲಕ್ಷ ರೂ.ಗಳನ್ನು ದಾಟಿದೆ. 1,96,309 ರೂಪಾಯಿ ತಲಾ ಆದಾಯದೊಂದಿಗೆ ತಮಿಳುನಾಡು 2ನೇ ಸ್ಥಾನದಲ್ಲಿದೆ. ಸ್ಥಿರ ಬೆಲೆಯಲ್ಲಿ ರಾಜ್ಯದ ತಲಾ ನಿವ್ವಳ ರಾಜ್ಯ ದೇಶೀಯ ಉತ್ಪನ್ನ (ಎನ್​ಎಸ್​ಡಿಪಿ) 2,04,605 ರೂ. ತಲುಪಿದ್ದು, 2014-15ರಲ್ಲಿದ್ದ 1,05,697 ರೂ.ರಿಂದ ಶೇಕಡ 93.6 ರಷ್ಟು ಬೆಳವಣಿಗೆ ದಾಖಲಿಸಿರುವುದು ಗಮನಾರ್ಹ.

ಹಣಕಾಸು ಸಚಿವಾಲಯ ಲೋಕಸಭೆ ಯಲ್ಲಿ ಮಂಡಿಸಿದ ಅಂಕಿ-ಅಂಶಗಳಲ್ಲಿ ಈ ವಿವರವನ್ನು ನಮೂದಿಸಲಾಗಿದೆ. ಭಾರತದ ತಲಾ ನಿವ್ವಳ ರಾಷ್ಟ್ರೀಯ ಆದಾಯ (ಎನ್​ಎನ್​ಐ) 1,14,710 ರೂ. ರಷ್ಟಿದ್ದು, ದಶಕದ ಹಿಂದೆ ಇದ್ದ 72,805 ರೂ. ರಿಂದ ಶೇ.57.6ರಷ್ಟು ಹೆಚ್ಚಾಗಿದೆ.

ಕರ್ನಾಟಕದ ಸಾಧನೆ: ಕರ್ನಾಟಕದಲ್ಲಿ ತಲಾದಾಯ 2023-24ರಲ್ಲಿ 1,91,970 ರೂ. ಇದ್ದದ್ದು, 2024- 25ರಲ್ಲಿ 2,04,605 ರೂ.ಗೆ ಏರಿಕೆ ಕಂಡಿದೆ. ದಶಕದ ಅವಧಿಯ ಬೆಳವಣಿಗೆಯ ವಿಷಯದಲ್ಲಿ, ಕರ್ನಾಟಕ ಶೇ. 93.6ರಷ್ಟು ಏರಿಕೆಯೊಂದಿಗೆ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ, ಒಡಿಶಾ ಶೇ.96.7 ರಷ್ಟು ಏರಿಕೆ ದಾಖಲಿಸಿದೆ. ಪಂಜಾಬ್ ದಶಕದಲ್ಲಿ ಶೇ.41.3 ರಷ್ಟು ಮಾತ್ರ ಹೆಚ್ಚಳ ದಾಖಲಿಸಿದೆ, ಉತ್ತರಾಖಂಡ ಶೇ.33.5 ಮತ್ತು ಪುದುಚೇರಿ ಶೇ.32.8ರಷ್ಟು ಹೆಚ್ಚಳ ದಾಖಲಿಸಿದೆ.