ನ್ಯೂಸ್

ಜುಲೈ 11 ರಂದು ಹೊಸ ರಾಜ್ಯಪಾಲರ ಪ್ರಮಾಣ ವಚನ

ಬೆಂಗಳೂರು : ಕರ್ನಾಟಕದ ನೂತನ ರಾಜ್ಯಪಾಲರಾಗಿ ನೇಮಕಗೊಂಡಿರುವ ಥಾವರಚಂದ್​ ಗೆಹ್ಲೋತ್​ ಅವರು, ಜುಲೈ 11 ರಂದು ಬೆಳಿಗ್ಗೆ 10.30 ಕ್ಕೆ ರಾಜಭವನದ ಗ್ಲಾಸ್​ ಹೌಸ್​​ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕರ್ನಾಟಕ ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿ ಅಭಯ್​ ಶ್ರೀನಿವಾಸ್​ ಓಕ ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದು ವಾರ್ತಾ ಇಲಾಖೆ ತಿಳಿಸಿದೆ.

2014ರಿಂದ ರಾಜ್ಯಪಾಲರಾಗಿದ್ದ ವಜುಭಾಯ್ ವಾಲಾ ಅವರ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಗೆಹ್ಲೋತ್​ ಅವರನ್ನು ನೇಮಕ ಮಾಡಲಾಗಿದೆ. ಮಧ್ಯಪ್ರದೇಶದ ನಾಗ್ಡಾದ ಮೂಲದ ಗೆಹ್ಲೋತ್​ ಅವರು, ಬಿಜೆಪಿಯ ಹಿರಿಯ ಸದಸ್ಯರಾಗಿದ್ದಾರೆ. ಇವರು ಕೇಂದ್ರ ಸಾಮಾಜಿಕ, ನ್ಯಾಯ ಸಬಲೀಕರಣ ಸಚಿವರಾಗಿದ್ದರು. ಮೂರು ಬಾರಿ ಮಧ್ಯಪ್ರದೇಶದ ಶಾಸಕರಾಗಿ, ನಾಲ್ಕುಬಾರಿ ಲೋಕಸಭಾ ಸದಸ್ಯರಾಗಿದ್ದ ಗೆಹ್ಲೋತ್​ ಅವರು ಹಾಲಿ ರಾಜ್ಯಸಭಾ ಸದಸ್ಯರಾಗಿದ್ದರು.