- ದಾಂಡೇಲಿಯ ಸ್ಟರ್ಲಿಂಗ್ ರಿವರ್ ರೆಸಾರ್ಟ್‌ನಲ್ಲಿ ಜಿಪ್‌ಲೈನ್ ಆಡುವಾಗ ಸಂಭವಿಸಿದ ಭೀಕರ ಅಪಘಾತ.
- ಮೂವತ್ತು-40 ಅಡಿ ಎತ್ತರದಿಂದ ಬಿದ್ದು ಯುವಕನಿಗೆ ಗಂಭೀರ ಗಾಯ.
- ರೆಸಾರ್ಟ್ ಸಿಬ್ಬಂದಿ ನಿರ್ಲಕ್ಷ್ಯದ ವಿರುದ್ಧ ಕಿಡಿಕಾರಿದ ಯುವಕನ ಕುಟುಂಬಸ್ಥರು.
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ರೆಸಾರ್ಟ್ವೊಂದರಲ್ಲಿ ಜಿಪ್‌ಲೈನ್ ಆಡುವ ವೇಳೆ ಯುವಕನೊಬ್ಬ ತಾಂತ್ರಿಕ ದೋಷ ಹಾಗೂ ಭದ್ರತಾ ಲೋಪದಿಂದಾಗಿ 30 ರಿಂದ 40 ಅಡಿ ಎತ್ತರದಿಂದ ಬಿದ್ದು ಗಂಭೀರ ಗಾಯಗೊಂಡ ಘಟನೆ ಜುಲೈ 3 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಆಸ್ಪತ್ರೆಯಲ್ಲಿ ಯುವಕ
ವಿಜಯಪುರ ನಿವಾಸಿಯಾದ 24 ವರ್ಷದ ಕುಬೇರ ಸುರಪುರ ಎಂಬಾತನೇ ಗಾಯಗೊಂಡವನು ಎಂದು ಗುರುತಿಸಲಾಗಿದೆ. ಜುಲೈ 3ರಂದು ತಮ್ಮ ಸಹೋದರ ಪ್ರಶಾಂತ್ ಅವರೊಂದಿಗೆ ದಾಂಡೇಲಿ ಸ್ಟರ್ಲಿಂಗ್ ರಿವರ್ ರೆಸಾರ್ಟ್ಗೆ ತೆರಳಿದ್ದರು.
ಕುಬೇರ ಅವರು ಜಿಪ್ಲೈನ್ನಲ್ಲಿ ಸಾಗುತ್ತಿದ್ದಾಗ ಹಠಾತ್ತನೇ ಲಾಕ್ ಕಟ್ ಆಗಿದೆ. ಇದರ ಪರಿಣಾಮ ಅವರಿ 30ರಿಂದ 40 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದಿದ್ದಾರೆ. ಇದೇ ವೇಳೆ ಪ್ರಶಾಂತ್ ಅವರು ವಿಡಿಯೋ ಮಾಡುತ್ತಿದ್ದಾರು. ಈ ಭೀಕರ ದೃಶ್ಯಾವಳಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕುಬೇರ ಅವರು ನೆಲಕ್ಕೆ ಬಿದ್ದ ರಭಸಕ್ಕೆ ಯುವಕನ ದೇಹದ ಹಲವು ಭಾಗಗಳ ಮೂಳೆಗಳು ಮುರಿದಿದ್ದು, ತೀವ್ರ ಹಾನಿಯಾಗಿದೆ. ಪ್ರಸ್ತುತ ಯುವಕನಿಗೆ ಈಗಾಗಲೇ ಹಲವು ಶಸ್ತ್ರಚಿಕಿತ್ಸೆಗಳನ್ನುಮಾಡಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಕುಟುಂಬಸ್ಥರ ಆರೋಪವೇನು?
ರೆಸಾರ್ಟ್‌ನಲ್ಲಿ ಸಾಹಸ ಕ್ರೀಡೆಗಳ ನಿರ್ವಹಣೆ ಸರಿಯಾಗಿಲ್ಲ ಮತ್ತು ಅಸಮರ್ಪಕ ಸುರಕ್ಷತಾ ಕ್ರಮಗಳೇ ಈ ಘಟನೆಗೆ ಕಾರಣ ಎಂದು ಕುಟುಂಬಸ್ಥರು ದೂರಿದ್ದಾರೆ. ಅಪಘಾತ ಸಂಭವಿಸಿದ ಆರಂಭದಲ್ಲಿ ಯುವಕನ ಸಂಪೂರ್ಣ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ತಾವೇ ಭರಿಸುವುದಾಗಿ ರೆಸಾರ್ಟ್ ಮಂಡಳಿ ಒಪ್ಪಿಕೊಂಡಿತ್ತು. ಆದರೆ ಈಗ ಚಿಕಿತ್ಸಾ ವೆಚ್ಚ ನೀಡಲು ನಿರಾಕರಿಸುವ ಮೂಲಕ ತನ್ನ ಬದ್ಧತೆಯಿಂದ ಹಿಂದೆ ಸರಿದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಬೇಜವಾಬ್ದಾರಿತನಕ್ಕೆ ರೆಸಾರ್ಟ್‌ನವರೇ ನೇರ ಹೊಣೆ ಹೊರಬೇಕು ಎಂದು ನೊಂದ ಕುಟುಂಬದವರು ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ರೆಸಾರ್ಟ್ ಮ್ಯಾನೇಜರ್ ಹೇಳಿದ್ದೇನು?
ಜಿಪ್ಲೈನ್ನಲ್ಲಿ ತಾಂತ್ರಿಕ ದೋಷದಿಂದಾಗಿ ಕಟ್ ಆಗಿದ್ದು ನಿಜ. ಆದರೆ ಇದಕ್ಕೂ ಸಿಬ್ಬಂದಿ ಕರ್ತವ್ಯ ಲೋಪದೋಷಕ್ಕು ಯಾವುದೇ ಸಂಬಂಧವಿಲ್ಲ. ತಾಂತ್ರಿಕ ದೋಷದಿಂದ ಹೀಗಾಗಿದೆ. ನಾವು ನಮ್ಮ ಕೆಲಸವನ್ನು ಮರೆತಿಲ್ಲ ವಿಜಯಪುರಕ್ಕೆ ತೆರಳಿ ಯುವಕನ ಕುಟುಂಬಸ್ಥರ ಬಳಿ ಮಾತನಾಡಲಾಗುವುದು. ಆರೋಗ್ಯ ವಿಚಾರಿಸಿಕೊಳ್ಳಲಾಗುವುದು ಎಂದು ರೆಸಾರ್ಟ್ ಮ್ಯಾನೇಜರ್ ಹೇಳಿದ್ದಾರೆ, (ಏಜೆನ್ಸೀಸ್).