ನ್ಯೂಸ್

ಕರ್ನಾಟಕ ಪತ್ರಕರ್ತರ ಸಹಕಾರ ಸಂಘ ಚುನಾವಣೆ: 8 ಅಭ್ಯರ್ಥಿಗಳು ಜಯಭೇರಿ

ಬೆಂಗಳೂರು:ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆದಿದ್ದು, ಸಾಮಾನ್ಯ ವರ್ಗ ಕೋಟಾದಲ್ಲಿ ಸ್ಪರ್ಧಿಸಿದ್ದ 7 ಮಂದಿ ಜಯ ಸಾಧಿಸಿದ್ದಾರೆ.

ಆನಂದ ಪರಮೇಶ್ವರ ಬೈದನಮನೆ 269, ರಮೇಶ್ ಎಂ.ಪಾಳ್ಯ 262, ಧ್ಯಾನ ಪೂಣಚ್ಚ 254, ಬಿ.ಎನ್.ಮೋಹನ್ ಕುಮಾರ್ 214, ಪಿ.ಎಸ್. ಕೃಷ್ಣಕುಮಾರ್ 206, ವಿನೋದ್ ಕುಮಾರ್ ಬಿ.ನಾಯ್ಕ 189 ಹಾಗೂ ಎಸ್.ಸೋಮಶೇಖರ್ 147 ಮತ ಪಡೆದು ಗೆಲುವಿನ ನಗೆ ಬೀರಿದ್ದಾರೆ.

ಹಿಂದುಳಿದ ಪ್ರವರ್ಗ(ಬಿ)ದಲ್ಲಿ ಸ್ಪರ್ಧಿಸಿದ್ದ ಕೆ.ವಿ.ಪರಮೇಶ್ 223 ಮತ ಪಡೆದು ಜಯ ಸಾಧಿಸಿದ್ದಾರೆ. ಪರಿಶಿಷ್ಟ ಜಾತಿ ಕೋಟಾದಲ್ಲಿ ರಾಜೇಂದ್ರ ಕುಮಾರ್, ಪರಿಶಿಷ್ಟ ಪಂಗಡ ಕೋಟಾದಲ್ಲಿ ರಮೇಶ್ ಹಿರೇಜಂಬೂರು, ಹಿಂದುಳಿದ ವರ್ಗದಲ್ಲಿ ದೊಡ್ಡ ಬೊಮ್ಮಯ್ಯ ಹಾಗೂ ಮಹಿಳಾ ಕೋಟಾದಲ್ಲಿ ನಯನ ಎಸ್.ರಾವ್, ವಿನುತ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗೆದ್ದಿರುವ ಒಟ್ಟು 13 ನಿರ್ದೇಶಕರು ಮುಂದಿನ ಐದು ವರ್ಷವರೆಗೆ ನಿರ್ದೇಶಕರಾಗಿರುತ್ತಾರೆ. ಸದ್ಯದಲ್ಲೇ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.