ನ್ಯೂಸ್

ಕರ್ನಾಟಕ ದರೋಡೆಕೋರರ ಸಾಮ್ರಾಜ್ಯವಾಗುತ್ತಿದೆ; ಎಂಎಲ್‌ಸಿ ಶರವಣ ಟೀಕೆ|Empire of robbers

ಬೆಂಗಳೂರು: ಕರ್ನಾಟಕ ಲೂಟಿ ಕೋರರು ಮತ್ತು ದರೋಡೆಕೋರರ ಸಾಮ್ರಾಜ್ಯ ಆಗುತ್ತಿದೆ(Karnataka is becoming an empire of robbers). ಇದೊಂದು ಜಂಗಲ್ ರಾಜ್ ಆಗಿರುವ ಗುಮಾನಿ ಬಂದಿದೆ ಎಂದು ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಟಿ. ಎ.ಶರವಣ(T.A.Sharavana) ಹಾಗೂ ಬಿಜೆಪಿ ಸದಸ್ಯ ಎನ್. ರವಿಕುಮಾರ್(N.Ravikumar) ಆರೋಪಿಸಿದರು.

ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ, ಉದ್ಯಮಿಗಳಿಗೆ, ಹಣಕಾಸು ಸಂಸ್ಥೆಗಳಿಗೆ, ಚಿನ್ನಾಭರಣ ಮಳಿಗೆಗಳಿಗೆ ರಕ್ಷಣೆ ಇಲ್ಲದೆ, ಇದೊಂದು ಜಂಗಲ್ ರಾಜ್ ಆಗಿರುವ ಗುಮಾನಿ ಬಂದಿದೆ ಎಂದರು.

ಬೀದರ್‌ನಲ್ಲಿ ಹಾಡು ಹಗಲೇ ನಡು ಬೀದಿಯಲ್ಲಿ ಸಿಬ್ಬಂದಿ ಕೊಂದು ಬ್ಯಾಂಕ್ ಹಣ ದರೋಡೆ ಮಾಡಿ ಪರಾರಿ, ಮಂಗಳೂರಲ್ಲಿ ಸಹಕಾರಿ ಬ್ಯಾಂಕ್ ದರೋಡೆ, ಮೈಸೂರು ಬಳಿ ವಾಹನ ನಿಲ್ಲಿಸಿ ಬೆದರಿಸಿ ದರೋಡೆ...ಇವು ರಾಜ್ಯ ಭೀಕರತೆ ಮತ್ತು ಅಮಾನುಷತೆಯತ್ತ ಸಾಗುತ್ತಿರುವ ಲಕ್ಷಣ ಎಂದು ವಾಗ್ದಾಳಿ ನಡೆಸಿದರು.

ಇಂಥ ನೀಚ, ಹೇಯ ಕೃತ್ಯ ನಡೆಸಿ ಹೆದ್ದಾರಿಗಳಲ್ಲಿ, ಟೋಲ್ಗಳ ಮದ್ಯೆ ಕೇಡಿಗಳು, ಕೊಲೆಗಡುಕರು ಹಾದು ಹೋದರೂ ಅವರನ್ನು ಹಿಡಿಯಲು ಪೊಲೀಸರ ಕೈಯಲ್ಲಿ ಸಾಧ್ಯವಿಲ್ಲದೆ ಇರುವುದು ಆಶ್ಚರ್ಯ ತಂದಿದೆ. ಹೊಯ್ಸಳ ವಾಹನ ಅಪರಾಧಿಗಳ ಪತ್ತೆ ಕೆಲಸ ಬಿಟ್ಟು, ಬೇರೆ ಕೆಲಸಗಳಿಗೆ ಬಳಕೆ ಆಗುತ್ತಿರುವುದು ವಿಷಾದಕರ ಎಂದು ಟೀಕಿಸಿದರು.

ಇತ್ತೀಚಿನ ಘಟನೆಗಳಿಂದ ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದೆ ಬರುತ್ತಿರುವ ಉದ್ಯಮಿಗಳು ಭದ್ರತೆ ಇಲ್ಲದೆ ಹಿಂದೇಟು ಹಾಕುವಂತಾಗಿದೆ. ಸಾರ್ವಜನಿಕರ ಬದುಕಿಗೆ ರಾಜ್ಯ ಸುರಕ್ಷಿತವಲ್ಲ ಎನ್ನುವ ಭಾವನೆ ಬಂದಿದ್ದು, ಇನ್ನು ಉದ್ಯಮಿಗಳು ಎಲ್ಲಿಂದ ಬರುತ್ತಾರೆ? ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಅನೇಕ ಲೂಟಿ, ದರೋಡೆ ನಡೆದರೂ ಗೃಹ ಮಂತ್ರಿ ಡಾ.ಜಿ.ಪರಮೇಶ್ವರ ನೀರೋ ದೊರೆಯಂತೆ ಬೆಳಗಾವಿ ಅಧಿವೇಶನದಲ್ಲಿ ಸುಳ್ಳು ಸುಳ್ಳು ಶಾಂತಿ ಮಂತ್ರದ ಪಿಟೀಲು ಬಾರಿಸುತ್ತಿರುವುದು ಕುಚೋದ್ಯದ ಸಂಗತಿ ಎಂದು ಹರಿಹಾಯ್ದರು.

ರಾಜ್ಯದ ಜನರ, ಉದ್ಯಮಿಗಳ ಸುರಕ್ಷತೆ ದೃಷ್ಟಿಯಿಂದ ಇಲ್ಲಿ ಯಾವ ಸಭೆಯು ನಡೆದಿಲ್ಲ. ಯಾವಕ್ರಮವೂ ಇಲ್ಲ. ಅಧಿಕಾರ ಹಂಚಿಕೆ ರಾಜಕಾರಣ, ಸಿಎಂ ಮತ್ತು ಕೆಪಿಸಿಸಿ ಹುದ್ದೆ ಜಟಾಪಟಿ ಯಲ್ಲಿ ಮುಳುಗಿರುವ ಕಾಂಗ್ರೆಸ್ ಜನರ ಹಿತಾಸಕ್ತಿಯನ್ನು ಮರೆತಿದೆ. ಸರ್ಕಾರದ ಈ ನಿಲುವನ್ನು ತಾವು ಬಲವಾಗಿ ಖಂಡಿಸುವುದಾಗಿ ತಿಳಿಸಿದರು.

ರಾಜ್ಯದ ಗೃಹ ಮಂತ್ರಿ ಒಂದು ಕ್ಷಣವೂ ಅಧಿಕಾರದಲ್ಲಿ ಇರಲು ಯೋಗ್ಯರಲ್ಲ ಎಂದು ಟಿ.ಎ.ಶರವಣ ಮತ್ತು ಎನ್.ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.