ನ್ಯೂಸ್

ಕರ್ನಾಟಕ ಕೊಂಚ ನಿರಾಳ: ಐವರು ಚೇತರಿಕೆ, 10500ಕ್ಕೇರಿದ ಜಾಗತಿಕ ಸಾವು

kumarvrl

ಬೆಂಗಳೂರು/ದೆಹಲಿ: ರಾಜ್ಯ ಸರ್ಕಾರದ ಕಾಳಜಿ, ವೈದ್ಯರ ನಿರಂತರ ಶ್ರಮದಿಂದಾಗಿ ಕರ್ನಾಟಕದಲ್ಲಿ ಕರೊನಾ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿದ್ದರೆ, ದೇಶ ಹಾಗೂ ವಿಶ್ವಾದ್ಯಂತ ಮಹಾಮಾರಿಯ ಆರ್ಭಟ ತೀವ್ರಗೊಂಡಿದೆ. ಕಟ್ಟೆಚ್ಚರದ ಹೊರತಾಗಿಯೂ ಕರೊನಾ ಸೋಂಕಿನ ಆತಂಕ ರಾಷ್ಟ್ರಪತಿ ಭವನ ಹಾಗೂ ಸಂಸತ್ ಭವನವನ್ನೂ ಪ್ರವೇಶಿಸಿರುವುದು ಒಂದೆಡೆ ಯಾದರೆ ಜಾಗತಿಕವಾಗಿ ಸೋಂಕಿಗೆ ಬಲಿ ಯಾದವರ ಸಂಖ್ಯೆ 10,500ಕ್ಕೆ ಏರಿಕೆ ಆಗಿದೆ.

ಬೆಂಗಳೂರಲ್ಲಿ ಕರೊನಾ ಸೋಂಕಿಗೆ ಒಳಪಟ್ಟು ಆಸ್ಪತ್ರೆ ಸೇರಿದ್ದ ವ್ಯಕ್ತಿ (ರೋಗಿ-5) ಸಂಪೂರ್ಣವಾಗಿ ಗುಣಮುಖರಾಗಿ ಶುಕ್ರವಾರ ಆಸ್ಪತ್ರೆಯಿಂದ ಮನೆಗೆ ತೆರಳಿರುವುದು ಕೊಂಚ ನೆಮ್ಮದಿ ಮೂಡಿಸಿದೆ. ಹಾಗೆಯೇ ಶುಕ್ರವಾರ ರಾಜ್ಯದಲ್ಲಿ ಹೊಸದಾಗಿ ಯಾರಲ್ಲೂ ಸೋಂಕು ದೃಢಪಟ್ಟಿಲ್ಲ.

ಒಟ್ಟಾರೆ ಕರ್ನಾಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಸಂಖ್ಯೆ 13ಕ್ಕೆ ಇಳಿದಿದ್ದು, ಎಲ್ಲರ ಆರೋಗ್ಯ ಸ್ಥಿರವಾಗಿದೆ. ಈ ಪೈಕಿ ನಾಲ್ವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ನಿಯಮಾನುಸಾರ ಅವರ ಆರೋಗ್ಯ ತಪಾಸಣೆ ನಡೆಸಿ ಬುಧವಾರದ (ಮಾ.25) ವೇಳೆಗೆ ಮನೆಗೆ ಕಳುಹಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ತಿಳಿಸಿದ್ದಾರೆ.

ಜಯನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿರುವ ವ್ಯಕ್ತಿ ಮುಂದಿನ 14 ದಿನಗಳ ಕಾಲ ಮನೆಯಲ್ಲಿ ಪ್ರತ್ಯೇಕ ನಿಗಾದಲ್ಲಿ ಇರುವಂತೆ ಸೂಚಿಸಲಾಗಿದ್ದು, ಇವರ ಸಂಪರ್ಕ ಹೊಂದಿದ್ದವರೂ ನಿಗಾದಲ್ಲಿ ಮುಂದುವರಿದಿದ್ದಾರೆ ಎಂದರು.

ಹೊಸ ಪ್ರಕರಣ ಇಲ್ಲ

ರಾಜ್ಯದಲ್ಲಿ ಶುಕ್ರವಾರ ಹೊಸ ಪ್ರಕರಣ ವರದಿಯಾಗಿಲ್ಲವಾದರೂ ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಬಂದಿದ್ದರಿಂದ ಒಂದೇ ದಿನ 981 ಮಂದಿಯನ್ನು ನಿಗಾಗೆ ಒಳಪಡಿಸಲು ಗುರುತಿಸಲಾಗಿದೆ. ಇವರಲ್ಲಿ ರೋಗ ಲಕ್ಷಣ ಹೊಂದಿದ್ದ 59 ಮಂದಿಯನ್ನು ಆಸ್ಪತ್ರೆಗಳಲ್ಲಿ ಪ್ರತ್ಯೇಕ ನಿಗಾದಲ್ಲಿ ಇರಿಸಲಾಗಿದೆ. 64 ಜನರ ಸ್ವಾ್ಯಬ್ ಮತ್ತು ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. 55 ಮಂದಿಯ ಪರೀಕ್ಷಾ ವರದಿ ಬಂದಿದ್ದು, ಸೋಂಕು ದೃಢಪಟ್ಟಿಲ್ಲ. ಈವರೆಗೆ 1,22,778 ಪ್ರಯಾಣಿಕರ ತಪಾಸಣೆ ನಡೆಸಲಾಗಿದ್ದು, 4030 ಮಂದಿಯನ್ನು ನಿಗಾದಲ್ಲಿ ಇರಿಸಲಾಗಿದ್ದು, 756 ಮಂದಿ 28 ದಿನಗಳ ನಿಗಾದಿಂದ ಹೊರಬಂದಿದ್ದಾರೆ. 1,207 ಮಂದಿಯ ಪೈಕಿ 970 ಮಂದಿಯ ವರದಿ ನೆಗೆಟಿವ್ ಬಂದಿದೆ. 237 ಮಂದಿಯ ಪರೀಕ್ಷಾ ವರದಿಗಾಗಿ ಕಾಯಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

ಬದ್ಧತೆ ಪ್ರದರ್ಶನ

ಪ್ರಧಾನಿ ನರೇಂದ್ರ ಮೋದಿ ಅವರ ಭಾನುವಾರದ ಜನತಾ ಕರ್ಫ್ಯೂ ಕರೆಗೆ ವಿಶ್ವಸಂಸ್ಥೆ ಸೇರಿ ಜಗತ್ತಿನೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಪಕ್ಷಾತೀತವಾಗಿ ಎಲ್ಲ ರಾಜಕಾರಣಿಗಳು, ಬಾಲಿವುಡ್ ಸೆಲೆಬ್ರಿಟಿಗಳು, ಉದ್ಯಮಿಗಳು ಹಾಗೂ ಸಾರ್ವಜನಿಕರು ಸ್ವಯಂ ಕರ್ಫ್ಯೂ ಪಾಲಿಸುವ ಬದ್ಧತೆ ಪ್ರದರ್ಶಿಸಿದ್ದಾರೆ. ರಾಜ್ಯದಲ್ಲೂ ಸಿಎಂ ಯಡಿಯೂರಪ್ಪ ಹಾಗೂ ಅವರ ಸಂಪುಟದ ಸಹೋದ್ಯೋಗಿಗಳು ಭಾನುವಾರದ ತಮ್ಮೆಲ್ಲ ಕಾರ್ಯಕ್ರಮ ರದ್ದುಪಡಿಸಿ ಮನೆಯಲ್ಲೇ ಉಳಿಯುವ ನಿರ್ಧಾರ ಕೈಗೊಂಡಿದ್ದಾರೆ.

‘ಕರ್ಫ್ಯೂ’ ಬೆಂಬಲಿಸೋಣ

ಭಾರತ ಸಂಕಷ್ಟದಲ್ಲಿದೆ. ಕರೊನಾ ಮಾರಿಯನ್ನು ಮಟ್ಟಹಾಕುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟಿರುವ ಜನತಾ ಕರ್ಫ್ಯೂಗೆ ಇಡೀ ದೇಶದ ಜನರ ಬೆಂಬಲ ಅಗತ್ಯ. ಒಂದು

ದಿನ ಸ್ವಯಂಪ್ರೇರಿತವಾಗಿ ಎಲ್ಲರೂ ಮನೆಯಲ್ಲಿದ್ದರೆ ಕರೊನಾ ನಿಯಂತ್ರಣಕ್ಕೆ ದೊಡ್ಡ ಕೊಡುಗೆಯಾಗುತ್ತ ದೆಂಬುದು ವೈಜ್ಞಾನಿಕ ಅಭಿಪ್ರಾಯ. ದೇಶಕ್ಕೆ ಒಳಿತಾಗುವ ಈ ಕಾರ್ಯದಲ್ಲಿ ನಾವೂ ಕೈಜೋಡಿಸೋಣ. 

ವಿತರಕರಿಗೆ ಹ್ಯಾಟ್ಸ್​ಆಫ್

ಭಾನುವಾರ ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ದೇಶಾದ್ಯಂತ ‘ಜನತಾ ಕರ್ಫ್ಯೂ’ ಜಾರಿಯಲ್ಲಿದ್ದರೂ ವಿಜಯವಾಣಿಗೆ ವಿರಾಮವಿಲ್ಲ. ಓದುಗರಿಗೆ ಮಾಹಿತಿ ನೀಡುವ ಬದ್ಧತೆಯಿಂದಾಗಿ ಎಂದಿನಂತೆ ಭಾನುವಾರವೂ ನಾವು ಕಾರ್ಯ ನಿರ್ವಹಿಸುತ್ತೇವೆ. ಹೀಗಾಗಿ ಸೋಮವಾರದ ಸಂಚಿಕೆ ಯಥಾಪ್ರಕಾರ ನಿಮ್ಮ ಕೈಸೇರಲಿದೆ. ಇಡೀ ದೇಶ ಕರೊನಾ ಮಾರಿಯ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಸೇನೆ, ಪೊಲೀಸರು, ವೈದ್ಯರ ಜತೆಗೆ ಮಾಧ್ಯಮವನ್ನೂ ಅಗತ್ಯ ಸೇವೆ ಎಂದು ಹೇಳಿದ್ದಾರೆ. ಇಂತಹ ಸಂದರ್ಭದಲ್ಲಿ ಓದುಗರಿಗೆ ಮಾಹಿತಿ ನೀಡುವುದು ನಮ್ಮ ಆದ್ಯಕರ್ತವ್ಯವೂ ಹೌದು. ಚಳಿ, ಮಳೆ, ಗಾಳಿ ಎನ್ನದೆ ಸದಾ ನಮ್ಮ ಈ ಕರ್ತವ್ಯದಲ್ಲಿ ಕೈಜೋಡಿಸುವ ಪತ್ರಿಕಾ ವಿತರಕರು ಜನತಾ ಕರ್ಫ್ಯೂದಂತಹ ತುರ್ತು ಸಂದರ್ಭದಲ್ಲಿಯೂ ಅಗತ್ಯ ಸೇವೆಗೆ ಅಣಿ ಯಾಗಿದ್ದಾರೆ. ಅವರಿಗೆ ನಮ್ಮ ಹ್ಯಾಟ್ಸ್​ಆಫ್.

ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಜನತಾ ಕರ್ಫ್ಯೂ ಬೆಂಬಲಿಸಿ ಎಲ್ಲರೂ ಸ್ವಯಂಪ್ರೇರಿತರಾಗಿ ಮನೆಯಲ್ಲಿಯೇ ಉಳಿಯಬೇಕು. | ಡಾ.ಕೆ.ಸುಧಾಕರ್ ಸಚಿವ