ನ್ಯೂಸ್

ಆಕ್ಸಿಜನ್ ಹಂಚಿಕೆ ಹೆಚ್ಚಿಸಿ ಕೇಂದ್ರಕ್ಕೆ ಹೈ ತಾಕೀತು: ರೋಗಿಗಳ ಸಾವಿಗೆ ನ್ಯಾಯಾಲಯ ಕಳವಳ

ಬೆಂಗಳೂರು: ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಂದ ಹೆಚ್ಚುತ್ತಿರುವ ಕೋವಿಡ್ ಸೋಂಕಿತರ ಸಾವಿನ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಹೈಕೋರ್ಟ್, ಕರ್ನಾಟಕದ ಪಾಲಿನ ಆಕ್ಸಿಜನ್ ಕೋಟಾ ಹೆಚ್ಚಿಸದ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ, ಆಮ್ಲಜನಕ ಪೂರೈಕೆ ಹೆಚ್ಚಿಸುವ ಸಂಬಂಧ ಬುಧವಾರ ಬೆಳಗ್ಗೆ 10.30ರ ಒಳಗೆ ನಿರ್ಧಾರ ಕೈಗೊಳ್ಳುವಂತೆ ತಾಕೀತು ಮಾಡಿದೆ.

ಕೋವಿಡ್ ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮಂಗಳವಾರ ವಿಚಾರಣೆ ನಡೆಸಿದ ಸಿಜೆ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ, ರಾಜ್ಯದಲ್ಲಿ ಆಕ್ಸಿಜನ್ ಇಲ್ಲದೇ ಜನ ಸಾಯುತ್ತಿದ್ದಾರೆ, ಇನ್ನೂ ಯಾವಾಗ ಆಕ್ಸಿಜನ್ ಪ್ರಮಾಣ ಹೆಚ್ಚಿಸುತ್ತೀರಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿತು.

ವಿಚಾರಣೆ ವೇಳೆ ಆಕ್ಸಿಜನ್ ಕೊರತೆ ವಿಚಾರವನ್ನೇ ಪ್ರಮುಖವಾಗಿ ಪರಿಗಣಿಸಿದ ಪೀಠ, ರಾಜ್ಯಕ್ಕೆ ಎಷ್ಟು ಆಕ್ಸಿಜನ್ ಬೇಡಿಕೆ ಇದೆ, ಕೇಂದ್ರ ಸರ್ಕಾರದಿಂದ ಪೂರೈಕೆಯಾಗುತ್ತಿರುವ ಪ್ರಮಾಣವೆಷ್ಟು ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿತು. ಎಜಿ ಪ್ರಭುಲಿಂಗ ನಾವದಗಿ ಉತ್ತರಿಸಿ, ಮೇ 5ರ ವರೆಗೆ ರಾಜ್ಯದಲ್ಲಿರುವ ಸಕ್ರಿಯ ಪ್ರಕರಣಗಳ ಅಂದಾಜಿನ ಮೇಲೆ ಪ್ರತಿದಿನ 1,792 ಮೆಟ್ರಿಕ್ ಟನ್ ಆಕ್ಸಿಜನ್ ಅಗತ್ಯವಿದೆ. ಆಸ್ಪತ್ರೆಗಳಿಗೆ ಸರ್ಕಾರದ ವತಿಯಿಂದಲೇ ಆಮ್ಲಜನಕ ಪೂರೈಸಲಾಗುತ್ತಿದೆ ಎಂದರು. ಕೇಂದ್ರದ ಪರ ವಕೀಲ ಎಂ.ಎನ್. ಕುಮಾರ್, ರಾಜ್ಯಕ್ಕೆ ಈ ಮೊದಲು 802 ಮೆಟ್ರಿಕ್ ಟನ್ ಆಕ್ಸಿಜನ್ ಬಳಕೆಗೆ ಮಿತಿ ನಿಗದಿಪಡಿಸಲಾಗಿತ್ತು. ಆ ಮಿತಿಯನ್ನು 865 ಮೆಟ್ರಿಕ್ ಟನ್​ಗೆ ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದರು.

ಆಕ್ಸಿಜನ್ ದುರಂತದ ನ್ಯಾಯಾಂಗ ತನಿಖೆ?

ಬೆಂಗಳೂರು: ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸಂಭವಿಸಿದ 24 ಸೋಂಕಿತರ ಸಾವಿನ ದುರಂತಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವ ಕುರಿತು ನಿಲುವು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಮಂಗಳವಾರ ವಿಚಾರಣೆ ನಡೆಸಿತು. ಮಾಧ್ಯಮ ವರದಿಗಳ ಜತೆಗೆ ಈ ಕುರಿತು ಸಲ್ಲಿಕೆಯಾಗಿದ್ದ ಹಲವು ಮೆಮೋಗಳನ್ನು ಪ್ರಸ್ತಾಪಿಸಿದ ಪೀಠ, ಘಟನೆಗೆ ಆಘಾತ ವ್ಯಕ್ತಪಡಿಸಿತಲ್ಲದೆ ದುರಂತ ತಡೆಯಲು ವಿಫಲವಾದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.