ನ್ಯೂಸ್

ಅಯೋಧ್ಯೆಯಲ್ಲಿ ‘ಯಾತ್ರಿ ನಿವಾಸ’ ನಿರ್ಮಾಣ ರಾಜ್ಯ ಸರ್ಕಾರ ನಿರ್ಧಾರ

ಬೆಂಗಳೂರು: ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲರಾಮನ ದರ್ಶನಕ್ಕಾಗಿ ಕರ್ನಾಟಕದಿಂದ ತೆರಳುವ ಭಕ್ತರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಮುಜರಾಯಿ ಇಲಾಖೆಯು ಅಯೋಧ್ಯೆಯಲ್ಲಿ ಕರ್ನಾಟಕ ಭವನ (ಯಾತ್ರಿ ನಿವಾಸ) ನಿರ್ಮಿಸಲು ನಿರ್ಧರಿಸಿದೆ. ಈ ಸಂಬಂಧ ಜಮೀನು ಕೇಳಲು ಉತ್ತರ ಪ್ರದೇಶಕ್ಕೆ ಶೀಘ್ರದಲ್ಲೇ ಇಲಾಖೆ ನಿಯೋಗ ತೆರಳಲಿದೆ.

ಈಗಾಗಲೇ ಭವನ ನಿರ್ಮಾಣ ವಿಚಾರವಾಗಿ ಉತ್ತರ ಪ್ರದೇಶ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, 5 ಎಕರೆ ಜಾಗ ಕೇಳಲಾಗಿದೆ. ಜಾಗ ಮಂಜೂರಾದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ಭವನ ನಿರ್ಮಾಣ ಮಾಡಲು ರಾಜ್ಯ ಮುಜರಾಯಿ ಇಲಾಖೆ ತೀರ್ಮಾನಿಸಿದೆ. ಇದಕ್ಕಾಗಿ ರಾಜ್ಯ ಬಜೆಟ್‌ನಲ್ಲಿ ಹಣ ಮೀಸಲಿಡಲು ಕೋರಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಧಾರ್ಮಿಕ ದತ್ತಿ ಇಲಾಖೆಯು ತಿರುಪತಿ ಮತ್ತು ಶ್ರೀಶೈಲದಲ್ಲಿ ಅತಿಥಿ ಗೃಹಗಳನ್ನು ನಿರ್ಮಿಸಿರುವ ಮಾದರಿಯಲ್ಲಿಯೇ ಅಯೋಧ್ಯೆಯಲ್ಲೂ ನಿರ್ಮಿಸಲು ಸರ್ಕಾರ ಯೋಜಿಸಿದೆ. ಈ ವಿಚಾರವಾಗಿ ಹಿಂದಿನ ಸರ್ಕಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವಧಿಯಲ್ಲಿಯೇ ಮನವಿ ಮಾಡಲಾಗಿತ್ತು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಅವರಿಗೆ ಪತ್ರ ಬರೆದಿದ್ದು, ಉತ್ತರ ಬರಬೇಕಿದೆ. 2020ರಲ್ಲಿ ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ಕೂಡ 2 ಎಕರೆ ಜಮೀನು ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಪತ್ರ ಬರೆದಿದ್ದರು.