Karnataka Government: ಪ್ರವಾಹ ಪೀಡಿತ ಹಿಮಾಚಲ ಪ್ರದೇಶದ ಪ್ರಕೃತಿ ವಿಕೋಪ ನಿಧಿಗೆ ಕರ್ನಾಟಕ ಸರ್ಕಾರ 5 ಕೋಟಿ ರೂಪಾಯಿಗಳ ನೆರವು ನೀಡಿದೆ. ಈ ವಿಷಯವಾಗಿ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖುಗೆ ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ, ಸಂತ್ರಸ್ತರಿಗೆ ನೆರವಾಗುವುದಾಗಿ ತಿಳಿಸಿದ್ದಾರೆ.
ಪತ್ರವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಮುಖ್ಯಮಂತ್ರಿಗಳು, ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಅಪಾರ ಜೀವಹಾನಿ, ಮನೆಗಳಿಗೆ ಹಾನಿಯಾಗಿದ್ದು, ಇಂತಹ ಸಂಕಷ್ಟದ ಸಂದರ್ಭದಲ್ಲಿ ಕರ್ನಾಟಕದ ಜನತೆ ಅಲ್ಲಿನ ಸಂತ್ರಸ್ತರೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತಾರೆ. ಸದ್ಯ ಬೆಂಬಲದ ಸಂಕೇತವಾಗಿ, ನಮ್ಮ ಸರ್ಕಾರ ಪರಿಹಾರ ಮತ್ತು ಪುನರ್ವಸತಿಗಾಗಿ 5 ಕೋಟಿ ರೂಪಾಯಿಗಳನ್ನು ನೀಡುವ ಮೂಲಕ ನಾವು ನಿಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇವೆ ಎಂದು ಬರೆದಿದ್ದಾರೆ.
ಇತ್ತೀಚೆಗೆ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ 1,500 ಕೋಟಿ ಆರ್ಥಿಕ ನೆರವು ನೀಡುವುದಾಗಿ ತಿಳಿಸಿದ್ದರು. ಹಿಮಾಚಲ ಪ್ರದೇಶದ ಪ್ರವಾಹ ಪೀಡಿತ ಪ್ರದೇಶಗಳಿಗೆ ಪ್ರಧಾನಿ ಮಂತ್ರಿ ಆವಾಸ್ ಯೋಜನೆಯ ಮೂಲಕ ಮನೆಗಳ ಪುನರ್ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿಗಳ ಪುನಃಸ್ಥಾಪನೆ, ಶಾಲೆಗಳ ಸ್ಥಾಪನೆ, ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ ಅಥವಾ ಪಿಎಂಎನ್‌ಆರ್‌ಎಫ್ ಅಡಿಯಲ್ಲಿ ಜಾನುವಾರುಗಳಿಗೆ ಕಿಟ್‌ಗಳನ್ನು ಬಿಡುಗಡೆ ಮಾಡುವುದು ಎಲ್ಲ ಯೋಜನೆಗಳು ಸೇರಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.