ರಾಷ್ಟ್ರೀಯ ಅಂತರ ರಾಜ್ಯ ಅಥ್ಲೆಟಿಕ್ಸ್: ಕರ್ನಾಟಕಕ್ಕೆ 3 ಚಿನ್ನ ಸಹಿತ ಒಟ್ಟು 15 ಪದಕ
ಬೆಂಗಳೂರು: ಕರ್ನಾಟಕ ತಂಡ ಒಡಿಶಾದ ಭುವನೇಶ್ವರದಲ್ಲಿ ಭಾನುವಾರ ಮುಕ್ತಾಯಗೊಂಡ 65ನೇ ರಾಷ್ಟ್ರೀಯ ಅಂತರ ರಾಜ್ಯ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ (National Inter State Senior Athletics Championship) 3 ಚಿನ್ನ, 6 ಬೆಳ್ಳಿ, 6 ಕಂಚಿನ ಸಹಿತ ಒಟ್ಟು 15 ಪದಕಗಳನ್ನು ಗೆದ್ದು 6ನೇ ಸ್ಥಾನ ಗಳಿಸಿದೆ. ಕೊನೇ ದಿನ ಕರ್ನಾಟಕಕ್ಕೆ 3 ಬೆಳ್ಳಿ ಮತ್ತು 1 ಕಂಚಿನ ಪದಕ ಒಲಿಯಿತು.
ಮಹಿಳೆಯರ ಹೈಜಂಪ್ ಸ್ಪರ್ಧೆಯಲ್ಲಿ ರಾಜ್ಯದ ಸುಪ್ರಿಯಾ ಬಿ. 1.80 ಮೀ. ಎತ್ತರ ಜಿಗಿಯುವ ಮೂಲಕ ಬೆಳ್ಳಿ ಪದಕ ಒಲಿಸಿಕೊಂಡರು. ಈ ಮೂಲಕ ಅವರು ಏಷ್ಯನ್ ಗೇಮ್ಸ್ ಅರ್ಹತೆಯ ಮಾನದಂಡವನ್ನೂ (1.80 ಮೀ) ಸಾಧಿಸಿದರು. ಹರಿಯಾಣದ ಪೂಜಾ 1.83 ಮೀ. ಜಿಗಿದು ಚಿನ್ನ ಜಯಿಸಿದರು.
ಪುರುಷರ 4/400 ಮೀ. ರಿಲೇಯಲ್ಲಿ ಕಶ್ಯಪ, ಮಿಜೋ ಕುರಿಯನ್, ತೀರ್ಥೇಶ್ ಶೆಟ್ಟಿ, ಯಶಸ್ ಒಳಗೊಂಡ ರಾಜ್ಯ ತಂಡ 3 ನಿಮಿಷ, 9.51 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿ ಬೆಳ್ಳಿ ಗೆದ್ದುಕೊಂಡಿತು. ಮಹಿಳೆಯರ 4/400 ಮೀ. ರಿಲೇಯಲ್ಲಿ ಸಿಂಚಲ್, ವಿಜಯಕುಮಾರಿ ಜಿ.ಕೆ., ಪೂವಮ್ಮ ಎಂ.ಆರ್, ಪ್ರಿಯಾ ಮೋಹನ್ ಒಳಗೊಂಡ ರಾಜ್ಯ ತಂಡ 3 ನಿಮಿಷ, 36.18 ಸೆಕೆಂಡ್ಗಳಲ್ಲಿ ಓಡಿ ರಜತ ಪದಕ ಜಯಿಸಿತು. ಪುರುಷರ 10 ಸಾವಿರ ಮೀ. ಓಟದಲ್ಲಿ ರಾಜ್ಯದ ಶೈಲೇಶ್ ಕುಶ್ವಾಹ 30 ನಿಮಿಷ, 23.13 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿ ಕಂಚಿನ ಪದಕ ಒಲಿಸಿಕೊಂಡರು.