| ರುದ್ರಣ್ಣ ಹರ್ತಿಕೋಟೆ
ಬೆಂಗಳೂರು: ಲಡಾಖ್ ಲಡಾಯಿ ಬಳಿಕ ಚೀನಾಕ್ಕೆ ಪಾಠ ಕಲಿಸಲು ಆ ದೇಶದ ವಸ್ತುಗಳನ್ನು ನಿಷೇಧಿಸಬೇಕೆಂಬ ಕೂಗು ದೇಶಾದ್ಯಂತ ಬಲಪಡೆದುಕೊಂಡಿರುವಂತೆಯೇ ಇತ್ತ ರಾಜ್ಯದಲ್ಲಿ ಚೀನಾಕ್ಕೆ ಸ್ಪರ್ಧೆ ನೀಡುವುದಕ್ಕಾಗಿ ಸದ್ದಿಲ್ಲದೆ ಸಿದ್ಧತೆ ಶುರುವಾಗಿದೆ.
ಹಿಂದಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ‘ಚೀನಾದೊಂದಿಗೆ ಸ್ಪರ್ಧೆ’ ಯೋಜನೆ ರೂಪಿಸಲಾಗಿತ್ತು. ಕುಮಾರಸ್ವಾಮಿ ಸರ್ಕಾರ ಅಧಿಕಾರದಲ್ಲಿ ಇರುವವರೆಗೆ ವೇಗವಾಗಿ ಮುನ್ನಡೆಯುತ್ತಿದ್ದ ಯೋಜನೆ ಬಳಿಕ ನಿಧಾನಗತಿಗೆ ಹೊರಳಿತು. ಇದೀಗ ಲಾಕ್ಡೌನ್ ನಿಯಮ ಸಡಿಲಗೊಂಡ ಬಳಿಕ ಮತ್ತೆ ಚಾಲನೆ ಪಡೆದುಕೊಂಡಿದೆ.
ಹೊಸ ಹೂಡಿಕೆ ಕಷ್ಟ: ಆರ್ಥಿಕ ಕುಸಿತ ಹಾಗೂ ಕರೊನಾ ತಂದೊಡ್ಡಿರುವ ಸಮಸ್ಯೆಗಳಿಂದಾಗಿ ಹೊಸ ಹೂಡಿಕೆ ನಿರೀಕ್ಷಿಸುವುದೇ ಕಷ್ಟವಾಗಿದೆ. ಆದ್ದರಿಂದ ಕ್ಲಸ್ಟರ್ಗಳಲ್ಲಿ ಈ ಹಿಂದೆ ಕಂಡುಬಂದಿದ್ದ ಆಸಕ್ತಿಯನ್ನು ಲಾಭವನ್ನಾಗಿಸಿಕೊಳ್ಳಲು ಸರ್ಕಾರ ಮುಂದಾಗಿದೆ.
ಎರಡು ಕ್ಲಸ್ಟರ್ ಗುರಿ: ಹಿಂದಿನ ಸರ್ಕಾರ ರೂಪಿಸಿದ್ದ ಒಂಬತ್ತು ಕ್ಲಸ್ಟರ್ಗಳ ಜತೆಗೆ ಸಿಎಂ ಯಡಿಯೂರಪ್ಪ ಬಜೆಟ್ ನಲ್ಲಿ ಮತ್ತೆರಡು ಕ್ಲಸ್ಟರ್ ಘೋಷಿಸಿದ್ದರು. ಒಟ್ಟು 11 ಕ್ಲಸ್ಟರ್ಗಳ ಪೈಕಿ ಒಂಬತ್ತರಲ್ಲಿ ಚಟುವಟಿಕೆ ನಡೆದಿವೆ. ಹಿಂದಿನ ಸರ್ಕಾರ 2018ರ ಡಿಸೆಂಬರ್ನಲ್ಲಿಯೇ ಕೊಪ್ಪಳದ ಆಟಿಕೆಗಳ ಕ್ಲಸ್ಟರ್ ಹಾಗೂ ಬಳ್ಳಾರಿಯ ಸಿದ್ಧ ಉಡುಪುಗಳ ಕ್ಲಸ್ಟರ್ ಉದ್ಘಾಟಿಸುವ ಉದ್ದೇಶ ಹೊಂದಿತ್ತು. ಇದೀಗ ಮುಂದಿನ ಆರು ತಿಂಗಳೊಳಗೆ ಈ ಕ್ಲಸ್ಟರ್ಗಳ ಕಾರ್ಯ ಆರಂಭಿಸುವ ಉದ್ದೇಶ ಹೊಂದಲಾಗಿದೆ.
ಹೊಸ ಕ್ಲಸ್ಟರ್ ಯಾವುವು: ಶಿವಮೊಗ್ಗದಲ್ಲಿ ಬಯೋಫಾರ್ಮ ಮತ್ತು ವೆಲ್ನೆಸ್ ಹಾಗೂ ಧಾರವಾಡದಲ್ಲಿ ಫಾಸ್ಟ್ ಮೂವಿಂಗ್ ಕನ್ಸೂಮರ್ ಗೂಡ್ಸ್ (ಎಫ್ಎಂಸಿಜಿ) ಕ್ಲಸ್ಟರ್ಗಳನ್ನು ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ವಿಷನ್ ಗ್ರೂಪ್ನಂತೆ ಸಿದ್ಧತೆ: ತಜ್ಞರನ್ನೊಳಗೊಂಡ ವಿಷನ್ ಗ್ರೂಪ್ಗಳು ಸಿದ್ಧಪಡಿಸಿಕೊಟ್ಟ ವರದಿಯಂತೆ ಮೂಲ ಸೌಕರ್ಯ ಹಾಗೂ ಹೂಡಿಕೆದಾರರ ಜತೆ ಮಾತುಕತೆಗಳು ನಡೆದಿವೆ. ಪ್ರತಿಯೊಂದು ಕ್ಲಸ್ಟರ್ಗೂ ಹೂಡಿಕೆದಾರರು ಆಸಕ್ತಿ ತೋರಿಸಿರುವುದು ವಿಶೇಷ. ವಿಷನ್ ಗ್ರೂಪ್ಗಳು ಒಟ್ಟಾರೆ 70ಕ್ಕೂ ಹೆಚ್ಚು ಸಭೆಗಳನ್ನು ನಡೆಸಿವೆ.
ಯಾವ ಕ್ಲಸ್ಟರ್ನಲ್ಲಿ ಏನಾಗಿದೆ?: * ಕೊಪ್ಪಳ (ಆಟಿಕೆ: ವಿಷನ್ ಗ್ರೂಪ್ 3 ಸಭೆ ನಡೆಸಿದೆ. ಹೂಡಿಕೆದಾರರ ಜತೆ 4 ಸಭೆ ನಡೆದಿವೆ. 255 ಎಕರೆ ಭೂಮಿ ಸಿದ್ಧವಿದ್ದು, ಅದರಲ್ಲಿ ಏಕ್ವಿಸ್ ಸಂಸ್ಥೆ 128 ಎಕರೆಯಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪಿಸಲಿದೆ. ಕೆಎಸ್ಎಸ್ಐಡಿಸಿಯ 104 ಎಕರೆ ಜಾಗ ಬಳಸಲಾಗುತ್ತದೆ. ಸರ್ಕಾರ ವಿಶೇಷ ಪ್ಯಾಕೇಜ್ ಸಹ ಘೋಷಿಸಿದೆ. ಏಕ್ವಿಸ್ ಸಂಸ್ಥೆ 1500 ಕೋಟಿ ರೂ.ಹೂಡಿಕೆ ಮಾಡಿ 20 ಸಾವಿರ ಉದ್ಯೋಗ ಒದಗಿಸಲು ಒಡಂಬಡಿಕೆ ಮಾಡಿಕೊಂಡಿದೆ. ಇನ್ನೂ 8 ಸಂಸ್ಥೆಗಳು ಹೂಡಿಕೆಗೆ ಆಸಕ್ತಿ ತೋರಿಸಿವೆ. 41 ಕಂಪನಿಗಳನ್ನು ಸಂರ್ಪಸಲಾಗಿದೆ.
* ಬಳ್ಳಾರಿ (ಟೆಕ್ಸ್ಟೈಲ್): ವಿಷನ್ ಗ್ರೂಪ್ 5 ಸಭೆ ನಡೆಸಿದೆ. ಹೂಡಿಕೆದಾರರ ಜತೆ 14 ಸಭೆ ನಡೆದಿವೆ. ಅಮರಾಪುರ ಎಂಬಲ್ಲಿ 147 ಎಕರೆ ಜಾಗ ಸಿದ್ಧವಿದೆ. ಮುಂಡರಗಿ ಬಳಿ 40 ಎಕರೆ ಸರ್ಕಾರಿ ಜಾಗ ಇದೆ. ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ. ಆಕಾಂಕ್ಷ ಫೌಂಡೇಶನ್ 30 ಕೋಟಿ ರೂ. ಹೂಡಿಕೆ, 2 ಸಾವಿರ ಉದ್ಯೋಗ ನೀಡುವ ಯೋಜನೆಗೆ ಸರ್ಕಾರ ಒಪ್ಪಿದೆ. ಸಾಹಿ ಎಕ್ಸ್ಪೋರ್ಟ್ನ 320 ಕೋಟಿ ರೂ. ಹೂಡಿಕೆ 16 ಸಾವಿರ ಉದ್ಯೋಗ, ಗೋಕುಲ್ದಾಸ್ನ 80 ಕೋಟಿ ರೂ. ಹೂಡಿಕೆಯ 5 ಸಾವಿರ ಉದ್ಯೋಗ, ಬಿನಾರಿ ಟೆಕ್ಸ್ಟೈಲ್ನ 100 ಕೋಟಿ ರೂ. ಹೂಡಿಕೆ 5 ಸಾವಿರ ಉದ್ಯೋಗ, ನಫೀಜಾ ಗಾರ್ವೆಂಟ್ಸ್ನ 8 ಕೋಟಿ ರೂ. ಹೂಡಿಕೆ, 400 ಉದ್ಯೋಗದ ಯೋಜನೆಗಳಿಗೆ ಒಡಂಬಡಿಕೆ ಆಗಿದೆ. ಇನ್ನೂ ನಾಲ್ಕು ಕಂಪನಿಗಳ ಜತೆ ಚರ್ಚೆ ನಡೆದಿದೆ.
* ಚಿಕ್ಕಬಳ್ಳಾಪುರ (ಮೊಬೈಲ್ ಪೋನ್): ವಿಷನ್ ಗ್ರೂಪ್ 6 ಸಭೆಗಳನ್ನು ನಡೆಸಿದೆ. ಹೂಡಿಕೆದಾರರ ಜತೆ 13 ಸಭೆ ನಡೆದಿವೆ. ಚಿಂತಾಮಣಿ ತಾಲೂಕಿನ ಮಾಸ್ತೇನಹಳ್ಳಿ ಬಳಿ 516 ಎಕರೆ ಕೆಐಎಡಿಬಿ ಜಾಗ ಗುರುತಿಸಲಾಗಿದೆ. ಒಪ್ಪೊ, ಸ್ಮೈಲ್, ಲೊಜಿಕಲ್, ಎಕ್ಸ್ಮಿ, ಹೈಪಿ, ಹೈಲಾ ಸಂಸ್ಥೆಗಳ ಜತೆ ಚರ್ಚೆ ನಡೆದಿದೆ. ಇನ್ನೂ 26 ಕಂಪನಿಗಳನ್ನು ಗುರುತಿಸಲಾಗಿದೆ.
* ಮೈಸೂರು (ಪಿಸಿಬಿ ಮತ್ತು ಐಸಿಬಿ: ವಿಷನ್ ಗ್ರೂಪ್ ಐದು ಸಭೆ ನಡೆಸಿದೆ. ಹೂಡಿಕೆದಾರರ ಜತೆ 3 ಸಭೆ ನಡೆದಿವೆ. ನಂಜನಗೂಡು ತಾಲೂಕಿನ ಹಿಮ್ಮಾವು ಎಂಬಲ್ಲಿ 500 ಎಕರೆ ಜಾಗ ಗುರುತಿಸಲಾಗಿದೆ. 55 ಕೋಟಿ ರೂ. ಹೂಡಿಕೆ ಮಾಡಿ 225 ಉದ್ಯೋಗ ನೀಡುವ ಕ್ಯಾನೆಸ್ ಹಾಗೂ 5 ಕೋಟಿ ರೂ. ಹೂಡಿಕೆ ಮಾಡಿ 25 ಉದ್ಯೋಗ ನೀಡುವ ಥಮೋಸೇನ್ ಟೆಕ್ನಾಲಜೀಸ್ಗೆ ಒಪ್ಪಿಗೆ ನೀಡಲಾಗಿದೆ. ಒಟ್ಟು 49 ಹೂಡಿಕೆದಾರರ ಜತೆ ಮಾತುಕತೆ ನಡೆದಿದೆ. ಅದರಲ್ಲಿ ನಾಲ್ಕು ಆಸಕ್ತಿ ತೋರಿಸಿವೆ.
* ಹಾಸನ (ಟೈಲ್ಸ್): ಹಾಸನದಲ್ಲಿ ಸ್ವಂತ ಜಾಗ ಇದೆ. ಕಚ್ಚಾವಸ್ತು ಲಭ್ಯತೆ ಬಗ್ಗೆ ಅಧ್ಯಯನ ಮಾಡಿ ವರದಿ ನೀಡುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸೂಚನೆ ನೀಡಲಾಗಿದೆ. ಏನಿದು ಯೋಜನೆ?
ಚೀನಾದಿಂದ ಬರುವ ವಸ್ತುಗಳನ್ನು ನಮ್ಮ ರಾಜ್ಯದಲ್ಲೇ ಉತ್ಪಾದಿಸುವ ಮೂಲಕ ಆ ದೇಶಕ್ಕೆ ಸೆಡ್ಡು ಹೊಡೆಯಬೇಕೆಂಬುದು ಯೋಜನೆಯ ತಿರುಳು. ಚೀನಾ ವಸ್ತುಗಳಿಂದಾಗಿ ರಾಜ್ಯದಲ್ಲಿ ಮುಚ್ಚಿ ಹೋಗಿರುವ ಸಣ್ಣ ಕೈಗಾರಿಕೆಗಳಿಗೆ ಜೀವ ತುಂಬುವುದು, ಆ ಮೂಲಕ ಬಂಡವಾಳ ಆಕರ್ಷಣೆ, ನಿರುದ್ಯೋಗ ನಿವಾರಿಸುವುದು ಯೋಜನೆಯ ಪ್ರಮುಖ ಆಶಯ.
ಕ್ಲಸ್ಟರ್ಗಳಲ್ಲಿ ಏನಾಗಿದೆ?: ಎರಡು ಹೊಸ ಕ್ಲಸ್ಟರ್ಗೂ ವಿಷನ್ ಗ್ರೂಪ್ ರಚನೆಯಾಗಿದೆ. ಧಾರವಾಡದ ಎಫ್ಎಂಸಿಜಿ ಕ್ಲಸ್ಟರ್ಗೆ ಸಂಬಂಧಿಸಿದಂತೆ ಮಮ್ಮಿಗಟ್ಟಿ ಬಳಿ 500 ಎಕರೆ ಜಾಗ ಸಿದ್ಧವಿದೆ. ಜ್ಯೋತಿ ಲ್ಯಾಬ್ ಆಸಕ್ತಿ ತೋರಿಸಿದೆ. ಶಿವಮೊಗ್ಗದ ವೆಲ್ನೆಸ್ ಕ್ಲಸ್ಟರ್ನ್ನು ಪ್ರವಾಸಿ ತಾಣವಾಗಿಯೇ ಅಭಿವೃದ್ಧಿಪಡಿಸುವ ಉದ್ದೇಶವಿದೆ. ಆ ಬಗ್ಗೆ ಅಧ್ಯಯನ ನಡೆದಿದೆ.
ವಿಶೇಷ ಪ್ಯಾಕೇಜ್: ಎಲೆಕ್ಟ್ರಾನಿಕ್ಸ್ ಉದ್ದಿಮೆಗಳಿಗೆ ಸಂಬಂಧಿಸಿದ ಚಿತ್ರದುರ್ಗ, ಕಲಬುರಗಿ, ಮೈಸೂರು, ಚಿಕ್ಕಬಳ್ಳಾಪುರ ಕ್ಲಸ್ಟರ್ಗಳನ್ನು ಒಂದೇ ಎಂದು ಗುರುತಿಸಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗುತ್ತದೆ.
ಈಕ್ವಿಟಿ ಇಲ್ಲ
ಯೋಜನೆ ರೂಪು ಗೊಂಡಾಗ ಸರ್ಕಾರದಿಂದ ಪ್ರತಿಯೊಂದು ಕ್ಲಸ್ಟರ್ಗೆ 2000 ಕೋಟಿ ರೂ. ಈಕ್ವಿಟಿ ರೂಪದಲ್ಲಿ ನೀಡುವ ಉದ್ದೇಶ ಹೊಂದಲಾಗಿತ್ತು ಅದನ್ನು ಕೈ ಬಿಡಲಾಗಿದೆ.
ಚೀನಾದೊಂದಿಗೆ ಸ್ಪರ್ಧೆ ಅಂತ ಹೆಸರಿಟ್ಟರು. ಆದರೆ ಏನೂ ಬೆಳವಣಿಗೆ ಯಾಗಿರಲಿಲ್ಲ. ಈಗ ಹೊಸದಾಗಿ ಎರಡು ಕ್ಲಸ್ಟರ್ಗಳನ್ನು ಮಾಡಲಾಗುತ್ತಿದೆ. ರಾಜ್ಯದಲ್ಲಿ ಹೂಡಿಕೆ ಹೆಚ್ಚಾಗಿ, ನಿರುದ್ಯೋಗ ನಿವಾರಣೆ ಆಗಬೇಕು ಎಂಬುದು ಸರ್ಕಾರದ ಉದ್ದೇಶ. | ಜಗದೀಶ ಶೆಟ್ಟರ್ ಕೈಗಾರಿಕಾ ಸಚಿವ