ನ್ಯೂಸ್

ಪವನ ಶಕ್ತಿ ವಿದ್ಯುತ್ ನಲ್ಲಿ ಕರ್ನಾಟಕ ಫಸ್ಟ್: ಸಚಿವ ಪ್ರಲ್ಹಾದ ಜೋಶಿ | Clean and Green energy vision

ಬೆಂಗಳೂರು: ಪವನ ವಿದ್ಯುತ್‌ ಉತ್ಪಾದನೆ ನವೀಕರಿಸಬಹುದಾದ ಇಂಧನ ವಲಯದ ಕೇಂದ್ರಬಿಂದುವಾಗಿದೆ. 1331.48 ಮೆಗಾವ್ಯಾಟ್ ಪವನ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯ ಸಾಧಿಸಿದ ಕರ್ನಾಟಕ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಬೆಂಗಳೂರಿನಲ್ಲಿ ಭಾನುವಾರ ನಡೆದ ʼಗ್ಲೋಬಲ್‌ ವಿಂಡ್‌ ಡೇʼ ಸಮ್ಮೇಳನ ಉದ್ದೇಶಿಸಿ ಮಾತನಾಡಿ, ಪವನ ವಿದ್ಯುತ್‌ ಉತ್ಪಾದನೆಯಲ್ಲಿ ತಮಿಳುನಾಡು 1136.37 ಮೆಗಾವ್ಯಾಟ್ ಉತ್ಪಾದಿಸಿ ದ್ವಿತೀಯ ಮತ್ತು ಗುಜರಾತ್ 954.76 ಮೆಗಾವ್ಯಾಟ್ ಉತ್ಪಾದಿಸಿ ತೃತೀಯ ಸ್ಥಾನದಲ್ಲಿದ್ದು, ಭಾರತದ ನವೀಕರಿಸಬಹುದಾದ ಇಂಧನ ವಲಯದ ಕಾರ್ಯತಂತ್ರದ ಕೇಂದ್ರಬಿಂದುವಾಗಿವೆ ಎಂದು ಹೇಳಿದರು.

ಸರ್ಕಾರದ ಪಿಎಂ ಕುಸುಮ್‌, ಕುಸುಮ್‌ ಬಿ ಮತ್ತು ಕುಸುಮ್‌ ಸಿ ಯೋಜನೆಗಳು ರೈತರಿಗೆ ವರವಾಗಿದ್ದು, ವಿದ್ಯುತ್‌ ಸಮಸ್ಯೆ ನೀಗಿಸುವ ಜತೆಗೆ ಆರ್ಥಿಕ ಉಳಿತಾಯ ಮತ್ತು ಆದಾಯದ ದಾರಿಯಾಗಿದೆ. ಈ ಯೋಜನೆಗಳ ಜತೆಗೆ ಸೂರ್ಯ ಘರ್‌ ಸಹ ವಿದ್ಯುತ್‌ ಸ್ವಾವಲಂಬನೆ ತಂದಿದೆ. ಜನರೂ ಇದನ್ನು ಅಪೇಕ್ಚಿಸುತ್ತಿದ್ದು, ರಾಜ್ಯ ಸರ್ಕಾರಗಳು ಹೆಚ್ಚಿನ ರೀತಿಯಲ್ಲಿ ಸ್ಪಂದಿಸಬೇಕು. ಕೇಂದ್ರದೊಂದಿಗೆ ಕೈ ಜೋಡಿಸಬೇಕು ಎಂದು ಹೇಳಿದರು.

ಬಜೆಟ್ ಗಾತ್ರ ಹೆಚ್ಚಳ

ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನ, ಇಚ್ಛಾಶಕ್ತಿಯಂತೆ ಕೇಂದ್ರ ಸರ್ಕಾರ ನವೀಕರಿಸಬಹುದಾದ ಇಂಧನ ವಲಯಕ್ಕೆ ಪ್ರಮುಖ ಆದ್ಯತೆ ನೀಡಿದೆ. ಪ್ರಸಕ್ತ ವರ್ಷ ನವೀಕರಿಸಬಹುದಾದ ಇಂಧನ ಬಜೆಟ್ ಅನ್ನು ಶೇ.53ರಷ್ಟು ಹೆಚ್ಚಿಸಿದೆ. ₹26,549 ಕೋಟಿ ಬಜೆಟ್‌ಗೆ ಏರಿದೆ. ಇದರಲ್ಲಿ ಹೆಚ್ಚಿನ ಪಾಲು ಪವನ ವಿದ್ಯುತ್‌ ಉತ್ಪಾದನೆಗೆ ಮೀಸಲಿರಿಸಲಾಗಿದೆ ಎಂದರು.

ಭಾರತದ ಪವನ ವಿದ್ಯುತ್ ಸಾಮರ್ಥ್ಯ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ಶೇ.10.5ಕ್ಕಿಂತ ಹೆಚ್ಚಾಗಿದ್ದು, 51.5 ಗಿಗಾವ್ಯಾಟ್‌ಗೆ ತಲುಪಿದೆ. ಇದರೊಂದಿಗೆ ದೇಶದ ನವೀಕರಿಸಬಹುದಾದ ಇಂಧನ ವಲಯ ಅಭೂತಪೂರ್ವ ಬೆಳವಣಿಗೆಗೆ ಸಾಕ್ಷಿಯಾಗಿದ್ದು, ದೇಶದ ಸುಸ್ಥಿರ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತಿದೆ. ಒಟ್ಟು ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಪ್ರತಿ ವರ್ಷ ಶೇ.17.13 ರಷ್ಟು ಹೆಚ್ಚಾಗುತ್ತಿದೆ. ಸದ್ಯ 226.74 ಗಿಗಾವ್ಯಾಟ್‌ ತಲುಪಿದೆ ಎಂದು ಹೇಳಿದರು.

ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಅಗಾಧ ಸಾಧನೆಗೈಯ್ಯುತ್ತಿದೆ. ಜಾಗತಿಕವಾಗಿ 4ನೇ ಅತಿ ದೊಡ್ಡ ಪವನ ವಿದ್ಯುತ್ ಸ್ಥಾಪಿತ ಹಾಗೂ 3ನೇ ಅತಿ ದೊಡ್ಡ ನವೀಕರಿಸಬಹುದಾದ ಇಂಧನ ಉತ್ಪಾದಕ ರಾಷ್ಟ್ರವಾಗಿ ಹೊರ ಹೊಮ್ಮಿದೆ. 10 ವರ್ಷಗಳಲ್ಲಿ ಯಾರೂ ಊಹಿಸದ ಸಾಮರ್ಥ್ಯವನ್ನು ಪ್ರದರ್ಶಿಸಿದೆ ಎಂದು ಎಂದು ಸಚಿವ ಪ್ರಲ್ಹಾದ ಜೋಶಿ ಪ್ರತಿಪಾದಿಸಿದರು.

ನವೀಕರಿಸಬಹುದಾದ ಇಂಧನಕ್ಕೆ ಆದ್ಯತೆ

ರಾಜ್ಯದ ಇಂಧನ ಸಚಿವ ಕೆ.ಜೆ.ಜಾರ್ಜ್‌ ಮಾತನಾಡಿ 2025ರ ಮೇ ವೇಳೆಗೆ ಪವನ ವಿದ್ಯುತ್ತಿನ ಸ್ಥಾಪಿತ ಸಾಮರ್ಥ್ಯ 7,351 ಮೆಗಾವ್ಯಾಟ್‌ನಷ್ಟಿತ್ತು. ಕಳೆದ ಆರ್ಥಿಕ ಸಾಲಿನಲ್ಲಿ 1,331 ಮೆಗಾವ್ಯಾಟ್‌ಗಳನ್ನು ಸೇರ್ಪಡೆಗೊಳಿಸಿ ದೇಶದಲ್ಲಿ ಅಗ್ರಮಾನ್ಯ ಸ್ಥಾನದಲ್ಲಿದ್ದೇವೆ ಎಂದು ತಿಳಿಸಿದರು.

"ಇದು ಕೇವಲ ಅಂಕಿ-ಅಂಶವಲ್ಲ. ನಮ್ಮ ಬದ್ಧತೆ, ಯೋಜನೆಗಳನ್ನು ಕಾರ್ಯಗತಗೊಳಿಸುವ ನಮ್ಮ ಸಾಮರ್ಥ್ಯದ ಪ್ರತೀಕ. ರಾಜ್ಯದ ಕೈಗಾರಿಕೆಗಳಿಗೆ, ನಮ್ಮ ರೈತರಿಗೆ, ಮನೆಗಳಿಗೆ ಶುದ್ಧ ಇಂಧನ ಒದಗಿಸುವ ಇಚ್ಛಾ ಶಕ್ತಿಯಾಗಿದೆ," ಎಂದು ಹೇಳಿದರು.

ಸಮ್ಮೇಳನದಲ್ಲಿ ಪವನ ವಿದ್ಯುತ್‌ ಉತ್ಪಾದನೆಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ರಾಜ್ಯಗಳನ್ನು ಪುರಸ್ಕರಿಸಲಾಯಿತು. ಸಚಿವ ಪ್ರಲ್ಹಾದ ಜೋಶಿ ಅವರು ಪವನ ಶಕ್ತಿ ಮಾರ್ಗಸೂಚಿ ಮತ್ತು ಉತ್ಪಾದನಾ ಮಾರ್ಗಸೂಚಿ ವರದಿ ಬಿಡುಗಡೆ ಮಾಡಿದರು. ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಶ್ರೀಪಾದ ಯೆಸ್ಸೊ ನಾಯಕ್, ಇಲಾಖೆ ಕಾರ್ಯದರ್ಶಿ ಸಂತೋಷ ಕುಮಾರ್ ಸಾರಂಗಿ, ಕ್ರಡೆಲ್ ಅಧ್ಯಕ್ಷ ಟಿ.ಡಿ.ರಾಜೇಗೌಡ, ರಾಜ್ಯದ ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ ಇದ್ದರು.