ನ್ಯೂಸ್

ಸಿಇಟಿ ಆಕಾಂಕ್ಷಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವಿಶಿಷ್ಟ ಸಂಖ್ಯೆ

| ಎನ್.ಎಲ್. ಶಿವಮಾದು ಬೆಂಗಳೂರು

ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕಾಗಿ ನಡೆಸುವ ಸಿಇಟಿ ಪಕ್ರಿಯೆಯಲ್ಲಿ ಕೆಲ ಮಹತ್ವದ ಬದಲಾವಣೆಗಳ ಮೂಲಕ ಹೊಸ ರೂಪ ಕೊಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತೀರ್ವನಿಸಿದೆ. ಪ್ರಮುಖವಾಗಿ ನೀಟ್ ಹಾಗೂ ಸಿಇಟಿಗೆ ಒಂದೇ ಅರ್ಜಿ ಪರಿಗಣನೆ, ಆ ಸಂದರ್ಭದಲ್ಲೇ ವಿದ್ಯಾರ್ಥಿಗಳ ದಾಖಲಾತಿಗಳ ಪರಿಶೀಲನೆ ನಡೆಸಲಿದೆ. ಜತೆಗೆ ನೋಂದಾಯಿತ ವಿದ್ಯಾರ್ಥಿಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡಲಿದೆ. ಆದರೆ, ಆನ್​ಲೈನ್ ಪರೀಕ್ಷೆ ಚಿಂತನೆಯನ್ನೇ ಕೈಬಿಟ್ಟಿದೆ.

ಪ್ರತಿ ಬಾರಿ ವಿದ್ಯಾರ್ಥಿಗಳು ಪರೀಕ್ಷೆ ಬರೆದು, ಅರ್ಹತೆ ಪಡೆದ ನಂತರ ಮೀಸಲಾತಿ ಪ್ರಮಾಣಪತ್ರಗಳ ಪರಿಶೀಲನೆ ಮಾಡಲಾಗುತ್ತಿತ್ತು. ಈಗ ಅದನ್ನು ಈ ವರ್ಷದಿಂದ ಅರ್ಜಿ ಸಲ್ಲಿಸುವ ವೇಳೆಯಲ್ಲಿಯೇ ದಾಖಲಾತಿಗಳ ಪರಿಶೀಲನೆ ನಡೆಯಲಿದೆ. ಅರ್ಜಿ ಸಲ್ಲಿಕೆ ವೇಳೆಯೇ ಮೀಸಲಾತಿ ಸೇರಿ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿದ ಬಳಿಕವೇ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಮುಂದಿನ ಹಂತಕ್ಕೆ ಹೋಗಲಿದೆ. ಒಂದು ವೇಳೆ ಸೂಕ್ತ ದಾಖಲಾತಿಗಳನ್ನು ಸಲ್ಲಿಸದಿದ್ದರೆ, ಅರ್ಜಿ ಸಲ್ಲಿಕೆ ಪೂರ್ಣವಾಗುವುದಿಲ್ಲ.

ಉದಾಹರಣೆಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರದಲ್ಲಿ ಕಂದಾಯ ಇಲಾಖೆ ನೀಡಿರುವ ಆರ್​ಡಿ ನಂಬರ್ ಅನ್ನು ಅಪ್​ಲೋಡ್ ಮಾಡದಿದ್ದರೆ, ಅರ್ಜಿ ಸಲ್ಲಿಕೆಗೆ ಮುಂದಿನ ಹಂತ ತೆರೆದುಕೊಳ್ಳುವುದಿಲ್ಲ. ಗ್ರಾಮೀಣ ವಿದ್ಯಾರ್ಥಿಗಳು, ಕನ್ನಡ ಮಾಧ್ಯಮ, ಕಲ್ಯಾಣ ಕರ್ನಾಟಕದ 371ಜೆ, ಆದಾಯ ಮತ್ತು ಜಾತಿ ಪ್ರಮಾಣಪತ್ರ, ಅಂಗವಿಕಲ.... ಹೀಗೆ ಹತ್ತಾರು ರೀತಿಯ ಮೀಸಲಾತಿ ದಾಖಲಾತಿಗಳ ನೈಜ ಪ್ರಮಾಣಪತ್ರಗಳನ್ನು ಸಲ್ಲಿಸಿದರೆ ಮಾತ್ರ ಅರ್ಜಿ ಸಲ್ಲಿಕೆ ಪೂರ್ಣವಾಗಲಿದೆ. ಹೊಸ ನಿಯಮದಿಂದ ವಿದ್ಯಾರ್ಥಿಗಳು ಕೊನೇ ಗಳಿಗೆಯಲ್ಲಿ ಪ್ರಮಾಣಪತ್ರಗಳಿಗಾಗಿ ಪರದಾಡುವುದು ಕೂಡ ತಪ್ಪಲಿದೆ.

ವಿದ್ಯಾರ್ಥಿಗಳಿಗೆ ವಿಶಿಷ್ಟ ಸಂಖ್ಯೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮತ್ತು ವೈದ್ಯಕೀಯ ಪ್ರವೇಶಕ್ಕೆ ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ (ನೀಟ್) ಬಳಿಕ ಸೀಟು ಹಂಚಿಕೆ ಕೋರಿ ಸಲ್ಲಿಸುವ ನೋಂದಣಿಗೆ ಒಂದೇ ಅರ್ಜಿಯಲ್ಲಿ ಮಾಹಿತಿ ಸಲ್ಲಿಸಿದರೆ ಸಾಕು. ಇದರಿಂದ ವಿದ್ಯಾರ್ಥಿಗಳಿಗೂ ಅನುಕೂಲವಾಗುವ ಜತೆಗೆ ಒತ್ತಡ ಕಡಿಮೆಯಾಗಲಿದೆ. ಕೆಇಎ ಪ್ರತಿ ವಿದ್ಯಾರ್ಥಿಗೂ ವಿಶಿಷ್ಟ (ಯೂನಿಕ್) ಸಂಖ್ಯೆ ನೀಡಲಿದೆ. ಈ ಸಂಖ್ಯೆಯನ್ನು ಬಳಸಿ 5 ವರ್ಷ ವಿವಿಧ ಕೋರ್ಸ್​ಗಳಿಗೆ ಅರ್ಜಿ ಸಲ್ಲಿಸಬಹುದು. ಈ ವಿಧಾನದಿಂದ ವಿದ್ಯಾರ್ಥಿಗಳ ಸಾಮಾನ್ಯ ಮಾಹಿತಿಯನ್ನು ಅಂದರೆ ಅಭ್ಯರ್ಥಿಯ ಹೆಸರು, ತಂದೆ-ತಾಯಿ, ಎಸ್ಸೆಸ್ಸೆಲ್ಸಿ ವರೆಗಿನ ಶಾಲಾ ಶಿಕ್ಷಣದ ಪ್ರಾಥಮಿಕ ಮಾಹಿತಿಗಳು ಒಂದು ಬಾರಿ ದಾಖಲಾದ ಬಳಿಕ ಮತ್ತೊಮ್ಮೆ ದಾಖಲಿಸುವ ಅಗತ್ಯವಿಲ್ಲ. ಹೊಸದಾಗಿ ಯಾವ ಪರೀಕ್ಷೆಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿ ನೀಡಿದರೆ ಸಾಕು, ಅರ್ಜಿ ಸಲ್ಲಿಕೆ ಪೂರ್ಣವಾಗಲಿದೆ.

ತಿಂಗಳಾಂತ್ಯಕ್ಕೆ ಸಿಇಟಿ ನೋಂದಣಿ?: ಸಿಇಟಿ ನೋಂದಣಿಗೆ ಈ ಬಾರಿ ಹೆಚ್ಚಿನ ಸಮಯ ನೀಡಲು ಕೆಇಎ ನಿರ್ಧರಿಸಿದ್ದು, ಜನವರಿ ಅಂತ್ಯಕ್ಕೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಿಸುವ ಸಾಧ್ಯತೆಗಳಿವೆ. ಈ ಸಂಬಂಧ ಪ್ರಾಧಿಕಾರವು ಸಿದ್ಧತೆ ನಡೆಸಿದೆ. ಮಾ.9ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದ್ದು, ವಿದ್ಯಾರ್ಥಿಗಳು ಪರೀಕ್ಷೆ ಮನಸ್ಥಿತಿಗೆ ಹೋಗುವ ಮುನ್ನವೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ಕೆಇಎ ಮೂಲಗಳು ತಿಳಿಸಿವೆ.

ವಿದ್ಯಾರ್ಥಿಗಳ ಹಿತದೃಷ್ಟಿ ಯಿಂದ ಈ ಬಾರಿಯ ಅರ್ಜಿ ಸಲ್ಲಿಕೆಯಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗುತ್ತದೆ. ಅನಗತ್ಯ ಗೊಂದಲಗಳಿಗೆ ಕಡಿವಾಣ ಹಾಕುವ ಮೂಲಕ ವಿದ್ಯಾರ್ಥಿಸ್ನೇಹಿ ಪ್ರಕ್ರಿಯೆ ನಡೆಸಲಾಗುತ್ತದೆ. | ಎಸ್. ರಮ್ಯಾ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ
  • ಅರ್ಜಿ ಸಲ್ಲಿಕೆ ವೇಳೆಯೇ ದಾಖಲಾತಿ ಪರಿಶೀಲನೆ
  • ಜನವರಿ ಅಂತ್ಯಕ್ಕೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ
  • ನೀಟ್ ನೋಂದಣಿಗೂ ಇದೇ ಮಾಹಿತಿ ಪರಿಗಣನೆ

ಆನ್​ಲೈನ್ ಪರೀಕ್ಷೆ ನಡೆಸಲ್ಲ: ಕಳೆದ ಎರಡು ವರ್ಷ ಸಿಇಟಿ ಆನ್​ಲೈನ್ ಪರೀಕ್ಷೆ ನಡೆಸಬೇಕೋ ಬೇಡವೋ ಎಂಬ ಚರ್ಚೆಗಳು ನಡೆಯುತ್ತಿದ್ದವು. ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡಿರುವ ಕೆಇಎ, ಯಾವುದೇ ಕಾರಣಕ್ಕೂ ಆನ್​ಲೈನ್ ಪರೀಕ್ಷೆ ನಡೆಸದಿರಲು ನಿರ್ಧರಿಸಿದೆ. ಆನ್​ಲೈನ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ತಾಂತ್ರಿಕವಾಗಿ ಹಲವು ತಪು್ಪಗಳನ್ನು ಮಾಡುತ್ತಾರೆ. ಇದನ್ನು ಬಗೆಹರಿಸಲು ಕೆಇಎ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅದರ ಬದಲಾಗಿ ಭೌತಿಕವಾಗಿ ಪರೀಕ್ಷೆ ನಡೆಸುವುದರಿಂದ ವಿದ್ಯಾರ್ಥಿಗಳ ಒಎಂಆರ್ ಶೀಟ್​ನಲ್ಲಿಯೇ ಪರಿಹಾರ ಕಲ್ಪಿಸಬಹುದು ಎನ್ನುತ್ತಾರೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ. ವಿದ್ಯಾರ್ಥಿಗಳ ತಪ್ಪಿಗೆ ಪರೀಕ್ಷಾ ಪ್ರಾಧಿಕಾರವನ್ನು ಹೊಣೆಯಾಗಿಸಲಾಗುತ್ತದೆ. ವಿದ್ಯಾರ್ಥಿಗಳ ತಪು್ಪ ಎಂದರೆ ಯಾರೂ ಒಪ್ಪಿಕೊಳ್ಳುವುದಿಲ್ಲ. ಅಂತಿಮವಾಗಿ ಪ್ರಾಧಿಕಾರವೇ ಸಮಸ್ಯೆ ಎದುರಿಸಬೇಕಾಗುತ್ತದೆ. ಆದ್ದರಿಂದ ಭೌತಿಕವಾಗಿಯೇ ಪರೀಕ್ಷೆ ನಡೆಸುವುದರಿಂದ ಎಲ್ಲಿ ಸಮಸ್ಯೆಯಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಡುವುದು ಸುಲಭ ಎಂಬುದು ಮಂಡಳಿಯ ಸಮರ್ಥನೆ.