ನ್ಯೂಸ್

ಕುದುರೆ ವ್ಯಾಪಾರ ಭೀತಿ: ಗೆಲ್ಲುವ ಅಭ್ಯರ್ಥಿಗಳನ್ನು ಹೋಟೆಲ್​ಗೆ ಶಿಫ್ಟ್​ ಮಾಡಲು ಕಾಂಗ್ರೆಸ್​ ತಯಾರಿ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಮತಎಣಿಕೆಯಲ್ಲಿ ಕಾಂಗ್ರೆಸ್​ ಪಕ್ಷ ಮುನ್ನಡೆಯಲ್ಲಿ ಮ್ಯಾಜಿಕ್​ ನಂಬರ್​ ದಾಟಿದ ಕೂಡಲೇ ಕಾಂಗ್ರೆಸ್​ ಪಾಳಯದಲ್ಲಿ ಚಟುವಟಿಕೆ ಗರಿಗೆದರಿದ್ದು, ತಮ್ಮ ಅಭ್ಯರ್ಥಿಗಳನ್ನು ರೆಸಾರ್ಟ್​ಗೆ ಸ್ಥಳಾಂತರ ಮಾಡಲು ಸಿದ್ಧತೆ ಆರಂಭಿಸಿದ್ದಾರೆ.

ಕುದುರೆ ವ್ಯಾಪಾರದ ಭೀತಿಯಿಂದ ಗೆಲ್ಲುವ ಅಭ್ಯರ್ಥಿಗಳನ್ನು ಇಂದು ಸಂಜೆ ವೇಳೆ ಬೇರೆ ರಾಜ್ಯಗಳ ಹೋಟೆಲ್​ಗೆ ಸ್ಥಳಾಂತರ ಮಾಡಲು ಕಾಂಗ್ರೆಸ್​ ಮುಂದಾಗಿದೆ. ಗೆಲ್ಲುವ ಅಭ್ಯರ್ಥಿಗಳನ್ನು ಕರೆತರುವ ಜವಬ್ದಾರಿಯನ್ನು ಕೆಪಿಸಿಸಿ ಪದಾಧಿಕಾರಿಗಳಿಗೆ ನೀಡಲಾಗಿದೆ. ಇಂದು ಸಂಜೆಯೊಳಗೆ ಎಲ್ಲರನ್ನು ಕರೆತಂದು ರಾಜಸ್ಥಾನ, ಛತ್ತೀಸಗಢ, ತಮಿಳುನಾಡಿನ ಹೋಟೆಲ್​ಗಳಲ್ಲಿ ಇರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂಬ ಸುದ್ದಿ ಕಾಂಗ್ರೆಸ್​ ವಲಯದಿಂದ ಕೇಳಿಬಂದಿದೆ.

ಇಂದು ರಾತ್ರಿಯೇ ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಕೆ. ಜಾರ್ಜ್​ ಅವರಿಗೆ ಸೇರಿದ ಖಾಸಗಿ ಹೋಟೆಲ್​ನಲ್ಲಿ ಸಭೆ ನಡೆಯಲಿದ್ದು, ಮುಂದಿನ ಸಾಧಕ-ಬಾದಕಗಳನ್ನು ಚರ್ಚೆ ಮಾಡಲಿದ್ದಾರೆ.

ಚುನಾವಣಾ ಫಲಿತಾಂಶದ ಸದ್ಯದ ಟ್ರೆಂಡ್​ ಪ್ರಕಾರ ಕಾಂಗ್ರೆಸ್​ 114 ಸ್ಥಾನಗಳಲ್ಲಿ ಮುಂದಿದ್ದರೆ, ಬಿಜೆಪಿ 74 ಮತ್ತು ಜೆಡಿಎಸ್​ 31 ಹಾಗೂ ಇತರೆ 6 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಕರ್ನಾಟಕವು ಒಟ್ಟು 224 ವಿಧಾನಸಭಾ ಸ್ಥಾನಗಳನ್ನು ಹೊಂದಿದೆ. ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷಗಳಾದ ಕಾಂಗ್ರೆಸ್​ ಮತ್ತು ಜೆಡಿಎಸ್​ ನಡುವೆ ಪೈಪೋಟಿ ನಡೆದಿದೆ. ಯಾವುದೇ ಪಕ್ಷ ರಾಜ್ಯದಲ್ಲಿ ಅಧಿಕಾರ ರಚನೆ ಮಾಡಲು 113 ಸ್ಥಾನಗಳ ಸ್ಪಷ್ಟ ಬಹುಮತವನ್ನು ಪಡೆಯಬೇಕಿದೆ. ಒಂದು ವೇಳೆ ಯಾರಿಗೂ ಬಹುಮತ ಬರದಿದ್ದರೆ ಮತ್ತೆ ಅತಂತ್ರ ಸರ್ಕಾರ ರಚನೆಯಾಗಲಿದೆ.

2018ರ ಫಲಿತಾಂಶ ಏನಿತ್ತು?

2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಬಹುಮತ ದೊರೆಯಲಿಲ್ಲ. ಉಳಿದಂತೆ ಕಾಂಗ್ರೆಸ್​ 80 ಮತ್ತು ಜೆಡಿಎಸ್​ 37 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಬಳಿಕ ಕಾಂಗ್ರೆಸ್​ ಮತ್ತು ಜೆಡಿಎಸ್​ ಸೇರಿ ಮೈತ್ರಿ ಸರ್ಕಾರ ರಚನೆ ಮಾಡಿತ್ತು. ಈ ಸರ್ಕಾರ ಕೇವಲ ಒಂದು ವರ್ಷ ಮಾತ್ರ ಪೂರೈಸಿತು. ಬದಲಾದ ರಾಜಕೀಯ ಚಿತ್ರಣದಲ್ಲಿ ಮೈತ್ರಿ ಸರ್ಕಾರದ 17 ಶಾಸಕರು ಬಿಜೆಪಿ ಜತೆ ಕೈಜೋಡಿಸಿದ್ದರಿಂದ ಬಿಜೆಪಿ ಸರ್ಕಾರ ರಚನೆ ಮಾಡಿತು.