ರಾಷ್ಟ್ರೀಯ ಈಜಿನಲ್ಲಿ ರಾಜ್ಯಕ್ಕೆ ಮತ್ತೆ 5 ಚಿನ್ನ; ಶ್ರೀಹರಿಗೆ ಕಾಮನ್ವೆಲ್ತ್, ಏಷ್ಯಾಡ್ ಅರ್ಹತೆ
ಬೆಂಗಳೂರು: ಕರ್ನಾಟಕದ ಒಲಿಂಪಿಯನ್ ಈಜುಪಟು ಶ್ರೀಹರಿ ನಟರಾಜ್ (Srihari Nataraj) ಮುಂಬರುವ ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್ಸ್ಗೆ ಅರ್ಹತೆ ಸಂಪಾದಿಸಿದ್ದಾರೆ. ಅಹಮದಾಬಾದ್ನಲ್ಲಿ ನಡೆಯುತ್ತಿರುವ 79ನೇ ಸೀನಿಯರ್ ರಾಷ್ಟ್ರೀಯ ಈಜು ಚಾಂಪಿಯನ್ಷಿಪ್ನ (Senior National Aquatic Championships) 2ನೇ ದಿನ ಅವರು ಈ ಸಾಧನೆ ಮಾಡಿದ್ದಾರೆ. ಕರ್ನಾಟಕದ ಈಜುಪಟುಗಳು ಬುಧವಾರ ನಡೆದ ಸ್ಪರ್ಧೆಯಲ್ಲಿ ಒಟ್ಟು 5 ಚಿನ್ನ, 2 ಬೆಳ್ಳಿ ಮತ್ತು 1 ಕಂಚಿನ ಸಹಿತ ಒಟ್ಟು 8 ಪದಕ ಗೆದ್ದುಕೊಂಡು. ಇದರೊಂದಿಗೆ ಕರ್ನಾಟಕ ಕೂಟದ ಪದಕಪಟ್ಟಿಯಲ್ಲಿ ಒಟ್ಟು 14 ಪದಕಗಳೊಂದಿಗೆ (8 ಚಿನ್ನ, 3 ಬೆಳ್ಳಿ, 3 ಕಂಚು) ಅಗ್ರಸ್ಥಾನ ಕಾಯ್ದುಕೊಂಡಿದೆ.
ಶ್ರೀಹರಿ ಪುರುಷರ 50 ಮೀ. ಬ್ಯಾಕ್ಸ್ಟ್ರೊಕ್ನಲ್ಲಿ 25.32 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಇದಕ್ಕೆ ಮುನ್ನ ಹೀಟ್ಸ್ನಲ್ಲಿ 25.21 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿದಾಗ ಅವರಿಗೆ ಕಾಮನ್ವೆಲ್ತ್, ಏಷ್ಯಾಡ್ ಅರ್ಹತೆ ಒಲಿದಿತ್ತು. ಮಹಿಳೆಯರ 50 ಮೀ. ಬ್ಯಾಕ್ಸ್ಟ್ರೊಕ್ನಲ್ಲಿ ರಾಜ್ಯದ ಸುವಾನಾ ಸಿ ಭಾಸ್ಕರ್ (29.85 ಸೆ) ಬಂಗಾರ ಗೆದ್ದುಕೊಂಡರು. ಒಲಿಂಪಿಯನ್ ಧಿನಿಧಿ ದೇಸಿಂಘು (2ನಿ,3.7ಸೆ) ಮಹಿಳೆಯರ 200 ಮೀ. ಫ್ರೀಸ್ಟೈಲ್ನಲ್ಲಿ ಚಿನ್ನ ಜಯಿಸಿದರು. ಕರ್ನಾಟಕ ತಂಡ ಮಿಶ್ರ 4/100 ಮೀ. ಫ್ರೀಸ್ಟೈಲ್ನಲ್ಲಿ ದಾಖಲೆಯೊಂದಿಗೆ (3 ನಿ.37.68ಸೆ) ಮತ್ತು ಪುರುಷರ 4/200 ಮೀ. ಫ್ರೀಸ್ಟೈಲ್ ರಿಲೇಯಲ್ಲಿ ಚಿನ್ನ ಒಲಿಸಿಕೊಂಡಿತು.
ವಿದಿತ್ ಎಸ್. ಶಂಕರ್ (1ನಿ, 2.26ಸೆ) ಪುರುಷರ 100 ಮೀ. ಬ್ರೆಸ್ಟ್ಸ್ಟ್ರೊಕ್ನಲ್ಲಿ ಬೆಳ್ಳಿ ಜಯಿಸಿದರು. ಮಹಿಳೆಯರ 200 ಮೀ. ಮೆಡ್ಲೆಯಲ್ಲಿ ರಾಜ್ಯದ ತನಿಷಿ ಗುಪ್ತಾ (2ನಿ, 20.61ಸೆ) ಬೆಳ್ಳಿ ಮತ್ತು ತಾನ್ಯಾ ಷಡಾಕ್ಷರಿ (2ನಿ, 20.61ಸೆ) ಕಂಚಿನ ಪದಕ ಗೆದ್ದರು.