ನ್ಯೂಸ್

ಲಂಡನ್ ಶೃಂಗಸಭೆಯಲ್ಲಿ ಎಐ ಕುರಿತು ಕರ್ನಾಟಕ ನಿಯೋಗದ ಸಂವಾದ

ಲಂಡನ್: ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಆಡಳಿತದ ವಿವಿಧ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು (ಎ.ಐ) ಪರಿಣಾಮಕಾರಿಯಾಗಿ ಬಳಸುವ ಕುರಿತು ಕುರಿತು ಯುಕೆ ಮೈಕ್ರೋಸಾಫ್ಟ್ ಕಂಪನಿ ಜತೆ ರಾಜ್ಯದ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದ ತಂಡ ಲಂಡನ್ ಟೆಕ್ ವೀಕ್ ಶೃಂಗಸಭೆಯಲ್ಲಿ ಚರ್ಚಿಸಿತು.

ಮೈಕ್ರೋಸ್‌ಟಾ ಯುಕೆ ಸಂಸ್ಥೆಯ ಗ್ಲೆನ್ ರಾಬಿನ್ಸನ್ ಹಾಗೂ ಅಧಿಕಾರಿಗಳು ಚರ್ಚೆಯಲ್ಲಿ ಪಾಲ್ಗೊಂಡರು. ಯುಕೆ ಮತ್ತು ಜಾಗತಿಕ ಮಟ್ಟದಲ್ಲಿ ಜಗತ್ತಿನ ವಿವಿಧ ಕೇಂದ್ರಗಳಲ್ಲಿ ಕ್ವಾಂಟಮ್ ಟೆಕ್ ಮತ್ತು ಡಿಜಿಟಲ್ ರೂಪಾಂತರಗಳಲ್ಲಿ ಆಗುತ್ತಿರುವ ಕುತೂಹಲಕಾರಿ ಬದಲಾವಣೆಗಳನ್ನು ಕುರಿತೂ ಸಭೆಯಲ್ಲಿ ಎರಡೂ ರಾಷ್ಟ್ರಗಳ ಮುಖಂಡರು ಬೆಳಕು ಚೆಲ್ಲಿದರು.

ಸಚಿವ ಪ್ರಿಯಾಂಕ್ ಖರ್ಗೆ, ಕಿಯೋನಿಕ್ಸ್ ಸಂಸ್ಥೆಯ ಅಧ್ಯಕ್ಷ ಶರತ್ ಬಚ್ಚೇಗೌಡ, ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಏಕ್‌ರೂಪ್ ಕೌರ್ ಅವರನ್ನು ಒಳಗೊಂಡ ಕರ್ನಾಟಕದ ನಿಯೋಗ ಮೈಕ್ರೋಸ್‌ಟಾ ಯುಕೆ, ಸ್ಟಾರ್ಟ್‌ಅಪ್ ಜಿನೋಮ್, ಅಟ್ಕಿನ್ಸ್ ರಿಯಾಲಿಸ್, ಹ್ಯಾಮರ್ಸ್ಮಿತ್, ಫಲ್ಹಾಮ್ ಮುಂತಾದ ಐಟಿ ಕಂಪನಿಗಳೊಂದಿಗೆ ಸಂವಾದ ನಡೆಸಿದರು.

ಆರೋಗ್ಯ ಮತ್ತು ಆಡಳಿತ ಕ್ಷೇತ್ರದಲ್ಲಿ ಅಐ ಚೌಕಟ್ಟುಗಳು, ಕ್ವಾಂಟಮ್ ಟೆಕ್, ಜಾಗತಿಕ ಆರಂಭಿಕ ಪರಿಸರ ವ್ಯವಸ್ಥೆ ಸೇರಿದಂತೆ ಬದಲಾಗುತ್ತಿರುವ ಜಾಗತಿಕ ಸನ್ನಿವೇಶಗಳನ್ನು ಕುರಿತು ಚರ್ಚಿಸಿದರು.

ಕರ್ನಾಟಕ ನಿಯೋಗವು ಸ್ಟಾರ್ಟಪ್ ಜಿನೋಮ್‌ನ ಸಂಸ್ಥಾಪಕ ಮತ್ತು ಸಿಇಒ ಜೆ.ಎ್.ಗೌಥಿಯರ್ ಅವರನ್ನು ಭೇಟಿ ಮಾಡಿತು. ಅಟ್ಕಿನ್ಸ್‌ರಿಯಾಲಿಸ್‌ನ ಮುಖ್ಯ ಡಿಜಿಟಲ್ ಅಧಿಕಾರಿ ಡ್ಯಾರೆನ್ ಮಾರ್ಟಿನ್, ಬಸೀಲ್ ಪಾರ್ಟ್‌ನರ್ಸ್ ಎಲ್‌ಎಲ್‌ಪಿಯ ಸಂಸ್ಥಾಪಕ ಮತ್ತು ಗ್ರೂಪ್ ಸಿಇಒ ಪೂರ್ವಾ ದೇಶ್‌ಮುಖ್, ಹ್ಯಾಮರ್‌ಸ್ಮಿತ್ ಮತ್ತು ಫುಲ್‌ಹಾಮ್‌ನ ನಾಯಕ ಸ್ಟೀಫನ್ ಕೋವನ್ ಮತ್ತು ಮಾರ್ಕ್‌ನೆಸ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು.