ಶಿವಮೊಗ್ಗ: ಕನ್ನಡವಲ್ಲದೆ ಅನ್ಯ ಭಾಷೆಗಳಲ್ಲಿರುವ ನಾಮಫಲಕಗಳನ್ನು ಕೂಡಲೇ ತೆರವುಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಜ.5ರೊಳಗೆ ಎಲ್ಲ ಅಂಗಡಿ ಮುಂಗಟ್ಟುಗಳ ಮುಂಭಾಗ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನ್ಯ ಭಾಷೆಗಳಲ್ಲಿ ಇರುವ ನಾಮಫಲಕಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಉಗ್ರಹೋರಾಟ ಮಾಡುವುದಾಗಿ ಪ್ರತಿಭಟನಾನಿರತರು ಎಚ್ಚರಿಸಿದರು.
ನಾಮಫಲಕಗಳು ಶೇ.60 ಕನ್ನಡ ಭಾಷೆಯಲ್ಲಿಯೇ ಇರಬೇಕು. ಒಂದು ಪಕ್ಷ ಜಿಲ್ಲಾಡಳಿತ ಅಥವಾ ಪಾಲಿಕೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಅಂತಹ ನಾಮಫಲಕಗಳನ್ನು ತೆರವುಗೊಳಿಸಲಾಗುವುದು. ಈ ನೆಲದಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನ ಇದೆ. ನಾಮಫಲಕಲ್ಲಿ ಶೇ.60 ಕನ್ನಡ ಭಾಷೆ ಬಳಸಬೇಕು ಎಂಬ ಕಾಯಿದೆ ಇದ್ದರೂ ಅದನ್ನು ಗಾಳಿಗೆ ತೂರಿ ಇಂಗ್ಲಿಷ್ ಮತ್ತು ಇತರೆ ಭಾಷೆಗಳಲ್ಲಿ ಬಹಿರಂಗವಾಗಿ ನಾಮಫಲಕಗಳನ್ನು ಹಾಕಿದ್ದಾರೆ. ಇದನ್ನು ನೋಡಿದ್ದರು ಕೂಡ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿ ಬದುಕುತ್ತಿರುವವರು, ವ್ಯಾಪಾರ ಮಾಡುತ್ತಿರುವವರು ಕನ್ನಡ ಭಾಷೆಯಲ್ಲಿಯೇ ವ್ಯವಹರಿಸಬೇಕು. ಕನ್ನಡ ಕಡ್ಡಾಯವಾಗಿ ಕಲಿಯಬೇಕು. ಅವರವರ ಮನೆಯಲ್ಲಿ ಬೇಕಾದ ಭಾಷೆ ಮಾತನಾಡಲಿ, ಆದರೆ ವ್ಯವಹಾರಿಕವಾಗಿ ಕನ್ನಡ ಮಾತನಾಡುವುದು ಕಡ್ಡಾಯವಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಮತ್ತು ಮಹಾನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ ಅವರಿಗೆ ಮನವಿ ಸಲ್ಲಿಸಿದರು. ಕರವೇ ಜಿಲ್ಲಾಧ್ಯಕ್ಷ ಎಚ್.ಎಸ್.ಕಿರಣ್‌ಕುಮಾರ್, ನಗರಾಧ್ಯಕ್ಷ ಎಚ್.ಪ್ರಫುಲ್ಲಾಚಂದ್ರ, ವಿಜಯ್, ರಾಮು, ಸತೀಶ್, ಸಂತೋಷ್, ಕೇಶವ, ಪರಮೇಶ್, ಮೊಹಮ್ಮದ್ ಷಫಿ ಇತರರಿದ್ದರು.