ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಆ್ಯಂಡಿ ಎಂಬ ಯುವಕನನ್ನು ಯುವತಿಯೋರ್ವಳು ಪ್ರೀತಿ ಮಾಡಿದ್ದಾಳೆ. ಆದರೆ ಆತ ಮಾತ್ರ ಆಕೆಯೊಂದಿಗೆ ಪ್ರೀತಿ ಹೆಸರಲ್ಲಿ ಸುತ್ತಾಡಿ, ಆ ನಂತರ ಕೆಲ ಖಾಸಗಿ ಫೋಟೊಗಳನ್ನು ಸೆರೆಹಿಡಿದಿದ್ದಾನೆ.
ಬಳಿಕ ಅದೇ ಫೋಟೋ ಬಳಸಿಕೊಂಡು ಆಕೆಗೆ ಬೆದರಿಕೆ ಹಾಕಿದ್ದಾನೆ. ಇದರಿಂದ ಆತಂಕಗೊಂಡ ಯುವತಿ ಆತನಿಂದ ದೂರವಾಗಿದ್ದಾಳೆ. ಆದರೆ ಅಷ್ಟಕ್ಕೆ ಸುಮ್ಮನಾಗದೆ ಆ್ಯಂಡಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವುದಾಗಿ ಬೆದರಿಸಿ ಅತ್ಯಾಚಾರವೆಸಗಿದ್ದಾನೆ.
ಈ ವೇಳೆ ಆರೋಪಿ ಮೊಬೈಲ್ನಲ್ಲಿ ವಿಡಿಯೋಗಳನ್ನು ಸಹ ಮಾಡಿಕೊಂಡಿದ್ದಾನೆ. ಇದೇ ರೀತಿ ಹಲವು ಬಾರಿ ಬೆದರಿಸಿ ಯುವತಿ ಮೇಲೆ ಅತ್ಯಾಚಾರ ಮಾಡಿರುವ ಬಗ್ಗೆ ಆರೋಪ ಮಾಡಲಾಗಿದೆ. ಬಳಿಕ ಆತನ ಗೆಳೆಯರು ಸಹ ಅತ್ಯಾಚಾರವೆಸಗಿದ್ದಾರೆ. ಆ್ಯಂಡಿ ಗೆಳೆಯರೂ ಬೆದರಿಸಿ ಕರೆಸಿಕೊಂಡು ಅತ್ಯಾಚಾರ ಮಾಡಿದ್ದಾರೆ.
ಬಳಿಕ ಆ್ಯಂಡಿ ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. ಇದಾದ ಬಳಿಕ ನೊಂದ ಯುವತಿಯಿಂದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ದೂರು ಹಿನ್ನಲೆ ಮೂವರನ್ನು ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಬಳಿ ಇದ್ದ ಮೊಬೈಲ್, ಪೆನ್ ಡ್ರೈವ್ ಸೇರಿದಂತೆ ಟೆಕ್ನಿಕಲ್ ಸಾಕ್ಷಿಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿ ಆ್ಯಂಡಿ ಖಾಸಗಿ ಶಾಲೆಯ ಡ್ಯಾನ್ಸಿಂಗ್ ಟೀಚರ್ ಆಗಿದ್ದು, ಇದೇ ಮಾದರಿ ಕೃತ್ಯಗಳನ್ನು ಬೇರೆಡೆ ನಡೆಸಿದ್ದಾನೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ ಮೇಲ್ನೋಟಕ್ಕೆ ಮಾತ್ರ ಇದೊಂದೇ ಪ್ರಕರಣದಲ್ಲಿ ಭಾಗಿಯಾಗಿರೋದು ಪತ್ತೆಯಾಗಿದೆ. ಸದ್ಯ ಕೊಡಿಗೆಹಳ್ಳಿ ಪೊಲೀಸರಿಂದ ತನಿಖೆ ಮುಂದುವರೆದಿದೆ. ಯುವತಿಯಿಂದ ಮೂವರ ಮೇಲೆ ಪ್ರತ್ಯೇಕವಾಗಿ ಅತ್ಯಾಚಾರ ಪ್ರಕರಣ ದಾಖಲು ಮಾಡಲಾಗಿದೆ.
ಪ್ರೀತಿ ಹೆಸರಲ್ಲಿ ವಿಕೃತ ಕಾಮ ಕೃತ್ಯವೆಸಗಿದ ಯುವಕನ ಮೇಲೆ ಯುವತಿ ನೀಡಿದ ದೂರು ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಆ್ಯಂಡಿ ಜಾರ್ಜ್, ಸಂತೋಷ್, ಶಶಿ ಬಂಧಿತ ಆರೋಪಿಗಳು.