ನ್ಯೂಸ್

ರಾಜ್ಯದಲ್ಲಿ ಮಕ್ಕಳು, ಯುವಕರ ಮೇಲೆ ಕರೊನಾ ಮುನಿಸು! 11 ಹೊಸ ಪ್ರಕರಣ: ಯಾವ ಜಿಲ್ಲೆಯಲ್ಲಿ ಅಧಿಕ?

suchetana

ಬೆಂಗಳೂರು: ನಿನ್ನೆ ಸಂಜೆ 5 ಗಂಟೆಯಿಂದ ಇಲ್ಲಿಯವರೆಗೆ ರಾಜ್ಯದಲ್ಲಿ 11 ಹೊಸ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 9 ಮಂದಿ 30 ವರ್ಷ ಒಳಗಿನವೇ ಆಗಿದ್ದಾರೆ. ಈ ಮೂಲಕ, ಕೆಲ ದಿನಗಳಿಂದ ಕರ್ನಾಟಕದಲ್ಲಿ ಪತ್ತೆಯಾಗುತ್ತಿರುವ ಹೊಸ ಸೋಂಕಿತರ ಪೈಕಿ ಮಕ್ಕಳು ಮತ್ತು ಯುವಕರೇ ಹೆಚ್ಚುತ್ತಿರುವುದು ಆತಂಕ ಸೃಷ್ಟಿಸಿದೆ.

ಮುಂಬೈನಿಂದ ಮಂಡ್ಯಕ್ಕೆ ಬಂದಿದ್ದ ಮೂವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇವರಲ್ಲಿ 25 ಮತ್ತು 27 ವರ್ಷದ ಯುವಕರು ಹಾಗೂ 24 ವರ್ಷದ ಯುವತಿ ಸೇರಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿಯ 12, 13 ವರ್ಷದ ಮಕ್ಕಳು ಮತ್ತು 19 ಹಾಗೂ 32 ವರ್ಷದ ಯುವಕರಲ್ಲಿ ಸೋಂಕು ಪತ್ತೆಯಾಗಿದೆ. ಬೆಳಗಾವಿ ಜಿಲ್ಲೆಯ ರಾಯಬಾಗದ 30 ವರ್ಷದ ಮಹಿಳೆ, 50 ಮತ್ತು 55 ವರ್ಷದ ಪುರುಷರು ಸೋಂಕಿಗೆ ಒಳಗಾಗಿದ್ದಾರೆ.

ಈ ಮೂಲಕ ರಾಜ್ಯದಲ್ಲಿ ಇಲ್ಲಿಯವರೆಗೆ ಕರೊನಾ ಸೋಂಕಿತರ ಸಂಖ್ಯೆ 576ಕ್ಕೆ ಏರಿದೆ. 22 ಮಂದಿ ಮೃತಪಟ್ಟಿದ್ದು, 235 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುತ್ತಾರೆ.

ನಿಜಾಮುದ್ದೀನ್‌ ಮರ್ಕಜ್‌ ಮಸೀದಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿರುವ ಪ್ರತಿಯೊಬ್ಬರೂ ಉಚಿತ ಆರೋಗ್ಯ ಸಹಾಯವಾಣಿ 080-29711171 ಸಂಪರ್ಕಿಸುವಂತೆ ಸರ್ಕಾರ ಸೂಚಿಸಿದೆ.

ಸೋಂಕಿತರ ಪ್ರಯಾಣದ ಮಾಹಿತಿ ಬೇಕಿದ್ದರೆ www.karnataka.gov.in. ಮೊಬೈಲ್‌ ಅಪ್ಲಿಕೇಷ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸರ್ಕಾರದ ಪ್ರಕಟಣೆ ತಿಳಿಸಿದೆ. ಕರೊನಾ ವೈರಸ್‌ ಉಚಿತ ಆರೋಗ್ಯ ಸಹಾಯವಾಣಿ ಸಂಖ್ಯೆ: 104/ 9745697456.