ಬೆಂಗಳೂರು: ಬಜೆಟ್ ಭಾಷಣದ ಆರಂಭದಿಂದ ಕೊನೆಯವರೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಡಿನ ನಾನಾ ಕವಿಗಳು, ಸಾಹಿತಿಗಳು ಮತ್ತು ಇತರ ಪ್ರಸಿದ್ಧ ವ್ಯಕ್ತಿಗಳ ಮಾರ್ಮಿಕ ಬರಹ-ಮಾತುಗಳ ಸಾಲುಗಳನ್ನು ಉದ್ಧರಿಸುವ ಮೂಲಕ ಗಮನ ಸೆಳೆದರು. ಆಯಾ ಇಲಾಖೆಗೆ ಸಂಬಂಧಿಸಿದಂತೆ ಈ ಸಾಲುಗಳನ್ನು ಆಯ್ಕೆ ಮಾಡಿ, ಸಾಂದರ್ಭಿಕವಾಗಿ ಪ್ರಸ್ತಾಪಿಸಿದ್ದು ಗಮನಾರ್ಹವಾಗಿತ್ತು. ಯಾವ್ಯಾವ ಸಾಲುಗಳನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿದರು ಎಂಬುದರ ವಿವರ ಇಲ್ಲಿದೆ.
ಯಾವ ಕಾಲದ ಶಾಸ್ತ್ರವೇನು ಹೇಳಿದರೇನು,
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?
- ರಾಷ್ಟ್ರಕವಿ ಕುವೆಂಪು
ನಡೆಯದ ಹಾದಿಯಲ್ಲಿ ಎಡವಿದೆನೆಂದರೆ ಒಪ್ಪುವುದೆ ಅಯ್ಯಾ?
ಕಾಣದ ಮುಖದ ಕುಂದನೆಣಿಸಿದರೆ ಒಪ್ಪುವುದೆ ಅಯ್ಯಾ?
ಉಣ್ಣದ ಅಡಿಗೆಯ ರುಚಿಯ ಟೀಕಿಸಿದರೆ ಒಪ್ಪುವುದೆ ಅಯ್ಯಾ?
ನೋಡದುದನ್ನು ನೋಡಿದಂತೆ ವರ್ಣಿಸಿದರೆ ಒಪ್ಪುವುದೆ ಅಯ್ಯಾ?ʼ
- ಸಿದ್ದಯ್ಯ ಪುರಾಣಿಕ
ಭದ್ರತೆಯ ಖಾತರಿ ಕೊಡದ ಆರ್ಥಿಕ ಯೋಜನೆಯಿಂದ ಯಾವ ಉಪಯೋಗವೂ ಇಲ್ಲ. ಯೋಜನೆ ಒಪ್ಪಿತವಾಗಬೇಕಾದರೆ, ಅದು ಮಿತವ್ಯಯದ್ದು ಮತ್ತು ಸುಭದ್ರವು ಆಗಿರಬೇಕು. ಅದು ಮಿತವ್ಯಯದ್ದು ಆಗಿರದಿದ್ದರೆ, ಬಹುಶ: ನಡೆದೀತು. ಆದರೆ, ಸುಭದ್ರವಾಗಿಲ್ಲದಿದ್ದರೆ, ಖಂಡಿತ ನಡೆಯುವುದಿಲ್ಲ.
- ಡಾ. ಬಿ.ಆರ್. ಅಂಬೇಡ್ಕರ್
ನಡೆಯ ಚೆನ್ನ ನುಡಿದು ತೋರಿ, ನುಡಿಯ ಚೆನ್ನ ನಡೆದು ತೋರಿʼ
-ಬಸವಣ್ಣ
ಭೇದ ಭಾವ ನೀಗಬೇಕು, ದುಡಿದು ಹಿರಿಮೆ ಗಳಿಸಬೇಕು
ಭಾರತೀಯರೆನಿಸುವೆಲ್ಲ ಜಾತಿ ಮತದ ಮಕ್ಕಳು
- ಕೆ.ಎಸ್. ನಿಸಾರ್ ಅಹ್ಮದ್
ಯಾವ ಕಾಲಕೂ ಯಾವ ದೇಶಕೂ
ಯುವಕ ಶಕ್ತಿ ಚಿಲುಮೆ
- ಚನ್ನವೀರ ಕಣವಿ
ಬಡಗಿ ಬೇಸಾಯಿ ಕರ್ಮಿಗರೇನು ಯೋಗಿಗಳೊ,
ಮುಡುಪವರ ಮನಸೆಲ್ಲ ಕೈಯ ದುಡಿತಕ್ಕೆ
ಬಿಡುವಿರದು ಬಣಗು ಚಿಂತೆಗೆ, ಬುತ್ತಿ ಹಂಗಿರದು
ಕಡಿದಲ್ಲವರ್ಗೆ ಬಾಳ್ – ಮಂಕುತಿಮ್ಮ
- ಡಿ.ವಿ.ಜಿ.
ವಿದ್ಯೆಯಿಂದ ಸ್ವತಂತ್ರರಾಗಿರಿ
ಸಂಘಟನೆಯಿಂದ ಬಲಯುತರಾಗಿರಿ
- ಶ್ರೀ ನಾರಾಯಣ ಗುರು
ಭೇದ ಭಾವ ನೀಗಬೇಕು, ದುಡಿದು ಹಿರಿಮೆ ಗಳಿಸಬೇಕು
ಭಾರತೀಯರೆನಿಸುವೆಲ್ಲ ಜಾತಿ ಮತದ ಮಕ್ಕಳು
- ಕೆ.ಎಸ್. ನಿಸಾರ್ ಅಹ್ಮದ್
ಎತ್ತೆಮ್ಮೆ ಹೂಡುವುದು| ಉತ್ತೊಮ್ಮೆ ಹರಗುವುದು,
ಬಿತ್ತೊಮ್ಮೆ ಹರಗಿ, ಕಳೆತೆಗೆದರಾ ಬೆಳೆಯು
ಎತ್ತುಗೈಯುದ್ದ ಸರ್ವಜ್ಞ
- ಸರ್ವಜ್ಞ