ನ್ಯೂಸ್

ಸಾಮಾಜಿಕ ನ್ಯಾಯ ಅಭಿವೃದ್ಧಿ ಧ್ಯೇಯ: ಜನಪ್ರಿಯತೆಗಲ್ಲ ಜನಪರತೆಗೆ ಬಿಎಸ್​ವೈ ಬಜೆಟ್ ಆದ್ಯತೆ

ಸೀಮಿತ ಸಂಪನ್ಮೂಲದಲ್ಲೇ ಸಾಧನೆಗೆ ಸಿದ್ಧತೆ | ಆರೋಗ್ಯ ಭಾಗ್ಯ, ಕೃಷಿಗೆ ಬಂಪರ್  ಹೊರೆಯಾಗದ ತೆರಿಗೆ | ಸ್ತ್ರೀಶಕ್ತಿಗೆ ಮಹಿಳಾ ದಿನದ ಉಡುಗೊರೆ

ಬೆಂಗಳೂರು: ವಿತ್ತೀಯ ಕೊರತೆ, ಆರ್ಥಿಕ ಹಿಂಜರಿತದ ಸವಾಲುಗಳ ಮುಳ್ಳಿನ ಬೇಲಿಯ ಮೇಲೆ ನಿಂತು ಆರ್ಥಿಕ ಶಿಸ್ತು ಕಾಪಾಡಿಕೊಳ್ಳಲು ಸರ್ಕಸ್ ಮಾಡಬೇಕಾದ ಸಂಕಷ್ಟದ ನಡುವೆಯೇ ಸಿಎಂ ಬಿ.ಎಸ್.ಯಡಿಯೂರಪ್ಪ ‘ಸಾಮಾಜಿಕ ನ್ಯಾಯ, ಅಭಿವೃದ್ಧಿ ಧ್ಯೇಯ’ ಘೋಷವಾಕ್ಯದಡಿ ಸೋಮವಾರ ತಮ್ಮ 8ನೇ ಬಜೆಟ್ ಮಂಡಿಸಿದ್ದಾರೆ.

ಇರುವ ಸೀಮಿತ ಸಂಪನ್ಮೂಲವನ್ನು ಕೇವಲ ಭರವಸೆಯ ಸೌಧ ಕಟ್ಟಲು ಬಳಸದೆ ಎಲ್ಲ ಕ್ಷೇತ್ರಕ್ಕೂ ಸೀಮಿತವಾಗಿ ಹಂಚುವ ಬದ್ಧತೆ ಅವರ ಘೋಷಣೆಗಳಲ್ಲಿವೆ. ಯಾರಿಗೂ ಒಂದು ರೂಪಾಯಿ ತೆರಿಗೆ ಹಾಕದ ಈ ಬಜೆಟ್ ಯಡಿಯೂರಪ್ಪ ಅವರೇ ಹೇಳುವಂತೆ ಇತಿಹಾಸದಲ್ಲೇ ಮೊದಲು. ಆದರೆ 2.43 ಲಕ್ಷ ಕೋಟಿ ರೂ.ಗಾತ್ರದ ಈ ಬಜೆಟ್​ನ ಸಾಲದ ಮೊತ್ತವೇ ಬರೋಬ್ಬರಿ 71 ಸಾವಿರ ಕೋಟಿ ರೂ. ಹೀಗಾಗಿ ಸಂಪನ್ಮೂಲದ ದಾರಿ ಯಾವುದೆಂಬುದೇ ಎಲ್ಲರ ಕುತೂಹಲ. ಬಂಪರ್ ಅಲ್ಲದಿದ್ದರೂ ತಮಗಿರುವ ಸೀಮಿತ ಶಕ್ತಿ, ಸಾಮರ್ಥ್ಯ ಬಳಸಿಕೊಂಡು ಕೆಲವೇ ಕ್ಷೇತ್ರಗಳಿಗೆ ಸೀಮಿತವಾಗಿ ಹೊಸ ಯೋಜನೆ ಹಾಗೂ ಹಳೇ ಯೋಜನೆಗಳಿಗೇ ಅನುದಾನದ ಬೆಣ್ಣೆ ಸವರಿದ್ದಾರೆ. ಶಿವಮೊಗ್ಗ, ಮೈಸೂರಿನಲ್ಲಿ ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಅಭಿವೃದ್ಧಿ, ಬೆಂಗಳೂರಿನ ನಿಮ್ಹಾನ್ಸ್​ಗೆ ಪರ್ಯಾಯವಾಗಿ ಧಾರವಾಡದ ಡಿಮ್ಹಾನ್ಸ್ ಸಂಸ್ಥೆ ಮೇಲ್ದರ್ಜೆಗೇರಿಸುವುದೂ ಸೇರಿ ಆರೋಗ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳ ಅನುಷ್ಠಾನ, ಸಾವಯವ ಕೃಷಿ ಉತ್ತೇಜನಕ್ಕೆ 500 ಕೋಟಿ ರೂ. ಮೊತ್ತದ ಯೋಜನೆಗಳು ಕೃಷಿ ಕ್ಷೇತ್ರಕ್ಕೆ ದಕ್ಕಿದೆ. ಮೀಸಲು ಹೋರಾಟದ ಸಂಕಷ್ಟದ ನಡುವೆಯೇ ಒಕ್ಕಲಿಗ ಅಭಿವೃದ್ಧಿ ಪ್ರಾಧಿಕಾರ ರಚನೆ, ಜಾತಿ, ಧರ್ವಧಾರಿತ ಅನುದಾನದ ಘೋಷಣೆಗಳು ಹೊರಬಿದ್ದಿವೆ. ಅಶಕ್ತರಿಗೆ ಮನೆ ಬಾಗಿಲಿಗೇ ಮಾಸಾಶನ, ಮಹಿಳಾ ದಿನಾಚರಣೆಗೆ ಯೋಜನೆಗಳ ಗಿಫ್ಟ್ ಕೂಡ ನೀಡಿದ್ದಾರೆ. ಬಂಪರ್ ಎನ್ನಲಾಗದ, ಕಳಪೆ ಎಂದು ಜರಿಯಲಾಗದ ಈ ಬಜೆಟ್ ಸಮತೋಲಿತ, ಸಂದರ್ಭ ಆಧಾರಿತ ಮುಂಗಡಪತ್ರ ಎನ್ನಬಹುದೆಂಬುದು ತಜ್ಞರ ಅಭಿಪ್ರಾಯ.

ಬೆಂಗಳೂರಿಗೆ 7795 ಕೋಟಿ ರೂ. ಎಲೆಕ್ಷನ್ ಗಿಫ್ಟ್: ಶಾಲೆ ಅಭಿವೃದ್ಧಿ, ಮಹಿಳೆಯರಿಗೆ ರಿಯಾಯಿತಿ ಬಸ್ ಪಾಸ್, ಬಸ್​ಗಳಲ್ಲಿ ಸಿ.ಸಿ. ಟಿವಿ ಅಳವಡಿಕೆಯಂತಹ ದೆಹಲಿ ಮಾದರಿಯ ಘೋಷಣೆ ಹೊರಬಿದ್ದಿವೆ. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಇದೇ ಮಾದರಿ ಘೋಷಣೆ ಮೂಲಕ ಗಮನ ಸೆಳೆದಿದ್ದರು. ಬಿಬಿಎಂಪಿ ಎಲೆಕ್ಷನ್ ಗಮನದಲ್ಲಿಟ್ಟುಕೊಂಡು ಸಿಎಂ ರಾಜಧಾನಿಗೆ 7795 ಕೋಟಿ ರೂ. ಅನುದಾನ ನೀಡಿದ್ದಾರೆ.

ಬದಲಾಗದ ತೆರಿಗೆ, ಕೊಂಚ ನಿರಾಳ: ಕರೊನಾ ಸಂಕಷ್ಟದ ಪರಿಣಾಮ ಬಿಎಸ್​ವೈ ತೆರಿಗೆದಾರರಿಗೆ ಕೊಂಚ ನಿರಾಳ ಒದಗಿಸಿದ್ದಾರೆ. ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಏರಿಕೆ ಆಗಿಲ್ಲ. ಹಾಗೆಯೇ ತೆರಿಗೆ ಇಳಿಕೆ ನಿರೀಕ್ಷೆಯೂ ಹುಸಿಯಾಗಿದೆ. ಮೊದಲ ಬಾರಿ ಫ್ಲ್ಯಾಟ್ ಖರೀದಿಸುವವರಿಗೆ ಕೊಂಚ ತೆರಿಗೆ ರಿಲೀಫ್ ನೀಡಲಾಗಿದೆ. ಅಬಕಾರಿ ಸುಂಕ ಕೂಡ ಏರಿಕೆ ಆಗಿಲ್ಲ.

ಜಾತಿ-ಧರ್ಮಕ್ಕೆ ಆದ್ಯತೆ: ಒಕ್ಕಲಿಗ ಸಮುದಾಯದ ಬೇಡಿಕೆಯಂತೆ ಒಕ್ಕಲಿಗ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ, ಇದಕ್ಕಾಗಿ 500 ಕೋಟಿ ರೂ. ಅನುದಾನ ನೀಡುವ ಪ್ರಮುಖ ಘೋಷಣೆ ಹೊರಬಿದ್ದಿದೆ. ಇದರ ಜತೆಯಲ್ಲೇ ವೀರಶೈವ ಲಿಂಗಾಯತ ಸಮುದಾಯದ ಅಭಿವೃದ್ಧಿಗೆ 500 ಕೋಟಿ ರೂ., ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಕಲ್ಯಾಣಕ್ಕೆ 50 ಕೋಟಿ ರೂ. ನೀಡಲಾಗಿದೆ. ಅಲ್ಪಸಂಖ್ಯಾತ ಸಮುದಾಯದ ಸಮಗ್ರ ಅಭಿವೃದ್ಧಿಗೆ 1500 ಕೋಟಿ ರೂ. , ಕ್ರೖೆಸ್ತ ಸಮುದಾಯಕ್ಕೆ 200 ಕೋಟಿ ರೂ. ಸಿಕ್ಕಿದೆ. ಆದಿಚುಂಚನಗಿರಿನಾಥ ಪಾರಂಪರಿಕ ಕೇಂದ್ರಕ್ಕೆ 10 ಕೋಟಿ ರೂ. ,ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ರೂ., ಬಸವನ ಬಾಗೇವಾಡಿಯಲ್ಲಿ ಜಗಜ್ಯೋತಿ ಬಸವಣ್ಣ ಜನ್ಮಸ್ಥಳ ಅಭಿವೃದ್ಧಿಗೆ 5 ಕೋಟಿ ರೂ., ಲಿಂಗೈಕ್ಯ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಹಾಗೂ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಗಳ ಸ್ಮೃತಿವನಕ್ಕಾಗಿ 2 ಕೋಟಿ ರೂ. ಕೊಡಲಾಗಿದೆ.

ಕೃಷಿಗೆ ಭರ್ಜರಿ ಬೆಳೆ: ಕೃಷಿ, ತೋಟಗಾರಿಕೆ ವಲಯಕ್ಕೆ ಬಂಪರ್ ಅನುದಾನ ಸಿಕ್ಕಿದೆ. 7297 ಕೋಟಿ ರೂ. ಅನುದಾನ ಮೀಸಲಾಗಿದೆ. ನೀರಾವರಿ,ಮಾರುಕಟ್ಟೆ ವ್ಯವಸ್ಥೆ ಒದಗಿಸುವುದಕ್ಕೆ ಸರ್ಕಾರ ಹೆಚ್ಚು ಆದ್ಯತೆ ನೀಡಿದೆ.

  • ರಾಜ್ಯದ ಹಲವೆಡೆ ಕೃಷಿ ಉತ್ಪನ್ನ ಆಧಾರಿತ ಮಾರುಕಟ್ಟೆ ನಿರ್ವಣಕ್ಕೆ ಯೋಜನೆ
  • ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ
  • ಸಾವಯವ ಕೃಷಿ ಉತ್ತೇಜನಕ್ಕೆ 500 ಕೋಟಿ ರೂ. ವೆಚ್ಚದ ಯೋಜನೆ

ಮನೆ ಬಾಗಿಲಿಗೇ ಮಾಸಾಶನ: ಅಶಕ್ತರು, ವೃದ್ಧರು, ವಿಧವೆಯರು, ವಿಶೇಷ ಚೇತನರಿಗೆ ಸರ್ಕಾರದ ದತ್ತಾಂಶ ಆಧರಿಸಿ ಪಿಂಚಣಿ ನೀಡುವ ಮನೆ ಬಾಗಿಲಿಗೇ ಮಾಸಾಶನ ಅಭಿಯಾನಕ್ಕೆ ಚಾಲನೆ. ಮಹಿಳಾ ದಿನಕ್ಕೆ ಬಂಪರ್: ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ ಮಹಿಳೆಯರಿಗೆ ಭರ್ಜರಿ ಉಡುಗೊರೆ ಸಿಕ್ಕಿದೆ.

  • ಸರ್ಕಾರಿ ನೌಕರರಿಗೆ 6 ತಿಂಗಳ ಪ್ರಸೂತಿ ರಜೆ, ಮಕ್ಕಳ ಆರೈಕೆಗೂ 6 ತಿಂಗಳು ರಜೆ
  • ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ 2 ಶಿಶುಪಾಲನಾ ಕೇಂದ್ರಗಳ ಸ್ಥಾಪನೆ
  • ಮಹಿಳಾ ಉದ್ಯಮಿಗಳಿಗೆ ಶೇ.4 ಬಡ್ಡಿ ದರದಲ್ಲಿ 2 ಕೋಟಿ ರೂ. ವರೆಗೆ ಸಾಲ
  • ಹಪ್ಪಳ, ಉಪ್ಪಿನಕಾಯಿ ತಯಾರಿಗೆ ಆನ್​ಲೈನ್ ಮಾರುಕಟ್ಟೆ ಸೌಲಭ್ಯ
  • ವನಿತಾ ಸಂಗಾತಿ ಹೆಸರಲ್ಲಿ ಬಿಎಂಟಿಸಿ ಬಸ್​ಗಳಲ್ಲಿ ರಿಯಾಯಿತಿ ದರದಲ್ಲಿಪಾಸ್
  • ನಿರ್ಭಯಾ ಯೋಜನೆ ಅಡಿ ಬೆಂಗಳೂರಲ್ಲಿ 7500 ಸಿ.ಸಿ.ಕ್ಯಾಮರಾಗಳ ಅಳವಡಿಕೆ
  • ಎಪಿಎಂಸಿಗಳಲ್ಲಿ ಮಹಿಳೆಯರಿಗೆ ಶೇ.10 ಮೀಸಲು ಸೌಲಭ್ಯ ಕಲ್ಪಿಸುವುದು

ಇತರ ಮುಖ್ಯಾಂಶಗಳು

  • ಜಿಲ್ಲೆಗೆ ಒಂದು ಗೋ ಶಾಲೆ
  • ಕುರಿಗಳು ಸತ್ತಲ್ಲಿ 5 ಸಾವಿರ ರೂ. ಪರಿಹಾರ ನೀಡುವ ಸಿದ್ದರಾಮಯ್ಯ ಸರ್ಕಾರದ ಅನುಗ್ರಹ ಯೋಜನೆ ಮುಂದುವರಿಕೆ
  • ಅಯೋಧ್ಯೆಯಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ 10 ಕೋಟಿ ರೂ.
  • ಕೃಷಿ ವಿವಿಗಳಲ್ಲಿ ರೈತರ ಮಕ್ಕಳಿಗಿರುವ ಮೀಸಲಾತಿ ಶೇ.40-ಶೇ.50ಕ್ಕೆ ಏರಿಕೆ
  • ರಂಗಾಯಣಗಳ ಮೂಲಕ ಪರ್ವ ನಾಟಕ ಪ್ರದರ್ಶನಕ್ಕೆ 1 ಕೋಟಿ ರೂ.
  • 35ರಿಂದ 45 ಲಕ್ಷ ರೂ.ವರೆಗಿನ ಅಪಾರ್ಟ್ ಮೆಂಟ್ ಮೊದಲನೇ ನೋಂದಣಿಗೆ ಮುದ್ರಾಂಕ ಶುಲ್ಕ ಶೇ.3ಕ್ಕೆ ಇಳಿಕೆ

ಯಾರಿಗೂ ಒಂದು ರೂಪಾಯಿ ತೆರಿಗೆ ಹಾಕಿಲ್ಲ. ಯಾರಿಗೂ ಹೊರೆಯಾಗದ ಈ ಬಜೆಟ್ ಇತಿಹಾಸದಲ್ಲೇ ಮೊದಲು. | ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ