ಬೆಂಗಳೂರು: ಸಿ.ಆರ್.ರಾವ್ ಎಂದೇ ಖ್ಯಾತರಾಗಿದ್ದ ಗಣಿತ ಮತ್ತು ಸಂಖ್ಯಾಶಾಸ್ತ್ರಜ್ಞರಾದ ಕಲ್ಕಂಪುಡಿ ರಾಧಾಕೃಷ್ಣ ರಾವ್ ಬುಧವಾರ (ಆಗಸ್ಟ್ 23) ಬೆಳಗ್ಗೆ ಅಮೆರಿಕದಲ್ಲಿ ನಿಧನರಾದರು. ಹಲವು ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದ ಸಿ.ಆರ್.ರಾವ್ ಅವರಿಗೆ 102 ವರ್ಷ ವಯಸ್ಸಾಗಿತ್ತು.
ರಾಧಾಕೃಷ್ಣ ಅವರು ಮೂಲತಃ ಬಳ್ಳಾರಿ ಜಿಲ್ಲೆಯವರು. ಹೂವಿನ ಹಡಗಲಿಯಲ್ಲಿ ತೆಲುಗು ಕುಟುಂಬದಲ್ಲಿ ಜನಿಸಿದರು. ಗುಡೂರು, ನಂದಿಗಾಮ ಮತ್ತು ವಿಶಾಖಪಟ್ಟಣದಲ್ಲಿ ಶಾಲಾ ಶಿಕ್ಷಣ ಮುಗಿಸಿದ ರಾಧಾಕೃಷ್ಣ ಅವರು ಆಂಧ್ರ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರ ವಿಷಯದಲ್ಲಿ ಎಂಎಸ್ಸಿ ಮತ್ತು 1943ರಲ್ಲಿ ಕೋಲ್ಕತ್ತ ವಿಶ್ವವಿದ್ಯಾಲಯದಲ್ಲಿ ಸಂಖ್ಯಾಶಾಸ್ತ್ರದಲ್ಲಿ ಎಂಎ ಪದವಿ ಪಡೆದರು. ಆ ನಂತರ 1948ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಕಿಂಗ್ಸ್ ಕಾಲೇಜಿನಲ್ಲಿ ಪಿಎಚ್‌ಡಿ ಪದವಿ ಪಡೆದರು.
ಗಣಿತ ಮತ್ತು ಸಂಖ್ಯಾಶಾಸ್ತ್ರ ಕ್ಷೇತ್ರದಲ್ಲಿ ರಾವ್ ಅವರು ಮಾಡಿರುವ ಸಾಧನೆಗಾಗಿ 1968ರಲ್ಲಿ ಪದ್ಮಭೂಷಣ, 2001ರಲ್ಲಿ ಕೇಂದ್ರ ಸರ್ಕಾರ ಭಾರತದ ಅತ್ಯುನ್ನತ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
75 ವರ್ಷಗಳ ಹಿಂದೆ ಸಂಖ್ಯಾಶಾಸ್ತ್ರದಲ್ಲಿ ಕ್ರಾಂತಿಯನ್ನು ಮಾಡಿದ್ದ ರಾವ್ ಅವರ ಅಪಾರ ಕೊಡುಗೆಯ ಸ್ಮರಣಾರ್ಥ 2023ರ ಸಾಲಿನ ನೊಬೆಲ್ ಪ್ರಶಸ್ತಿಗೆ ಸಮಾನವಾದ ಇಂಟರ್‌ನ್ಯಾಷನಲ್ ಪ್ರೈಝ್ ಆಫ್ ಸ್ಟ್ರಾಟಸ್ಟಿಕ್ಸ್ 2023 ಪ್ರಶಸ್ತಿಗೆ ಭಾಜನರಾಗಿದ್ದರು.
ಸಿ.ಆರ್ ರಾವ್ ಅವರು 19 ದೇಶಗಳಿಂದ 39 ಡಾಕ್ಟರೇಟ್ ಪಡೆದಿದ್ದಾರೆ. ಜತೆಗೆ, 477 ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದು, 15 ಪುಸ್ತಕಗಳನ್ನು ಕೂಡ ಬರೆದಿದ್ದಾರೆ. 2002ರಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ಜಾರ್ಜ್ ಬುಷ್ ಅವರು ದೇಶದ ಅತ್ಯುನ್ನತ ಪ್ರಶಸ್ತಿ ‘ನ್ಯಾಷನಲ್ ಮೆಡಲ್ ಆಫ್ ಸೈನ್ಸ್’ ಅನ್ನು ನೀಡಿ ಗೌರವಿಸಿದ್ದರು.
ಸಂತಾಪ ಸೂಚಿಸಿದ ಸಿಎಂ
ಸಿ ಆರ್ ರಾವ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ.
"ಜಗದ್ವಿಖ್ಯಾತ ಗಣಿತ ಶಾಸ್ತ್ರಜ್ಞರು, ಕರ್ನಾಟಕ ಮೂಲದ ಸಂಖ್ಯಾಶಾಸ್ತ್ರ ಪರಿಣಿತರು ಆದ ಸಿ.ಆರ್ ರಾವ್ ಅವರ ನಿಧನದ ಸುದ್ದಿ ಕೇಳಿ ನೋವಾಯಿತು.
ಗಣಿತ ಕ್ಷೇತ್ರದಲ್ಲಿ ಅವರು ಮಾಡಿರುವ ಅಪಾರ ಸಾಧನೆಗಾಗಿ ದೇಶದ ಅತ್ಯುನ್ನತ ಪ್ರಶಸ್ತಿ 'ಪದ್ಮವಿಭೂಷಣ' ಮಾತ್ರವಲ್ಲದೆ, 'ಇಂಟರ್ ನ್ಯಾಷನಲ್ ಪ್ರೈಸ್ ಆಫ್ ಸ್ಟ್ಯಾಟಿಸ್ಟಿಕ್ಸ್ - 2023', 'ನ್ಯಾಷನಲ್ ಮೆಡಲ್ ಆಫ್ ಸೈನ್ಸ್' ಇನ್ನು ಮುಂತಾದ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು ಭಾರತದ ಕೀರ್ತಿ ಹೆಚ್ಚಿಸಿದ್ದರು. ಇಂತಹ ಮೇರು ಸಾಧಕರ ನಿಧನ ನಾಡಿಗೆ ತುಂಬಿಬಾರದ ನಷ್ಟ.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬವರ್ಗಕ್ಕೆ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ '' ಎಂದು ಟ್ವೀಟ್ ಮಾಡಿದ್ದಾರೆ.