ಶೃಂಗೇರಿಯಲ್ಲಿ ತಾಲೂಕು ಬ್ರಾಹ್ಮಣ ಮಹಾಸಭಾ ಆಯೋಜಿಸಿದ್ದ ಸಭೆಯಲ್ಲಿ ಸೌರಶಕ್ತಿ ವಿದ್ಯುತ್ ಘಟಕವನ್ನು ಶ್ರೀಮಠದ ಆಡಳಿತಾಧಿಕಾರಿ ಪಿ.ಎ.ಮುರಳಿ ಉದ್ಘಾಟಿಸಿದರು. ಬಾಲಗಂಗಾಧರ್, ವಿನಯ್ ಹಳಕ, ವಿವೇಕಾನಂದ ಸುಂಕುರ್ಡಿ, ಕಿರಣ್ ಇತರರಿದ್ದರು. 
ನ್ಯೂಸ್

ಸಮಾಜದ ಉನ್ನತೀಕರಣಕ್ಕೆ ಸಂಘಟನೆಗಳು ಕಾರ್ಯನಿರ್ವಹಿಸಲಿ

ಜಿ. ಗಜೇಂದ್ರ

ಶೃಂಗೇರಿ: ಸಮಾಜದ ಉನ್ನತೀಕರಣಕ್ಕೆ ಸಂಘಟನೆಗಳು ನಿರಂತರ ಕಾರ್ಯನಿರ್ವಹಿಸಬೇಕು. ಆಗ ಮಾತ್ರ ಜನಮಾನಸದಲ್ಲಿ ಸಂಘ-ಸಂಸ್ಥೆಗಳು ಶಾಶ್ವತ ಸ್ಥಾನ ಗಳಿಸಲು ಸಾಧ್ಯ ಎಂದು ಶ್ರೀಮಠದ ಆಡಳಿತಾಧಿಕಾರಿ ಪಿ.ಎ.ಮುರಳಿ ತಿಳಿಸಿದರು.
ತಾಲೂಕು ಬ್ರಾಹ್ಮಣ ಮಹಾಸಭಾ ಶನಿವಾರ ವಿದ್ಯಾಭಾರತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಕರ್ಣಾಟಕ ಬ್ಯಾಂಕ್ ಪ್ರಾಯೋಜಿಸಿರುವ ಸೌರಶಕ್ತಿ ವಿದ್ಯುತ್ ಘಟಕ ಉದ್ಘಾಟಿಸಿ ಮಾತನಾಡಿದರು.
ಸಮುದಾಯಕ್ಕೆ ಕೊಡುಗೆ ನೀಡುವ ದಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಅವರು ನೀಡಿದ ಸೌಲಭ್ಯಗಳನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಬೇಕು ಎಂದರು.
ಶಿವಮೊಗ್ಗ ಕರ್ಣಾಟಕ ಬ್ಯಾಂಕ್ ಸಹಾಯಕ ಮಹಾಪ್ರಬಂಧಕ ಎಚ್.ಎ.ನಾಗರಾಜ್ ಮಾತನಾಡಿ, 1926ರಲ್ಲಿ ಮಂಗಳೂರಿನಲ್ಲಿ ಪ್ರಾರಂಭಗೊಂಡ ಬ್ಯಾಂಕ್ ಪ್ರಸ್ತುತ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. 1960ರಲ್ಲಿ ಶೃಂಗೇರಿ, ಕೊಪ್ಪ, ಕಳಸ ಮುಂತಾದ ಕಡೆ ಶಾರದಾ ಬ್ಯಾಂಕ್ ಪ್ರಾರಂಭಗೊಂಡು ಬಳಿಕ ಕರ್ಣಾಟಕ ಬ್ಯಾಂಕ್ ಜತೆ ವಿಲೀನಗೊಂಡಿದೆ ಎಂದರು.
ಹಿರಿಯ ಶ್ರೀಗಳ ಆಪ್ತ ಸಹಾಯಕ ಶಂ.ನ.ಕೃಷ್ಣಮೂರ್ತಿ ಮಾತನಾಡಿ, ಸಂಸ್ಕೃತಿ, ಸಂಸ್ಕಾರದ ಜತೆ ಉನ್ನತ ಧ್ಯೇಯವನ್ನು ನಾವು ಅಳವಡಿಸಿಕೊಂಡರೆ ಮಾತ್ರ ಸಮಾಜದಲ್ಲಿ ಸುಸಂಸ್ಕೃತ ವಾತಾವರಣ ಕಾಣಲು ಸಾಧ್ಯ. ಶಿಕ್ಷಣ ವಿದ್ಯಾರ್ಥಿಗಳಿಗೆ ಉದಾತ್ತ ಭಾವವನ್ನು ನೀಡಬೇಕು. ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಸಮಾರಂಭದಲ್ಲಿ ಮಹಾಸಭಾದ ಅಧ್ಯಕ್ಷ ಜಿ.ಎಂ.ಸತೀಶ್, ಉಪಾಧ್ಯಕ್ಷರಾದ ನಾಗಭೂಷಣ್, ಮಹಾಬಲಭೀಡೆ, ಪ್ರಧಾನ ಕಾರ್ಯದರ್ಶಿ ಬಿ.ಎಲ್.ರವಿಕುಮಾರ್, ಕೋಶಾಧ್ಯಕ್ಷ ಸುಧೀಂದ್ರ ಬೆಟ್ಟಗದ್ದೆ, ಮಹಿಳಾ ಘಟಕದ ಅಧ್ಯಕ್ಷೆ ಬಿ.ಕವನಾ, ಸ್ಥಳೀಯ ಬ್ಯಾಂಕ್ ವ್ಯವಸ್ಥಾಪಕ ಕಿರಣ್ ಇದ್ದರು.