ನ್ಯೂಸ್

ಕರ್ನಾಟಕ ಬಂದ್‌ಗೆ ರಾಣೆಬೆನ್ನೂರಿನಲ್ಲಿ ಮಿಶ್ರ ಪ್ರತಿಕ್ರಿಯೆ; ಕನ್ನಡ, ರೈತಪರ ಸಂಘಟನೆಗಳಿಂದ ಪ್ರತಿಭಟನೆ

ರಾಣೆಬೆನ್ನೂರ: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸುವಂತೆ ಆಗ್ರಹಿಸಿ ಕನ್ನಡಪರ ಹಾಗೂ ರೈತಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಶುಕ್ರವಾರ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ನಗರದಲ್ಲಿ ಎಂದಿನಂತೆ ಹೋಟೆಲ್, ಅಂಗಡಿ ಮುಂಗಟ್ಟುಗಳು ತೆರೆದುಕೊಂಡಿದ್ದವು. ಆದರೆ, ನಗರದ ಹೃದಯ ಭಾಗವಾದ ಪೋಸ್ಟ್ ವೃತ್ತ, ಎಂ.ಜಿ. ರಸ್ತೆ ಹಾಗೂ ಬಸ್ ನಿಲ್ದಾಣದ ಪಕ್ಕದ ರಸ್ತೆಯ ಅಂಗಡಿಗಳನ್ನು ಕೆಲಕಾಲ ಬಂದ್ ಮಾಡಲಾಗಿತ್ತು. ಸಾರಿಗೆ ಸಂಸ್ಥೆ ಬಸ್‌ಗಳು, ಆಟೋರಿಕ್ಷಾ ಎಂದಿನಂತೆ ಓಡಾಡಿದವು.
ಮಧ್ಯಾಹ್ನ 12 ಗಂಟೆ ಸಮಯಕ್ಕೆ ರೈತ ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನಗರದ ಬಸ್ ನಿಲ್ದಾಣದ ಎದುರು ಜಮಾಗೊಂಡು ಪ್ರತಿಭಟನೆ ನಡೆಸಿದರು. ಆಗ ಸುತ್ತಲಿನ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲಾಗಿತ್ತು. ಮುಂಜಾಗ್ರತ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಪ್ರತಿಭಟನೆ: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸಲು ಆಗ್ರಹಿಸಿ ಕನ್ನಡಪರ ಹಾಗೂ ರೈತಪರ ಸಂಘಟನೆಗಳ ಕಾರ್ಯಕರ್ತರು ನಗರದ ಬಸ್ ನಿಲ್ದಾಣ ಹಾಗೂ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಮಾತನಾಡಿ, ರಾಜ್ಯದ ರೈತರು ಬರಗಾಲದಿಂದ ಬೇಸತ್ತು ಹೋಗಿದ್ದಾರೆ. ಇಂಥ ಸಮಯದಲ್ಲಿ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುವ ಅಗತ್ಯವಿರಲಿಲ್ಲ.
ಆದರೆ, ಕಾವೇರಿ ನಿರ್ವಹಣಾ ಮಂಡಳಿ 15 ದಿನಗಳ ಕಾಲ 5 ಸಾವಿರ ಕ್ಯೂಸೆಕ್ ನೀರು ಹರಿಸಲು ಆದೇಶಿಸಿರುವುದು ಸರಿಯಲ್ಲ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಈ ಕುರಿತು ಗಮನ ಹರಿಸಬೇಕು. ತಮಿಳನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಸ್ಥಳಕ್ಕೆ ಬಂದ ತಹಸೀಲ್ದಾರ್ ಎಚ್.ಎನ್. ಶಿರಹಟ್ಟಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪ್ರಮುಖರಾದ ನಿತ್ಯಾನಂದ ಕುಂದಾಪುರ, ಕೋಟ್ರೇಶಪ್ಪ ಎಮ್ಮಿ, ಪಾಲಾಕ್ಷಪ್ಪ ಕಡೇಮನಿ, ಗೋಪಿ ಕುಂದಾಪುರ, ದೇವರಾಜ ಕಲಾಲ, ಕಿರಣ ಗುಳೇದ, ಎಚ್.ಆರ್. ಶಿವಕುಮಾರ, ಚಂದ್ರಪ್ಪ ಬತ್ತಿಕೊಪ್ಪ ಹಾಗೂ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ, ರಾಜ್ಯ ರೈತ ಸಂಘ ಹಸಿರು ಸೇನೆ, ಆಟೋರಿಕ್ಷಾ ಮಾಲೀಕರು ಹಾಗೂ ಚಾಲಕರು ಮತ್ತಿತರರು ಪಾಲ್ಗೊಂಡಿದ್ದರು.